ಎತ್ತಿನಬೈಲ್‌ ಗ್ರಾಮದಲ್ಲಿ ಅಪರೂಪದ ನಾಟಿ ಕೋಳಿ ಘಟಕ ಆರಂಭ

0
77

ಕುಮಟಾ: ತಾಲೂಕಿನ ಮಿರ್ಜಾನ ಗ್ರಾಮ ಪಂಚಾಯತ ವ್ಯಾಪ್ತಿಯ ಎತ್ತಿನಬೈಲ್‌ ಗ್ರಾಮದಲ್ಲಿ ಅಪರೂಪದ ನಾಟಿ ಕೋಳಿ ಘಟಕ ಆರಂಭವಾಗಿದ್ದು, ನಾಟಿ ಕೋಳಿ ತಿನ್ನುವವರಿಗೆ ಮುಖದಲ್ಲಿ ಮಂದಾಹಾಸ ಮೂಡಿದೆ.
ಸಸ್ಯಾಹಾರಿಗಳಿಗಿಂತ ಮಾಂಸಹಾರಿಗಳ ಸಂಖ್ಯೆ ದಿನೆ ದಿನೇ ಹೆಚ್ಚುತ್ತಲೇ ಸಾಗಿದೆ. ಒಂದೆಡೆ ಮೀನಿನ ಇಳುವರಿ ಕಡಿಮೆಯಾಗುತ್ತಲೇ ಜನ ಫಾರ್ಮ ಕೋಳಿಗೆ ಅವಲಂಬಿತರಾಗಿದ್ದಾರೆ. ಹಾಗಾಗಿ ಹೊಟೇಲ ದಾಬಾ, ಪೆಟ್ಟಿಗೆ ಅಂಗಡಿಗಳಲ್ಲೂ ಚಿಕನ್‌ ಖಾದ್ಯಗಳು ರಾರಾಜಿಸುತ್ತಿವೆ. ಅದಕ್ಕೆ ಅನುಗುಣವಾಗಿ ಫಾರ್ಮ ಕೋಳಿ ಸಾಕುವವರ ಮಾರಾಟ ಮಾಡುವ ವ್ಯಾಪಾರಿಗಳ ಸಂಖ್ಯೆ ಅಧಿಕವಾಗಿದೆ. ಫಾರ್ಮ ಕೋಳಿಯ ಅಬ್ಬರ ಹೆಚ್ಚುತ್ತಲೇ ಗ್ರಾಮೀಣ ಭಾಗದ ರುಚಿಕರವಾದ ನಾಟಿ ಕೋಳಿ ಸಾಕುವವರ ಸಂಖ್ಯೆ ತೀರಾ ಕ್ಷೀಣಿಸಿದೆ. ನಾಟಿ ಕೋಳಿ ಕ್ರಮೇಣ ಕಣ್ಮರೆಯಾಗುತ್ತಿರುವಾಗ ಬೆಂಗಳೂರಿನ ಉದ್ಯಮಿ ಮಂಜುನಾಥ ಲಿಂಗಪ್ಪ ನಾಯ್ಕರ ಮಾರ್ಗದರ್ಶನದಲ್ಲಿ ಕುಮಟಾ ತಾಲೂಕಿನ ಮಿರ್ಜಾನದ ಎತ್ತಿನಬೈಲ ಗುತ್ತಲ ಗ್ರಾಮದಲ್ಲಿ ಕಳೆದ 3 ತಿಂಗಳಿಂದ ನಾಟಿ ಕೋಳಿ ಘಟಕವನ್ನು ಅಘನಾಷಿನಿಯ ಜನಾರ್ಧನ ನಾಯ್ಕ ನಿರ್ವಹಿಸುತ್ತಿದ್ದಾರೆ.
ನಾಟಿ ಕೋಳಿ ನಿತ್ಯ ಗೋಧಿ, ಅಕ್ಕಿ, ಹುಲ್ಲು, ನುಗ್ಗೆ ಸೊಪ್ಪು ತಿನ್ನುತ್ತದೆ. ಒಂದು ಸಾವಿರ ಕೋಳಿಗೆ ದಿನ್ಕಕ್ಕೆ 20 ಕೆಜಿ ಗೋಧಿ, 20 ಕೆಜಿ ಅಕ್ಕಿ ತಿನ್ನಲು ನೀಡಲಾಗುತ್ತದೆ. ಕೋಳಿಯನ್ನು ಘಟಕದಿಂದ ಹೊರಬಿಟ್ಟರೆ ಅಲ್ಲಿ ಪುಟ್ಟ ಕಲ್ಲು, ಹುಳುಹುಪ್ಪುಡಿ ನುಗ್ಗೆ ಸೊಪ್ಪು ತಿನ್ನುವುದರಿಂದ ನೀಡುವ ಆಹಾರದಲ್ಲಿ ಉಳಿತಾಯವಾಗುತ್ತದೆ. ನಾಟಿ ಕೋಳಿಗಳು ರೋಗರಹಿತ ದಷ್ಟಪುಷ್ಟವಾಗಿ ಬೆಳೆಯುವುದರಿಂದ ಅದಕ್ಕೆ ಇಂಜೆಕ್ಷನ್‌ ನೀಡುವುದಾಗಲೀ, ವಿದ್ಯುತ್ತಿನ ಶಾಖ ನೀಡುವ ಪ್ರಮೇಯವೇ ಬರುವುದಿಲ್ಲ. ಪೇಪರ ಪೌಡರ್‌ ಮತ್ತು ಉಪ್ಪು ಬೆರೆಸಿದ ನೀರು ನಿತ್ಯ ನೀಡುತ್ತಿರುವುದರಿಂದ ಕೋಳಿಯ ಆರೋಗ್ಯ ವೃಧ್ಧಿಯಾಗುತ್ತದೆ ಎನ್ನುತ್ತಾರೆ. 