ಅಧಿಕಾರಿಗಳು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ: ಜಿ.ಪಂ ಅಧ್ಯಕ್ಷೆ ಬಾಯಕ್ಕ ಮೇಟಿ

0
12

ಬಾಗಲಕೋಟೆ: ಜಿಲ್ಲಾ ಪಂಚಾಯತ ವ್ಯಾಪ್ತಿಯಲ್ಲಿ ಬರುವ ಎಲ್ಲ ಇಲಾಖೆಯ ಅಧಿಕಾರಿಗಳು ಜವಾಬ್ದಾರಿಯಿಂದ ಕಾರ್ಯನಿರ್ವಹಿಸುವಂತೆ ಜಿ.ಪಂ ಅಧ್ಯಕ್ಷೆ ಬಾಯಕ್ಕ ಮೇಟಿ ಸೂಚಿಸಿದರು.
ಜಿಲ್ಲಾ ಪಂಚಾಯತ ಸಭಾಭವನದಲ್ಲಿಂದು ಜರುಗಿದ ಜಿ.ಪಂ ಜೂನ್-೨೦೧೯ರ ಮಾಹೆಯ ಕರ್ನಾಟಕ ಅಭಿವೃಧ್ದಿ ಕಾರ್ಯಕ್ರಮಗಳ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಜಿಲ್ಲಾ ಮಟ್ಟದ ಅಧಿಕಾರಿ ಆಸಕ್ತಿಯಿಂದ ಕೆಲಸ ನಿರ್ವಹಿಸಬೇಕು. ಮಧ್ಯಾಹ್ನ ೩ ರಿಂದ ೫ ಗಂಟೆವರೆಗೆ ಸಾರ್ವಜನಿಕರ ಭೇಟಿಗೆ ಅವಕಾಶ ಕಲ್ಪಿಸಬೇಕು. ಈ ಸಮಯದಲ್ಲಿ ಸಾರ್ವಜನಿಕರ ದೂರು, ಅಹವಾಲುಗಳನ್ನು ಆಲಿಸುವ ಕಾರ್ಯವಾಗಬೇಕು ಎಂದು ಸೂಚಿಸಿದರು. ಸಭೆಗೆ ಬರುವಾಗ ಸಂಪೂರ್ಣ ಮಾಹಿತಿಯೊಂದಿಗೆ ಪೂರ್ವ ತಯಾರಿಯಲ್ಲಿ ಬರಬೇಕು. ಸಭೆಯಲ್ಲಿ ಕೇಳಿದ ಪ್ರಶ್ನೆಗಳಿಗೆ ಸಮರ್ಪಕವಾಗಿ ಉತ್ತರ ನೀಡಬೇಕು. ಕೇಳಿದ ಮಾಹಿತಿಗೆ ಹಾರಿಕೆ ಉತ್ತರ ನೀಡುವವರ ವಿರುದ್ದ ಸೂಕ್ತ ಕ್ರಮಕೈಗೊಳ್ಳಲಾಗುವುದೆಂದು ಎಚ್ಚರಿಗೆ ನೀಡಿದರು. ಜಿಲ್ಲಾ ಪಂಚಾಯತ ಪ್ರತಿಯೊಂದು ಸಭೆಗೆ ಸಂಬಂಧಿಸಿದ ಪ್ರಗತಿಯ ಮಾಹಿತಿಯನ್ನು ಸಭೆಯ ಒಂದು ವಾರದ ಪೂರ್ವದಲ್ಲಿ ಜಿ.ಪಂ ಸದಸ್ಯರಿಗೆ ಮಾಹಿತಿ ತಲುಪಿಸುವ ವ್ಯವಸ್ಥೆಯಾಗಬೇಕೆಂದು ಸೂಚಿಸಿದರು. ಅಲ್ಲದೇ ಕಳೆದ ಸಾಲಿನಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ಖರ್ಚು ಮಾಡಿದ ವಿವರವನ್ನು ನೀಡುವಂತೆ ತಿಳಿಸಿದ ಅಧ್ಯಕ್ಷರು ಕೃಷಿ, ತೋಟಗಾರಿಕೆ, ರೇಷ್ಮೆ, ಮಹಾತ್ಮಾಗಾಂಧಿ ಉದ್ಯೊÃಗ ಖಾತರಿ ಯೋಜನೆ, ಗ್ರಾಮೀಣ ಕುಡಿಯುವ ನೀರು ಸೇರಿದಂತೆ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ಮಾಡಲಾಯಿತು. ಕೃಷಿಗೆ ಸಂಬಂದಿಸಿದಂತೆ ಪ್ರಸ್ತುತ ಮಾಸಿಕ ಅಂತ್ಯಕ್ಕೆ ಶೇ.೧೧೪.೭ ರೈತರಿಗೆ ಬೀಜ ವಿತರಣೆ ಮಾಡಲಾಗಿದೆ. ಅದರ ಜೊತೆಗೆ ಶೇ.೬೫ ರಷ್ಟು ಗೊಬ್ಬರ ವಿತರಿಸಲಾಗಿದೆ ಎಂದು ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ರಾಜಶೇಖರ ವಿಜಾಪೂರ ಸಭೆಗೆ ಮಾಹಿತಿ ನೀಡಿದರು.

