ಒಲಿಂಪಿಕ್ ಕ್ರೀಡಾಕೂಟಕ್ಕೆ ಕ್ಷಣಗಣನೆ : ಸಿದ್ದರಾಮಯ್ಯರಿಂದ ಕ್ರೀಡಾಕೂಟಕ್ಕೆ ಚಾಲನೆ

0
49

ಕನ್ನಡಮ್ಮ ಸುದ್ದಿ-ಧಾರವಾಡ : ಅವಳಿ ನಗರದಲ್ಲಿ ಇಂದಿನಿಂದ ಫೆ. 10 ರವರೆಗೆ ನಡೆಯುವ ರಾಜ್ಯ ಒಲಿಂಪಿಕ್ ಕ್ರೀಡಾಕೂಟವು ಕ್ರೀಡಾ ಹಬ್ಬದ ವಾತಾವರಣ ಮೂಡಿಸಲಿದೆ.
ಕರ್ನಾಟಕ ವಿಜ್ಞಾನ ಮಹಾವಿದ್ಯಾಲಯದಲ್ಲಿ ಫುಟ್‍ಬಾಲ್ ಮೈದಾನ ಸಿದ್ಧವಾಗಿದ್ದು ಗೋಲ್‍ಪೋಸ್ಟ್ ಅಳವಡಿಸಲಾಗಿದೆ. ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ( ಡಯಟ್) ಆವರಣದಲ್ಲಿ ಆಹಾರ ವ್ಯವಸ್ಥೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ವಿವಿಧ ಕ್ರೀಡೆಗಳಿಗೆ ಅಗತ್ಯವಾಗಿರುವ ಕ್ರೀಡಾ ಪರಿಕರಗಳು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಿಂದ ಧಾರವಾಡಕ್ಕೆ ತಲುಪಿವೆ.ಪೋಲ್ ವಾಲ್ಟ್, ಬೆಡ್ಡುಗಳು, ಹ್ಯಾಂಡ್‍ಬಾಲ್ ಕ್ರೀಡೆಯ ಸಾಮಗ್ರಿಗಳು, ನೆಟ್, ವ್ಹಾಲಿಬಾಲ್, ಬಾಸ್ಕೆಟ್‍ಬಾಲ್, ಫುಟ್‍ಬಾಲ್ ಕ್ರೀಡೆಯ ಎಲ್ಲ ವಸ್ತುಗಳು ಹಾಗೂ ಬಾಕ್ಸಿಂಗ್ ರಿಂಗ್‍ಗಳು ಧಾರವಾಡಕ್ಕೆ ಬಂದಿವೆ. ವೇಟ್‍ಲಿಫ್ಟಿಂಗ್ ಕ್ರೀಡೆಯ ಉಪಕರಣಗಳು ಬೆಂಗಳೂರಿನ ಭಾರತೀಯ ಕ್ರೀಡಾ ಪ್ರಾಧಿಕಾರದಿಂದ ಬರಲಿವೆ.
ಈ ಮೊದಲು ಧಾರವಾಡದಲ್ಲಿ ನಡೆಸಲು ಉದ್ದೇಶಿಸಲಾಗಿದ್ದ ಲಾನ್ ಟೆನ್ನಿಸ್ ಕ್ರೀಡೆಯು ಬೆಂಗಳೂರಿಗೆ ಸ್ಥಳಾಂತರಗೊಂಡಿದೆ. ಸೈಕ್ಲಿಂಗ್ ಕ್ರೀಡೆಯು ಹುಬ್ಬಳ್ಳಿಯ ಗಬ್ಬೂರ ಕ್ರಾಸಿನಿಂದ ಆರಂಭವಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆಯಲಿದೆ. ಪುರುಷರ ವಿಭಾಗದ ಸೈಕ್ಲಿಂಗ್ ಸ್ಪರ್ಧೆಯು 60 ಕಿ.ಮೀ.ವರೆಗೆ ಹಾಗೂ ಮಹಿಳಾ ವಿಭಾಗದ ಸ್ಪರ್ಧೆಯು 40 ಕಿ.ಮೀ.ವರೆಗೆ ನಡೆಯಲಿದೆ.
