ಹೈದ್ರಾಬಾದ್, ಸೆ.24-ಆಂಧ್ರ ವಿಭಜನೆ- ತೆಲಂಗಾಣ ರಾಜ್ಯ ರಚನೆ ವಿರುದ್ಧದ ಪ್ರತಿಭಟನೆಯ ಕಾವು ತಾರಕಕ್ಕೇರಿದ್ದು, ಸೀಮಾಂಧ್ರದ 13 ಜಿಲ್ಲೆಗಳ ಬಂದ್ನಿಂದಾಗಿ ಈ ಭಾಗದಲ್ಲಿ ಜನ ಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಅಲ್ಲದೆ, ಬಂದ್ ಬಿಸಿ ತಿಮ್ಮಪ್ಪನ ಬುಡಕ್ಕೂ ತಲುಪಿದ್ದು, ಸಾವಿರಾರು ಭಕ್ತರು ವಾಹನಗಳಿಲ್ಲದೆ ಪರದಾಡುತ್ತಿದ್ದಾರೆ.
ಪ್ರಮುಖವಾಗಿ ತಿರುಪತಿಗೆ ಹೋಗುವ ಎಲ್ಲಾ ಬಸ್ಗಳನ್ನೂ ಪ್ರತಿಭಟನಾಕಾರರು ತಡೆಹಿಡಿದಿದ್ದು, ದ್ವಿಚಕ್ರ, ತ್ರಿಚಕ್ರ ವಾಹನಗಳೂ ರಸ್ತೆಗಿಳಿಯುವಂತಿಲ್ಲ. ಜತೆಗೆ ಇದುವರೆಗೆ ಟಿಟಿಡಿ ಆಡಳಿತ ಮಂಡಳಿಯವರು ದೇವಸ್ಥಾನದ ಬಸ್ಗಳನ್ನು ಓಡಿಸಿ ಕೆಲ ಮಟ್ಟಿಗಾದರೂ ಭಕ್ತರಿಗೆ ನೆರವಾಗುತ್ತಿದ್ದರು. ಆದರೆ, ಈ ಬಾರಿ ಪ್ರತಿಭಟನಾಕಾರರು ಅದಕ್ಕೂ ಅಡ್ಡಿ ಪಡಿಸಿದ್ದು, ಒಂದು ಸೈಕಲ್ ಕೂಡ ರಸ್ತೆ ಮೇಲೆ ಸಂಚರಿಸದಂತಾಗಿದೆ. ತಿರುಪತಿಯ ಉಚಿತ ಬಸ್ ಸೇವೆಯೂ ಸ್ಥಗಿತಗೊಂಡಿದೆ.
ತಿರುಮಲದಲ್ಲಿ ಸಿಕ್ಕಿ ಹಾಕಿಕೊಂಡಿರುವ ಸಾವಿರಾರು ಮಂದಿ ಭಕ್ತರಿಗೆ ಊಟ, ತಿಂಡಿ ವ್ಯವಸ್ಥೆಯನ್ನು ಕಲ್ಪಿಸಲಾಗುವುದು, ಯಾರೂ ಚಿಂತಿಸುವ ಅಗತ್ಯವಿಲ್ಲ ಎಂದು ಟಿಟಿಡಿ ಆಡಳಿತ ಮಂಡಳಿ ಪ್ರಕಟಿಸಿದೆ.
ಆಂಧ್ರ ವಿಭಜನೆ ಖಂಡಿಸಿ ಇದುವರೆಗೆ ಪ್ರತಿಭಟನೆಗಳು ನಡೆದಿವೆಯಾದರೂ, ಇಂದು ಸಮೈಕ್ಯ ರಾಷ್ಟ್ತ್ರ ಪರಿರಕ್ಷಣಾ ವೇದಿಕೆ ಕರೆದಿರುವ ಬಂದ್ ಕಳೆದ 38 ವರ್ಷಗಳ ಅವಧಿಯಲ್ಲಿಯೇ ಬೃಹತ್ ಪ್ರತಿಭಟನೆ ಎಂದು ಹೇಳಲಾಗಿದೆ.