ಒಳ ಚರಂಡಿ ಕಾಮಗಾರಿ ಪರಿಶೀಲಿಸಿದ ಶಾಸಕ ದಿನಕರ

0
10

 

ಕನ್ನಡಮ್ಮ ಸುದ್ದಿ-ಕುಮಟಾ: ಪುರಸಭೆ ವ್ಯಾಪ್ತಿಯ ಹೆರವಟ್ಟಾದಲ್ಲಿ ಕೊನೆಯ ಹಂತದ ಒಳ ಚರಂಡಿ ಕಾಮಗಾರಿ ಅವೈಜ್ಞಾನಿಕವಾಗಿ ನಡೆಸಲಾಗುತ್ತಿದೆ ಎಂದು ಸ್ಥಳೀಯರು ಮಂಗಳವಾರ ಕಾಮಗಾರಿ ಹಾಗೂ ರಸ್ತೆ ತಡೆದು ಪ್ರತಿಭಟನೆ ನಡೆಸಿರುವ ಹಿನ್ನಲೆಯಲ್ಲಿ ಬುಧವಾರ ಶಾಸಕ ದಿನಕರ ಶೆಟ್ಟಿ ಅವರು ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿಯನ್ನು ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಶಾಸಕರು, ಉಸ್ತುವಾರಿ ಸಚಿವರಾದ ಆರ್ ವಿ ದೇಶಪಾಂಡೆಯವರು ಇತ್ತೀಚಿಗೆ ಕುಮಟಾಕ್ಕೆ ಬಂದ ಸಂದರ್ಭದಲ್ಲಿ ಒಳಚರಂಡಿ ಯೋಜನೆಯ ಕುರಿತು ಸಂಬಂಧಪಟ್ಟ ಅಧಿಕಾರಿಗಳ ಜೊತೆ ಚರ್ಚಿಸಿದ್ದರು. ಒಳಚರಂಡಿ ಕಾಮಗಾರಿಯ ಕುರಿತು ಜನ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಜನರಿಗೆ ಮನವರಿಕೆಯಾಗುವ ರೀತಿಯಲ್ಲಿ ಸಂಬಂಧಪಟ್ಟ ಇಲಾಖೆಯ ಮುಖ್ಯಸ್ಥರು ಅವರ ಜೊತೆ ಚರ್ಚಿಸಿ ಕಾಮಗಾರಿಯನ್ನು ಮುಂದುವರೆಸಬೇಕೆಂದು ನಾನು ಉಸ್ತುವಾರಿ ಸಚಿವರ ಬಳಿ ತಿಳಿಸಿದ್ದೆ. ಆದರೆ ಹೆರವಟ್ಟಾ ಭಾಗದಲ್ಲಿ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಈ ಸ್ಥಳದಲ್ಲಿ ರಸ್ತೆ ಕಾಮಗಾರಿಯನ್ನು ಪ್ರಾರಂಭಿಸುವುದಾದರೆ ಒಳ ಚರಂಡಿ ಕಾಮಗಾರಿ ಸಂಪೂರ್ಣ ಮುಕ್ತಾಯಗೊಳ್ಳಬೇಕೆಂದು ಅಧಿಕಾರಿಗಳು ತಿಳಿಸಿದ್ದರು. ಆ ನಿಟ್ಟಿನಲ್ಲಿ ಹೆರವಟ್ಟಾ ಭಾಗದ ಒಳಚರಂಡಿ ಕಾಮಗಾರಿಯನ್ನು ತೀವ್ರಗತಿಯಲ್ಲಿ ನಡೆಸಲಾಗುತ್ತಿದೆ. ಅಲ್ಲದೇ ಕೆಡಬ್ಲ್ಯುಡಿಎಸ್ ಇಲಾಖೆಯ ಮುಖ್ಯ ಅಧಿಕಾರಿಗಳಿಗೂ ಶೀಘ್ರದಲ್ಲಿ ಕೆಲಸ ಸಂಪೂರ್ಣ ಮುಕ್ತಾಯಗೊಳಿಸಬೇಕೆಂದು ತಿಳಿಸಿದ್ದೇನೆ. ಒಳಚರಂಡಿ ಕಾಮಗಾರಿ ಮುಗಿದ ತಕ್ಷಣದಲ್ಲಿ ಈ ಭಾಗದಲ್ಲಿ ರಸ್ತೆ ಕಾಮಗಾರಿ ಆರಂಭಿಸಿ, ಸಂಚಾರಕ್ಕೆ ಅನುಕೂಲ ಮಾಡಿಕೋಡಲಾಗುವುದು ಎಂದರು.

ಈ ಸಂದರ್ಭದಲ್ಲಿ ಸ್ಥಳೀಯರಾದ ಸತೀಶ ಸಾನು, ಉಲ್ಲಾಸ ಶಾನಭಾಗ, ವಿಠ್ಠಲ್ ಶಾನಭಾಗ, ಮಾರುತಿ ಶೇಟ್, ನಾಗರಾಜ ಭಂಡಾರಿ ಹಾಗೂ ಕೆಡಬ್ಲ್ಯುಡಿಎಸ್ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

loading...