ಧಾರವಾಡದ ಯುನಿವರ್ಸಿಟಿ ಪಬ್ಲಿಕ್ ಶಾಲೆಯಲ್ಲಿ ಫೆ.3 ರಿಂದ 5 ರವರೆಗೆ ವೇಟ್ ಲಿಫ್ಟಿಂಗ್, ಜೆ.ಎಸ್.ಎಸ್.ಕಾಲೇಜು ಆವರಣದಲ್ಲಿ ಫೆ.5 ರಿಂದ 9ರವರೆಗೆ ನೆಟ್‍ಬಾಲ್, ಯುನಿವರ್ಸಿಟಿ ಪಬ್ಲಿಕ್ ಶಾಲೆಯಲ್ಲಿ ಫೆ.4 ಮತ್ತು 5 ರಂದು ಆರ್ಚರಿ, ಹುಬ್ಬಳ್ಳಿಯಲ್ಲಿ ಫೆ.4 ಮತ್ತು 5 ರಂದು ಸೈಕ್ಲಿಂಗ್, ಹುಬ್ಬಳ್ಳಿಯ ಮಹಾನಗರ ಪಾಲಿಕೆ ಈಜುಗೊಳದಲ್ಲಿ ಫೆ.7 ರಿಂದ 9ರವರೆಗೆ ಸ್ವಿಮ್ಮಿಂಗ್, ಧಾರವಾಡದ ಆರ್.ಎನ್.ಶೆಟ್ಟಿ ಒಳಾಂಗಣ ಕ್ರೀಡಾಂಗಣದಲ್ಲಿ ಫೆ.4 ರಿಂದ 6ರವರೆಗೆ ಟೇಕ್ವಾಂಡೊ, ಧಾರವಾಡದ ಆರ್.ಎನ್.ಶೆಟ್ಟಿ ಒಳಾಂಗಣ ಕ್ರೀಡಾಂಗಣದಲ್ಲಿ ಫೆ.4 ರಿಂದ 7ರವರೆಗೆ ಬಾಕ್ಸಿಂಗ್, ಬಾಲ ಮಾರುತಿ ವ್ಯಾಯಾಮ ಶಾಲೆಯಲ್ಲಿ ಜರುಗಲಿದೆ.
ಫೆ.4 ರಿಂದ 7ರವರೆಗೆ ಜಿಮ್ನ್ಯಾಸ್ಟಿಕ್. ಹುಬ್ಬಳ್ಳಿಯ ನೆಹರೂ ಮ್ಯದಾನದಲ್ಲಿ ಫೆ.4 ರಿಂದ 7ರವರೆಗೆ ಕಬಡ್ಡಿ, ಧಾರವಾಡದ ಮಲ್ಲಸಜ್ಜನ ದೈಹಿಕ ಶಿಕ್ಷಣ ಕಾಲೇಜಿನಲ್ಲಿ ಫೆ.4 ರಿಂದ 8ರವರೆಗೆ ಹ್ಯಾಂಡ್‍ಬಾಲ್, ಕರ್ನಾಟಕ ಕಾಲೇಜು ಆವರಣದಲ್ಲಿ ಫೆ.4 ರಿಂದ 10 ರವರೆಗೆ ಫುಟ್‍ಬಾಲ್, ಬೆಂಗಳೂರಿನಲ್ಲಿ ಫೆ.5 ರಿಂದ 9ರವರೆಗೆ ಲಾನ್‍ಟೆನಿಸ್ .ಕರ್ನಾಟಕ ವಿಶ್ವವಿದ್ಯಾಲಯದ ಆವರಣದಲ್ಲಿ ಫೆ.3 ರಿಂದ 10ರವರೆಗೆ ಹಾಕಿ, ಹುಬ್ಬಳ್ಳಿಯ ನೆಹರು ಮೈದಾನದಲ್ಲಿ ಫೆ.5 ರಿಂದ 9ರವರೆಗೆ ವ್ಹಾಲಿಬಾಲ್, ಸತ್ತೂರಿನ ಎಸ್.ಡಿ.ಎಂ. ದಂತ ಮಹಾವಿದ್ಯಾಲಯದಲ್ಲಿ ಫೆ.6 ರಿಂದ 9 ರವರೆಗೆ ಬ್ಯಾಡ್ಮಿಂಟನ್, ಮಲ್ಲಸಜ್ಜನ ವ್ಯಾಯಾಮ ಶಾಲೆ ಹಾಗೂ ರೋವರ್ಸ್ ಕ್ಲಬ್‍ನಲ್ಲಿ ಫೆ. 4 ರಿಂದ 7 ರವರೆಗೆ ಬಾಸ್ಕೆಟ್‍ಬಾಲ್ ಪಂದ್ಯಾವಳಿ ನಡೆಯಲಿದೆ.