ಜಿಲ್ಲೆಯ ಪ್ರತಿ ತಾಲೂಕಿನಲ್ಲಿ ಬಿತ್ತನೆ ಬೀಜಗಳನ್ನು ಎಷ್ಟು ವಿತರಿಸಲಾಗಿದೆ. ಹೆಸರು ಬಿತ್ತನೆ ಎಷ್ಟು ಆಗಿದೆ. ಸಂಪೂರ್ಣ ಮಾಹಿತಿಯನ್ನು ನೀಡುವಂತೆ ಜಿ.ಪಂ ಅದ್ಯಕ್ಷರು ತಿಳಿಸಿದಾಗ ಜಿಲ್ಲೆಯ ಬದಾಮಿ, ಹುನಗುಂದ ಮತ್ತು ಬಾಗಲಕೋಟೆಯಲ್ಲಿ ಹೆಸರು ಹೆಚ್ಚಿನ ಪ್ರಮಾಣದಲ್ಲಿ ಬಿತ್ತನೆಯಾಗಿದೆ. ಜೂನ್ ತಿಂಗಳಲ್ಲಿ ವಾಡಿಕೆಗಿಂತ ಹೆಚ್ಚಿಗೆ ಮಳೆಯಾಗಿದೆ ಎಂದು ಸಭೆಗೆ ತಿಳಿಸಲಾಯಿತು. ಮುಂದಿನ ಸಭೆಗೆ ಬರುವಾಗ ಕಳೆದ ಸಾಲಿನ ಮಾಹಿತಿಯೊಂದಿಗೆ ಸಮಗ್ರ ಮಾಹಿತಿಯೊಂದಿಗೆ ಸಭೆಗೆ ಹಾಜರಾಗಬೇಕು. ಇಲ್ಲವಾದಲ್ಲಿ ಸೂಕ್ತ ಕ್ರಮಕೈಗೊಳ್ಳಲಾಗುವುದೆಂದು ಬಾಯಕ್ಕ ಮೇಟಿ ಸೂಚಿಸಿದರು. ತೋಟಗಾರಿಕೆ ಇಲಾಖೆಯವರು ಪ್ರತಿ ವರ್ಷ ವಿವಿಧ ಯೋಜನೆಗಳಡಿ ಖರ್ಚು ಮಾಡಿದ ವಿವರ ಹಾಗೂ ಯೋಜನೆಗಳ ಪ್ರಗತಿ ವಿವರಗಳ ಸಂಪೂರ್ಣ ಮಾಹಿತಿಯನ್ನು ಸಭೆಗೆ ನೀಡಬೇಕು. ಕಳೆದ ಸಾಲಿನಲ್ಲಿ ಒಟ್ಟು ಎಷ್ಟು ಅನುದಾನ ಬಿಡುಗಡೆಯಾಗಿದೆ. ಆ ಪೈಕಿ ಎಷ್ಟು ಅನುದಾನ ಖರ್ಚು ಮಾಡಿ ಯಾವ ಯೋಜನೆಗಳಡಿ ಫಲಾನುಭವಗಳಿಗೆ ಲಾಭ ಪಡೆದ ವಿವರವನ್ನು ನೀಡಬೇಕು. ಪ್ರಗತಿ ಕೇವಲ ಅಂಕಿ-ಸಂಖ್ಯೆಯಲ್ಲಿರದೇ ಸರಕಾರ ತಂದಿರುವ ಯೋಜನೆಯ ಸಂಪೂರ್ಣ ಅನುಷ್ಠಾನಗೊಳ್ಳಬೇಕು ಎಂದರು.
ಅರಣ್ಯ ಇಲಾಖೆಯ ವತಿಯಿಂದ ೪೨೬ ಹೆಕ್ಟರ ಪ್ರದೇಶದಲ್ಲಿ ವಿವಿಧ ಸಸಿಗಳನ್ನು ಬೆಳಸಲು ಗುರಿ ಹೊಂದಲಾಗಿದ್ದು, ಈ ವರಗೆ ಒಟ್ಟು ೧.೭೦ ಲಕ್ಷ ಗಿಡಗಳನ್ನು ನೆಡಲಾಗಿದೆ ಎಂದು ಸಭೆಗೆ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಸಭೆಗೆ ತಿಳಿಸಿದಾಗ ಪ್ರತಿ ವರ್ಷ ಎಷ್ಟು ಸಸಿಗಳನ್ನು ಬೆಳೆಸಲಾಗುತ್ತಿದೆ. ಎಷ್ಟು ಗಿಡಗಳನ್ನು ನೆಡಲಾಗುತ್ತಿರುವ ಮಾಹಿತಿಯನ್ನು ನೀಡಬೇಕು. ಅಲ್ಲದೇ ಅವುಗಳ ಪೋಷಿಸಲು ಕೈಗೊಂಡಿರುವ ಕ್ರಮಗಳ ಹಾಗೂ ಈಗಾಗಲೇ ಎಷ್ಟು ಗಿಡಗಳು ನೆಟ್ಟ ಗಿಡಗಳಲ್ಲಿ ಎಷ್ಟು ಗಿಡಗಳು ಬೆಳೆದಿರುವ ಮಾಹಿತಿಯನ್ನು ಮುಂದಿನ ಸಭೆಯಲ್ಲಿ ನೀಡಲು ಜಿ.ಪಂ ಉಪಾಧ್ಯಕ್ಷರು ಅಧಿಕಾರಿಗಳಿಗೆ ತಿಳಿಸಿದರು.

