ಉತ್ತರ ಅಫ್ಘಾನ್‍ನಲ್ಲಿ ತಾಲಿಬಾನ್‍ ಕಮಾಂಡರ್ ಸೇರಿ ಆರು ಮಂದಿ ಉಗ್ರರ ಹತ್ಯೆ

0
5

ಕಾಬೂಲ್- ಅಫ್ಘಾನಿಸ್ತಾನದ ಉತ್ತರ ಬಾಲ್ಕಾ ಪ್ರಾಂತ್ಯದಲ್ಲಿ ಭಯೋತ್ಪಾದಕರ ವಿರುದ್ಧ ನಡೆದ ಕಾರ್ಯಾಚರಣೆಯಲ್ಲಿ ತಾಲಿಬಾನ್‍ನ ಪ್ರಮುಖ ಕಮಾಂಡರ್ ಸೇರಿ ಆರು ಮಂದಿ ಉಗ್ರರು ಸಾವನ್ನಪ್ಪಿದ್ದಾರೆ ಎಂದು ಅಫ್ಘಾನ್ ಆಂತರಿಕ ವ್ಯವಹಾರಗಳ ಸಚಿವ ಗುರುವಾರ ತಿಳಿಸಿದ್ದಾರೆ.

ಬಾಲ್ಕಾ ಪ್ರಾಂತ್ಯದ ಬಾಲ್ಕಾ ಜಿಲ್ಲೆಯ ಸುತ್ತಮುತ್ತ ಅಫ್ಘಾನ್ ನ್ಯಾಷನಲ್‍ ಡಿಫೆನ್ಸ್ ಮತ್ತು ಭದ್ರತಾ ಪಡೆಗಳು ಭಯೋತ್ಪಾದಕರ ವಿರುದ್ಧ ಕಾರ್ಯಾಚರಣೆ ನಡೆಸಿವೆ. ಈ ವೇಳೆ ಉಗ್ರರು ಗುಂಡಿನ ದಾಳಿ ನಡೆಸಿದ್ದು, ಪ್ರತಿಯಾಗಿ ಭದ್ರತಾ ಪಡೆ ನಡೆಸಿದ ದಾಳಿಗೆ ಆರು ಮಂದಿ ತಾಲಿಬಾನ್ ಭಯೋತ್ಪಾದಕರು ಹತ್ಯೆಯಾಗಿದ್ದಾರೆ ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
ಬಾಲ್ಕಾ ಪ್ರಾಂತ್ಯದ ಕುಖ್ಯಾತ ತಾಲಿಬಾನ್ ಕಮಾಂಡರ್ ಮುಲ್ಲಾ ಶಾದರ್ ಕೂಡ ಈ ದಾಳಿಯಲ್ಲಿ ಹತ್ಯೆಯಾಗಿದ್ದಾನೆ ಎಂದು ಹೇಳಿಕೆ ತಿಳಿಸಿದೆ. ಆದರೆ ಕಾರ್ಯಾಚರಣೆ ಯಾವ ಸಮಯದಲ್ಲಿ ನಡೆದಿದೆ ಎಂಬುದನ್ನು ಅದು ಸ್ಪಷ್ಟಪಡಿಸಿಲ್ಲ.

ತಾಲಿಬಾನ್ ಸಂಘಟನೆಯ ಸದಸ್ಯ ಮುಹ್ಮದ್‍ ಸರ್ವರ್ ಎಂಬಾತನನ್ನು ಬಂಧಿಸಲಾಗಿದೆ. ಎಂಟು ಗ್ರಾಮಗಳನ್ನು ತಾಲಿಬಾನ್ ಮುಕ್ತಗೊಳಿಸಲಾಗಿದೆ ಎಂದು ಹೇಳಿಕೆ ತಿಳಿಸಿದೆ.
ಈ ಉಗ್ರರು ಬಾಲ್ಕಿಯಲ್ಲಿ ಹಲವು ಸಂಘಟಿತ ದಾಳಿ ನಡೆಸಿದ್ದ ಪ್ರಕರಣಗಳಲ್ಲಿ ಭಾಗಿಯಾಗಿದ್ದರು.

ಈ ವರ್ಷದ ಆರಂಭದಲ್ಲಿ ಬಾಲ್ಕಿ ಪ್ರಾಂತ್ಯದಲ್ಲಿ ಭದ್ರತಾ ಪಡೆಗಳು ಹಾಗೂ ಉಗ್ರರ ನಡುವೆ ಭಾರೀ ಗುಂಡಿನ ಚಕಮಕಿ ನಡೆದಿತ್ತು. ಪ್ರಸ್ತುತ ಈ ಪ್ರಾಂತ್ಯದಲ್ಲಿ ಶಾಂತಿ ನೆಲೆಸಿದೆ.

ಭದ್ರತಾ ಪಡೆ ಸಿಬ್ಬಂದಿ ಉಗ್ರರ ವಾಹನಗಳು ಹಾಗೂ ಮೂರು ಬೈಕ್‍ಗಳನ್ನು ನಾಶಪಡಿಸಿದ್ದಾರೆ. ಈ ದಾಳಿಯ ಬಗ್ಗೆ ತಾಲಿಬಾನ್ ಸಂಘಟನೆ ಇದುವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

loading...