ನವದೆಹಲಿ:- ದೇಶದಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಆಡಳಿತಾವಧಿಯಲ್ಲಿ ಹೇರಲಾಗಿದ್ದ ತುರ್ತುಪರಿಸ್ಥಿತಿಗೆ 45 ವರ್ಷಗಳಾಗಿದ್ದು, ಕುಟುಂಬವೊಂದರ ದುರಾಸೆಯೇ ತುರ್ತು ಪರಿಸ್ಥಿತಿ ಹೇರಿಕೆಗೆ ಕಾರಣವಾಯಿತು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಈ ದಿನದಂದು, 45 ವರ್ಷಗಳ ಹಿಂದೆ ಒಂದು ಕುಟುಂಬದ ಅಧಿಕಾರ ದಾಹ ತುರ್ತು ಪರಿಸ್ಥಿತಿಯನ್ನು ಹೇರಲು ಕಾರಣವಾಯಿತು. ರಾತ್ರೋರಾತ್ರಿ ರಾಷ್ಟ್ರವನ್ನು ಸೆರೆಮನೆಯನ್ನಾಗಿ ಮಾಡಲಾಯಿತು. ಪತ್ರಿಕಾ, ನ್ಯಾಯಾಲಯಗಳ ಸ್ವಾತಂತ್ರ್ಯ ಹತ್ತಿಕ್ಕಿ, ಬಡವರು ಮತ್ತು ದೀನ ದಲಿತರ ಮೇಲೆ ದೌರ್ಜನ್ಯ ಎಸಗಲಾಯಿತು” ಎಂದಿದ್ದಾರೆ.
ಸರಣಿ ಟ್ವೀಟ್ ಮುಖಾಂತರ ಈ ವಿಷಯ ತಿಳಿಸಿರುವ ಅವರು, ”ತುರ್ತು ಪರಿಸ್ಥಿತಿಯ ಮನಸ್ಥಿತಿ ಇನ್ನೂ ಏಕೆ ಉಳಿದಿದೆ ಎಂದು ಕಾಂಗ್ರೆಸ್ ತನ್ನನ್ನು ತಾನೇ ಕೇಳಿಕೊಳ್ಳಬೇಕು’’ಎಂದಿದ್ದಾರೆ.
ಪ್ರಧಾನ ವಿರೋಧ ಪಕ್ಷದಲ್ಲಿ ಒಂದು ವಂಶಕ್ಕೆ ಸೇರದ ನಾಯಕರೇಕೆ ಮಾತನಾಡಲು ಸಾಧ್ಯವಾಗುತ್ತಿಲ್ಲ ಎಂದು ಕೇಳಬೇಕು. ಕಾಂಗ್ರೆಸ್ನಲ್ಲಿ ನಾಯಕರು ಏಕೆ ನಿರಾಶರಾಗುತ್ತಿದ್ದಾರೆ ಎಂದು ಪಕ್ಷ ಯೋಚಿಸಬೇಕು. ಇಲ್ಲದಿದ್ದರೆ, ಜನರೊಂದಿಗೆ ಅವರ ಸಂಪರ್ಕ ಕಡಿತಗೊಳ್ಳುತ್ತಲೇ ಇರುತ್ತದೆ ಎಂದು ತಿಳಿಸಿದ್ದಾರೆ.
ಇತ್ತೀಚಿನ ಸಿಡಬ್ಲ್ಯುಸಿ ಸಭೆಯಲ್ಲಿ ಹಿರಿಯ ಸದಸ್ಯರು ಮತ್ತು ಕಿರಿಯ ಸದಸ್ಯರು ಕೆಲವು ವಿಷಯಗಳನ್ನು ಎತ್ತಿದ್ದಾರೆ, ಆದರೆ ಅವರ ದನಿಯನ್ನು ಅಡಗಿಸಲಾಯಿತು. ಅಲ್ಲದೆ ಪಕ್ಷದ ವಕ್ತಾರರನ್ನು ಅಪಮಾನಕರ ರೀತಿಯಲ್ಲಿ ವಜಾ ಮಾಡಲಾಗಿದೆ ಎಂದು ಟೀಕಿಸಿದ್ದಾರೆ.
“ದುಃಖಕರವಾದರೂ ಸತ್ಯ ಸಂಗತಿ ಏನೆಂದರೆ, ನಾಯಕರು ಕಾಂಗ್ರೆಸ್ನಲ್ಲಿ ಉಸಿರುಗಟ್ಟುತ್ತಿರುವ ವಾತಾವರಣವನ್ನು ಅನುಭವಿಸುತ್ತಿದ್ದಾರೆ” ಎಂದಿದ್ದಾರೆ.
“ಪಕ್ಷದ ಹಾಗೂ ರಾಷ್ಟ್ರದ ಹಿತಾಸಕ್ತಿಗಿಂತಲೂ ಒಂದು ಕುಟುಂಬದ ಹಿತಾಸಕ್ತಿ ಅಂದು ಮೇಲುಗೈ ಸಾಧಿಸಿತು. ಇಂದಿಗೂ ಕಾಂಗ್ರೆಸ್ ಪಕ್ಷದಲ್ಲಿ ಈ ಬಗೆಯ ವಿಷಾದನೀಯ ಪರಿಸ್ಥಿತಿಯೇ ಮುಂದುವರಿಯುತ್ತಿದೆ” ಎಂದಿರುವ ಅಮಿತ್ ಶಾ, ಲಕ್ಷಾಂತರ ಜನರ ಪ್ರಯತ್ನದಿಂದಾಗಿ, ತುರ್ತು ಪರಿಸ್ಥಿತಿಯನ್ನು ತೆಗೆದುಹಾಕಿ ಭಾರತದಲ್ಲಿ ಪ್ರಜಾಪ್ರಭುತ್ವವನ್ನು ಪುನಃಸ್ಥಾಪಿಸಲಾಯಿತು ಎಂದು ಹೇಳಿದ್ದಾರೆ.
ಭಾರತೀಯ ಜನತಾ ಪಕ್ಷದ ಅಧ್ಯಕ್ಷ ಜೆ ಪಿ ನಡ್ಡಾ ಸಹ ಟ್ವೀಟ್ ಮಾಡಿದ್ದು, “ಚಿತ್ರಹಿಂಸೆ ಸಹಿಸಿಕೊಂಡಿದ್ದರೂ, ತುರ್ತು ಪರಿಸ್ಥಿತಿಯನ್ನು ತೀವ್ರವಾಗಿ ವಿರೋಧಿಸಿದ ಎಲ್ಲ ಗಣ್ಯರಿಗೆ ಭಾರತ ನಮಸ್ಕರಿಸುತ್ತದೆ. ಭಾರತದ ಪ್ರಜಾಪ್ರಭುತ್ವ ಮೌಲ್ಯಗಳು ನಿರಂಕುಶ ಮನೋಧರ್ಮವನ್ನು ಯಶಸ್ವಿಯಾಗಿ ಗೆದ್ದಿರುವುದು ನಮ್ಮ ಸತ್ಯಾಗ್ರಹಿಗಳ ಸ್ಥಿರತೆಯಾಗಿದೆ” ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಯುಎನ್ಐ