ಐಸಿಸಿ ವಿಶ್ವಕಪ್‌; ಇಂಗ್ಲೆಂಡ್‌ಗೆ ಹಾರಿದ ಭಾರತ ಕ್ರಿಕೆಟ್‌ ತಂಡ

0
4

ಮುಂಬೈ:- ಜಾಗತಿಕ ಮಹತ್ವದ ಕ್ರಿಕೆಟ್‌ ಟೂರ್ನಿ ಐಸಿಸಿ ವಿಶ್ವಕಪ್‌ ಗೆಲ್ಲುವ ಸಂಭಾವ್ಯ ತಂಡಗಳಲ್ಲಿ ಒಂದಾದ ವಿರಾಟ್‌ ಕೊಹ್ಲಿ ನೇತೃತ್ವದ ಭಾರತ ತಂಡ ಇಂದು ಬೆಳಗ್ಗೆ ಇಂಗ್ಲೆಂಡ್‌ಗೆ ತೆರಳಿತು.
ಇದೇ 30 ರಿಂದ ಇಂಗ್ಲೆಂಡ್‌ ಹಾಗೂ ವೇಲ್ಸ್‌ ಆತಿಥ್ಯದಲ್ಲಿ ನಡೆಯಲಿರುವ ವಿಶ್ವಕಪ್‌ ಟೂರ್ನಿಯಲ್ಲಿ ಭಾರತ ಬಲಿಷ್ಠ ತಂಡವಾಗಿ ಭಾಗವಹಿಸಲಿದೆ. ಇಂದು ಬೆಳಗ್ಗೆ ಸಾಂತಾ ಕ್ರೂಜ್‌ ಅಂತಾರಾಷ್ಟ್ರೀಯ ವಿಮಾಣ ನಿಲ್ದಾಣಕ್ಕೆ ಆಗಮಿಸಿದ ನಾಯಕ ವಿರಾಟ್‌ ಕೊಹ್ಲಿ, ಎಂ.ಎಸ್‌.ಧೋನಿ, ರೋಹಿತ್‌ ಶರ್ಮಾ, ಶಿಖರ್‌ ಧವನ್‌, ಕೆ.ಎಲ್‌ ರಾಹುಲ್‌ ಸೇರಿದಂತೆ ಭಾರತ ತಂಡದ ಎಲ್ಲ ಸದಸ್ಯರು ಅಧಿಕೃತ ಪೋಷಾಕಿನಲ್ಲಿ ಮಿಂಚುತ್ತಿದ್ದರು. ನಂತರ, ಕೆಲಕಾಲ ವಿಮಾನ ನಿಲ್ದಾಣದ ನಿರೀಕ್ಷಣಾ ಕೊಠಡಿಯಲ್ಲಿ ತಂಗಿದ್ದು, ನಂತರ ಲಂಡನ್‌ಗೆ ತೆರಳಿದರು.
ವಿಶ್ವಕಪ್‌ ಮೇ 30 ರಿಂದ ಆರಂಭವಾಗಿ ಜುಲೈ 14 ರಂದು ಫೈನಲ್‌ ಪಂದ್ಯದ ಮೂಲಕ ಮುಕ್ತಾಯವಾಗಲಿದೆ. ಭಾರತ ತಂಡ ಜೂ.5 ರಂದು ಮೊದಲನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸೌಥ್‌ಹ್ಯಾಮ್ಟನ್‌ನ ರೋಸ್‌ ಬೌಲ್‌ ಕ್ರೀಡಾಂಗಣದಲ್ಲಿ ಸೆಣಸಲಿದೆ. ವಿಶ್ವಕಪ್‌ ಆರಂಭವಾಗುವ ಮುನ್ನ 24 ರಿಂದ 28ರವರೆಗೆ ಅಭ್ಯಾಸ ಪಂದ್ಯಗಳಾಡಲಿವೆ.
ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡ ಭಾರತ ತಂಡದ ಎಲ್ಲ ಸದಸ್ಯರಲ್ಲಿ ಆತ್ಮವಿಶ್ವಾಸ ಹಾಗೂ ಹುಮ್ಮಸ್ಸು ಎದ್ದು ಕಾಣುತ್ತಿದ್ದು, ಜಾಗತಿಕ ಕ್ರಿಕೆಟ್‌ ಯುದ್ಧದಲ್ಲಿ ಸೆಣಸಲು ತುದಿಗಾಲಲ್ಲಿ ನಿಂತಿದ್ದಾರೆ. ಕಪಿಲ್‌ ದೇವ್‌ ನಾಯಕತ್ವದ ಭಾರತ ತಂಡ 1983ರಲ್ಲಿ ಮೊದಲ ಬಾರಿ ಐಸಿಸಿ ವಿಶ್ವಕಪ್‌ ಜಯಸಿತ್ತು. ನಂತರ, 2011ರಲ್ಲಿ ಮಹೇಂದ್ರ ಸಿಂಗ್‌ ಧೋನಿ ನಾಯಕತ್ವದಲ್ಲಿ ಎರಡನೇ ವಿಶ್ವಕಪ್‌ ಭಾರತಕ್ಕೆ ಒಲಿದಿತ್ತು. ಇದೀಗ ವಿರಾಟ್ ಕೊಹ್ಲಿ ನೇತೃತ್ವದಲ್ಲಿ ಭಾರತ ಮೂರನೇ ಬಾರಿ ವಿಶ್ವಕಪ್‌ ಗೆಲ್ಲುವ ಆಶಾಭಾವನೆಯೊಂದಿಗೆ ಆಂಗ್ಲರ ನಾಡಿಗೆ ತೆರಳಿದೆ.

loading...