ಜಿಲ್ಲೆಯಲ್ಲಿ ಜಲಶಕ್ತಿ ಅಭಿಯಾನದಡಿ ರೈತರ ಹೊಲಗಳಲ್ಲಿ ಕೃಷಿ ಹೊಂಡಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಈ ಅಭಿಯಾನದ ಪರಿಶೀಲನೆಗಾಗಿ ಕೇಂದ್ರದಿಂದ ೩ ಜನ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದ್ದು, ಈಗಾಗಲೇ ಜಿಲ್ಲೆಗೆ ಆಗಮಿಸಿ ಜಿಲ್ಲೆಯಲ್ಲಿ ಜಲಶಕ್ತಿಗಾಗಿ ಕೈಗೊಂಡ ಕಾರ್ಯಕ್ರಮಗಳ ಮಾಹಿತಿಯನ್ನು ಪಡೆದುಕೊಂಡಿದ್ದಾರೆ. ಅಲ್ಲದೆ ತೋಟಗಾರಿಕೆ ಹಾಗು ಕೃಷಿ ಜಮೀನುಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿರುವುದಾಗಿ ಜಿ.ಪಂ ಸಿಇಓ ಗಂಗೂಬಾಯಿ ಮಾನಕರ ಸಭೆಗೆ ತಿಳಿಸಿದರು. ಈ ಕಾರ್ಯಕ್ಕೆ ಉದ್ಯೊÃಗ ಖಾತ್ರಿ ಯೋಜನೆಯಡಿ ಹುನಗುಂದ ಮತ್ತು ಬಾದಾಮಿ ತಾಲೂಕಿನಲ್ಲಿ ಹೆಚ್ಚಿನ ಮಾನವ ದಿನಗಳ ಬೇಡಿಕೆಯನ್ನು ಇಟ್ಟಿರುವುದಾಗಿ ತಿಳಿಸಿದರು. ನಂತರ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ಮಾಡಲಾಯಿತು.
ಸಭೆಯಲ್ಲಿ ಜಿ.ಪಂ ಉಪಾಧ್ಯಕ್ಷ ಮುತ್ತಪ್ಪ ಕೋಮಾರ, ಜಿ.ಪಂ ಉಪಕಾರ್ಯದರ್ಶಿ ವಿ.ಎಸ್.ಹಿರೇಮಠ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

loading...