6 ರಿಂದ 7 ತಿಂಗಳ ಕೋಳಿಯನ್ನು 20 ದಿನಕ್ಕೊಮ್ಮೆ ಒಂದು ಸಾವಿರ ಲೆಕ್ಕದಲ್ಲಿ ಆಮದು ಮಾಡಿಕೊಳ್ಳಲಾಗುತ್ತದೆ. ಹೀಗೆ ಆಮದು ಮಾಡಲಾದ ಕೋಳಿ ಒಂದೂವರೇ ಕೆಜಿಯಿಂದ ಎರಡೂವರೆ ಕೆಜಿ ತೂಕ ತೂಗುತ್ತದೆ. ಈ ತೂಕದ ಕೋಳಿ ಅರ್ಧ ಕೆಜಿ ತೂಕ ಹೆಚ್ಚು ತೂಗಲು ಬರೋಬ್ಬರಿ 9 ತಿಂಗಳು ತೆಗೆದುಕೊಳ್ಳುತ್ತದೆ. ಹಾಗೆಯೇ 4 ಕೆಜಿ ತೂಗಲು ಒಂದು ವರ್ಷ ಅವಧಿ ಬೇಕಾಗುತ್ತದೆ ಎಂದು ಕೋಳಿ ಘಟಕ ನಿರ್ವಹಿಸುತ್ತಿರುವ ಜನಾರ್ಧನ ಅವರು ಹೇಳುತ್ತಾರೆ.
ಕೋಳಿಯಲ್ಲಿ 3 ವಿಧಗಳಿವೆ ಕೋಚಿ ಕೋಳಿ, ಫೈಟರ್‌ ಕೋಳಿ, ನಾಟಿ ಕೋಳಿ. ಫೈಟರ್‌ ಕೋಳಿಗೆ ಚಿಕ್ಕ ಮರಿ ಇದ್ದಾಗಲೇ ಕಾದಾಟ ಮಾಡುವ ತರಬೇತಿ ನೀಡಲಾಗುತ್ತದೆ. ಕೋಚಿ ಕೋಳಿ ಎತ್ತರವಾಗಿ ಬಲವುಳ್ಳದ್ದಾಗಿರುತ್ತದೆ.
ಎರಡು ಕೆಜಿ ತೂಕುವ ಹುಂಜಕ್ಕೆ 600 ರೂ, ಹ್ಯಾಂಟೆಗೆ 400 ರೂ, ಫೈಟರ್‌ ಕೋಳಿ ಒಂದಕ್ಕೆ 5.000 ರಿಂದ 20.000 ವರೆಗೆ ಬೆಲೆ ಬಾಳುತ್ತದೆ. ಕೋಚಿ ಕೋಳಿ ಒಂದಕ್ಕೆ 2.000 ರಿಂದ 5.000 ವರೆಗೆ ಬೆಲೆ ಬಾಳುತ್ತದೆ.
ಒಂದು ತಿಂಗಳಿಗೆ ಒಂದು ಸಾವಿರ ಕೋಳಿ ಮಾರಾಟವಾಗುತ್ತದೆ. ಅಲ್ಲದೇ ಹುಂಜ ಹೊಡೆದಾಡುವುದರಿಂದ ಇದರ ನಿಯಂತ್ರಣ ಕಷ್ಟವಾಗುತ್ತದೆ ಎನ್ನುತ್ತಾರೆ. ಕೋಳಿ ಸಾಕಾಣಿಕೆ ಕಷ್ಟಕರವಾದರೂ ತಿಂಗಳಿಗೆ 25,000 ರಿಂದ 30,000 ಆದಾಯ ಗಳಿಸಬಹುದು ಎನ್ನುತ್ತಾರೆ.
ಕುಮಟಾ ತಾಲೂಕಿಗೆ ನಾಟಿ ಕೋಳಿ ಘಟಕ ಇದೇ ಪ್ರಥಮವಾಗಿದ್ದು, ಕುಮಟಾದಲ್ಲಿ ನಾಟಿ ಚಿಕನ್‌ ಶಾಪ್‌ ಇಡುವ ವಿಚಾರ ಇವರಿಗಿದೆ. ಆಧುನಿಕ ರೀತಿಯ ಚಿಕನ್‌ ಶಾಪನಲ್ಲಿ ಚಿಕನ್‌ ತುಂಡರಿಸಿ ಜನರಿಗೆ ಸೇವೆ ಒದಗಿಸುವ ಇರಾದೇ ಇವರದಾಗಿದೆ.

loading...