ಇಂಜಿನೀಯರ್ ಗೈರು ಹಾಜರಿಯಿಂದ ಕೆರಳಿ ಕೊಠಡಿಗೆ ಬೀಗ

0
39

ಕನ್ನಡಮ್ಮ ಸುದ್ದಿ-ಕಾರವಾರ: ಕರ್ತವ್ಯಕ್ಕೆ ಸತತವಾಗಿ ಗೈರು ಹಾಜರಾಗಿದ್ದರಿಂದ ಕೆರಳಿ ಸ್ವತಃ ಸಹಾಯಕ ಕಾರ್ಯನಿರ್ವಾಹಕ ಇಂಜಿನೀಯರ್ ಮೋಹನ್ ರಾಜ್ ಅವರು ತಮ್ಮ ಕಚೇರಿಯ ಸಹಾಯಕ ಇಂಜಿನೀಯರ್ ಅರವಿಂದ ರಾವ್ ಅವರ ಕೊಠಡಿಗೆ ಬೀಗ ಜಡಿದು ಇಲ್ಲಿಯ ನಗರಸಭೆಯಲ್ಲಿ ಸುಮಾರು ಅರ್ಧಗಂಟೆಗೂ ಹೆಚ್ಚು ಕಾಲ ಹೈ ಡ್ರಾಮಾ ಸೃಷ್ಠಿ ಮಾಡಿದರು.
ಈ ಬಗ್ಗೆ ಮೋಹನ್ ರಾಜ್ ಮಾಧ್ಯಮದವರಿಗೆ ಮಾಹಿತಿ ನೀಡಿ ನಗರಸಭೆಯ ಸಹಾಯಕ ಇಂಜಿನೀಯರ್ ಅರವಿಂದ ರಾವ್ ಮತ್ತಿಬ್ಬರು ನಗರಸಭೆಯ ಸಿಬ್ಬಂದಿಗಳು ಕಳೆದ ನಾಲ್ಕೈದು ದಿನಗಳಿಂದ ಕಚೇರಿಗೂ ಸಹ ಬಾರದೇ ಸತತವಾಗಿ ಗೈರು ಹಾಜರಾಗಿದ್ದಾರೆ. ಕಚೇರಿಯ ಕೆಲ ಸಿಬ್ಬಂದಿಗಳನ್ನು ಹೆಚ್ಚುವರಿಯಾಗಿ ಚುನಾವಣಾ ಕಾರ್ಯಕ್ಕೆ ಈಗಾಗಲೇ ನಿಯೋಜಿಸಲಾಗಿದೆ. ಮೊದಲೇ ಇಲ್ಲಿಯ ನಗರಸಭೆಯಲ್ಲಿ ಸಿಬ್ಬಂದಿಗಳ ಕೊರತೆ ಇದೆ. ಆದರೆ ಈ ಸಿಬ್ಬಂದಿಗಳಿಗೆ ವಸ್ತು ಸ್ಥಿತಿಯ ಬಗ್ಗೆ ಅನೇಕ ಬಾರಿ ಹೇಳಿದಾಗಲೂ ಸಹ ತಮ್ಮ ಕರ್ತವ್ಯಕ್ಕೆ ಗೈರು ಹಾಜರಾಗುತ್ತಿದ್ದಾರೆ. ಹೀಗಾಗಿ ಅವರ ಕೊಠಡಿಗೆ ಬೀಗ ಹಾಕುವುದನ್ನು ಬಿಟ್ಟು ತನ್ನ ಬಳಿ ಬೇರೆ ದಾರಿ ಇರಲಿಲ್ಲ ಎಂದು ತಮ್ಮ ನಡೆಯನ್ನು ಅವರು ಸಮರ್ಥಿಸಿಕೊಂಡರು.

ನಗರಸಬೆಯ ಸಿಬ್ಬಂದಿಗಳ ಅನಧಿಕೃತ ಗೈರು ಹಾಜರಿಯ ಬಗ್ಗೆ ಚುನಾವಣಾ ಆಯೋಗಕ್ಕೆ ಮಾಹಿತಿ ನೀಡುತ್ತೇನೆ. ತನಗೆ ನಗರಸಭೆಯಲ್ಲಿ ಹಾಗೂ ಚುನಾವಣಾ ಕರ್ತವ್ಯಕ್ಕೂ ಸಹ ಇವರ ಗೈರು ಹಾಜರಿಯಿಂದ ತೊಂದರೆಯಾಗುತ್ತದೆ ಎಂದು ಮಾಹಿತಿ ನೀಡುತ್ತೇನೆ ಎಂದು ಮೊಹನರಾಜ್ ತಿಳಿಸಿದರು.

loading...