ಇರಾನ್ ಮಾತುಕತೆಗೆ ಬರುವವರೆಗೆ ನಿರ್ಬಂಧ ಮುಂದುವರಿಕೆ: ಅಮೆರಿಕ

0
3

ವಾಷಿಂಗ್ಟನ್, – ಮಾತುಕತೆಗೆ ಟೆಹ್ರಾನ್ ಮುಂದಾದರೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ಮೇಲಿನ ನಿರ್ಬಂಧಗಳನ್ನು ತೆಗೆದುಹಾಕುವ ಬಗ್ಗೆ ಯೋಚಿಸುವುದಾಗಿ ಹೇಳಿದ್ದಾರೆ ಎಂದು ಶ್ವೇತಭವನದ ರಾಷ್ಟ್ರೀಯ ಭದ್ರತಾ ಸಲಹೆಗಾರ ರಾಬರ್ಟ್ ಒ’ಬ್ರಿಯೆನ್ ಅವರು ಆಕ್ಸಿಯೋಸ್ ನ್ಯೂಸ್ ಪೋರ್ಟಲ್‌ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ನೀವು ನಮ್ಮೊಂದಿಗೆ ಮಾತುಕತೆ ನಡೆಸಲು ಬಯಸಿದರೆ ನೀವು ಮೊದಲು ಮಾತುಕತೆ ನಡೆಸುವುದಕ್ಕಾಗಿ ಏನನ್ನಾದರೂ ತ್ಯಜಿಸಬೇಕಾಗುತ್ತದೆ ಎಂದು ಶ್ವೇತಭವನವು ಸ್ಪಷ್ಟಪಡಿಸಿದೆ ಎಂದು ಅವರು ಹೇಳಿದರು.
ಯಾವುದೇ ಮಾತುಕತೆಗಳ ಅಗತ್ಯವಿಲ್ಲದಂತಹ ಸ್ಥಾನದಲ್ಲಿ ವಾಷಿಂಗ್ಟನ್ ಇದೆ. ನಮ್ಮ ಆರ್ಥಿಕತೆಯು ಅದ್ಭುತವಾಗಿದೆ. ಇರಾನಿಯನ್ನರು ನಮ್ಮೊಂದಿಗೆ ಮಾತುಕತೆ ನಡೆಸಬೇಕು. ನಾವಾಗಿಯೇ ಏಕೆ ಮೊದಲು ಮಾತುಕತೆಗೆ ಮುಂದಾಗಬೇಕು ? ಎಂದು ಒ’ಬ್ರೇನ್ ಪ್ರಶ್ನಿಸಿದ್ದಾರೆ.
ಜನವರಿ 3ರಂದು ರಾತ್ರಿ, ಅಮೆರಿಕ ಸೈನಿಕರು, ಬಾಗ್ದಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಕಾರ್ಯಾಚರಣೆ ನಡೆಸಿ, ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಕಮಾಂಡರ್ ಖಾಸಿಮ್ ಸುಲೈಮಾನಿ ಮತ್ತು ಇರಾಕ್ ಶಿಯಾ ಮಿಲಿಟಿಯಾದ ನಾಯಕ ಅಬು ಮಹ್ದಿ ಮುಹಂದಿಸ್ ಸೇರಿದಂತೆ ಇತರರನ್ನು ಹತ್ಯೆ ಮಾಡಿತ್ತು. ಡಿಸೆಂಬರ್ 31 ರಂದು ಬಾಗ್ದಾದ್‌ನಲ್ಲಿರುವ ಅಮೆರಿಕ ರಾಯಭಾರ ಕಚೇರಿಯ ಮೇಲಿನ ದಾಳಿಯ ಹಿಂದೆ ಇಬ್ಬರೂ ಕಮಾಂಡರ್‌ಗಳು ಇದ್ದಾರೆ ಎಂದು ಆರೋಪಿಸಿ ಅಮೆರಿಕ ಈ ಕಾರ್ಯಾಚರಣೆ ಕೈಗೊಂಡಿತ್ತು.
ಅಮೆರಿಕದ ಪಡೆಗಳಿಗೆ ಆತಿಥ್ಯ ನೀಡಿರುವ ಇರಾಕಿ ನೆಲೆಗಳ ಮೇಲೆ ಕ್ಷಿಪಣಿಗಳನ್ನು ಹಾರಿಸುವ ಮೂಲಕ ಬುಧವಾರ ಇರಾನ್ ಪ್ರತೀಕಾರ ತೀರಿಸಿಕೊಂಡಿತ್ತು. ದಾಳಿಯ ಪರಿಣಾಮವಾಗಿ ಯಾರೂ ಗಾಯಗೊಂಡಿಲ್ಲ ಎಂದು ವಾಷಿಂಗ್ಟನ್ ತಿಳಿಸಿದೆ.

loading...