ಧಾರವಾಡದ ರೇಲ್ವೆ ಸಮುದಾಯ ಭವನದಲ್ಲಿ ಫೆ.6 ರಿಂದ 10 ರವರೆಗೆ ವುಶು, ಆರ್.ಎನ್.ಶೆಟ್ಟಿ ಒಳಾಂಗಣ ಕ್ರೀಡಾಂಗಣದಲ್ಲಿ ಫೆ.7 ರಿಂದ 9 ರವರೆಗೆ ಜುಡೋ, ಯುನಿವರ್ಸಿಟಿ ಪಬ್ಲಿಕ್ ಶಾಲೆಯಲ್ಲಿ ಫೆ.7 ರಿಂದ 9 ರವರೆಗೆ ಖೋ-ಖೋ. ಡಾ ಮಲ್ಲಿಕಾರ್ಜುನ ಮನಸೂರ ಕಲಾಭವನದಲ್ಲಿ ಫೆ.7 ರಿಂದ 9 ರವರೆಗೆ ಕುಸ್ತಿ. ಆರ್.ಎನ್.ಶೆಟ್ಟಿ ಕ್ರೀಡಾಂಗಣದಲ್ಲಿ ಫೆ.7 ರಿಂದ 10 ರವರೆಗೆ ಅಥ್ಲೆಟಿಕ್ಸ್. ಲಿಂಗಾಯತ ಟೌನ್‍ಹಾಲ್‍ನಲ್ಲಿ ಫೆ.8 ಹಾಗೂ 9 ರಂದು ಫೆನ್ಸಿಂಗ್ (ಕತ್ತಿವರಸೆ), ಕಾಸ್ಮೋಸ್ ಕ್ಲಬ್‍ನಲ್ಲಿ ಫೆ.9 ಮತ್ತು 10 ರಂದು ಟೇಬಲ್ ಟೆನಿಸ್ ಸ್ಪರ್ಧೆಗಳನ್ನು ಆಯೋಜಿಸಲು ಸಿದ್ಧತೆಗಳನ್ನು ಮಾಡಿಕೊಂಡಿದೆ. ಹುಬ್ಬಳ್ಳಿ-ಧಾರವಾಡದಲ್ಲಿ ನಡೆಯುವ ಒಟ್ಟು 22 ಕ್ರೀಡಾ ಸ್ವರ್ಧೆಗಳಲ್ಲಿ ಸುಮಾರು 4500 ಕ್ರೀಡಾ ಪಟುಗಳು, ತಂತ್ರಜ್ಞರು ಭಾಗವಹಿಸಲಿದ್ದು ಒಟ್ಟಾರೆಯಾಗಿ ಕ್ರೀಡಾ ಹಬ್ಬದ ವಾತಾವರಣ ನಿರ್ಮಾಣವಾಗಲಿದ್ದು ರಾಷ್ಟ್ರದ ವಿವಿಧ ರಾಜ್ಯದಿಂದ ಕ್ರೀಡಾಪಟುಗಳು ಆಗಮಿಸಿ ಕ್ರೀಡಾ ರಸದೌಥಣದೊಂದಿಗೆ ಉತ್ತರ ಕರ್ನಾಟಕದ ರೊಟ್ಟಿ ಊಟ ಸವಿದು ಪದಕಗಳನ್ನು ಗೆಲ್ಲುವ ಭರವಸೆ ಹೊತ್ತು ಬಂದಿದ್ದಾರೆ.

loading...