ಕನ್ನಡ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಬೋಧನೆ ಖಂಡಿಸಿ ಕನಸೆ ಮನವಿ

0
261

ಕನ್ನಡಮ್ಮ ಸುದ್ದಿ
ಬೆಂಗಳೂರು:1 ಕನ್ನಡ ಸರಕಾರಿ ಶಾಲೆಗಳಲ್ಲಿ ಆರನೇ ತರಗತಿಯಿಂದ ಆಂಗ್ಲ ಮಾಧ್ಯಮ ಬೋಧಿಸುವ ತಿರ್ಮಾನ ಕೈ ಬಿಡುವಂತೆ ಆಗ್ರಹಿಸಿ ಗುರುವಾರ ಕರ್ನಾಟಕ ನವ ನಿರ್ಮಾಣ ಸೇನೆಯ ಕಾರ್ಯಕರ್ತರು ಶಿಕ್ಷಣ ಸಚಿವ ತನ್ವೀರ ಸೇಠ್ ಅವರಿಗೆ ಮನವಿ ಸಲ್ಲಿಸಿದರು.
ಬರುವ ಶೈಕ್ಷಣಿಕ ವರ್ಷದಿಂದ ಕನ್ನಡ ಸರಕಾರಿ ಶಾಲೆಗಳಲ್ಲಿ ಆರನೇ ತರಗತಿಯಿಂದ ಆಂಗ್ಲ ಮಾಧ್ಯಮ ಬೋಧನೆ ಮಾಡುವ ನಿರ್ಧಾರ ತೆಗೆದುಕೊಂಡ ಸರಕಾರದ ನಿರ್ಧಾರವನ್ನು ಕನಸೆ ಮನವಿಯಲ್ಲಿ ವಿರೋಧಿಸಿದೆ.
ಕನ್ನಡ ಸರಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ವಿಭಾಗವನ್ನು ಪ್ರತ್ಯೇಕವಾಗಿ ವಿಭಾಗ ಮಾಡಿ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಇಂಗ್ಲೀಷ್ ಕಲಿಯಲು ಅಪರೋಕ್ಷವಾಗಿ ಬೆಂಬಲಿಸಿದಂತಾಗುತ್ತದೆ. ಕರ್ನಾಟಕದ ಎಲ್ಲ ಸರಕಾರಿ ಶಾಲೆಗಳಲ್ಲಿ ಕನ್ನಡ ಭಾಷೆಯನ್ನು ಕಡ್ಡಾಯಗೊಳಿಸುವ ಬದಲು ಇಂಥ ಭಾಷಾದ್ರೋಹದ ತೀರ್ಮಾನ ತಗೆದುಕೊಂಡಿರುವುದು ಖಂಡನೀಯ ಎಂದು ದೂರಿದ್ದಾರೆ.
ಕೇರಳ ರಾಜ್ಯದಲ್ಲಿ ಈಗಾಗಲೇ ಆ ರಾಜ್ಯದ ಭಾಷೆಯಾದ ಮಲಯಾಳಂನ್ನು 1 ರಿಂದ 10ನೇ ತರಗತಿಯ ವರೆಗೆ ಕಡ್ಡಾಯವಾಗಿ ಬೋಧಿಸಲು ಭಾಷಾ ಮಸೂದೆಯನ್ನು ಜಾರಿಗೋಳಿಸಿದೆ. ರಾಜ್ಯ ಭಾಷೆ ರಕ್ಷಣೆಗೆ ಅಂಥಹ ಗಟ್ಟಿ ನಿರ್ಧಾರವನ್ನು ಕರ್ನಾಟಕ ಸರಕಾರ ಏಕೆ ತೆಗೆದುಕೊಳ್ಳುತ್ತಿಲ್ಲ. ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆಯಾಗಿರಬೇಕಿತ್ತು. ಆದರೆ ಆಳ್ವಿಕೆಯಲ್ಲಿ ಮಾಡಲು ಬರುವ ಸರಕಾರಗಳ ಸ್ವಾರ್ಥಕ್ಕೆ ರಾಜಕೀಯ ಪ್ರಣಾಳಿಕೆಗಳಿಗೆ ಕನ್ನಡ ಶಿಕ್ಷಣ ವ್ಯವಸ್ಥೆ ಬಲಿಯಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಕನ್ನಡ ಸರಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಬೋಧಿಸಲು ಹೊರಟರೆ ಸಹಜವಾಗಿ ವಿದ್ಯಾರ್ಥಿಗಳು ಆಂಗ್ಲ ಮಾಧ್ಯಮದತ್ತ ಒಲವು ತೋರಿ ಕನ್ನಡ ಮಾಧ್ಯಮವನ್ನು ಕಲಿಯುವುದೇ ಮರೆಯುತ್ತಾರೆ. ಆಗ ಕನ್ನಡ ಮಾಧ್ಯಮ ಶಾಲೆಗಳು ವಿದ್ಯಾರ್ಥಿಗಳಿಲ್ಲದೆ ಮುಚ್ಚಿ ಹೋಗುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಆದ್ದರಿಂದ ಸರಕಾರ ತನ್ನ ನಿರ್ಧಾರದಿಂದ ಹಿಂದೆ ಸರಿಯಬೇಕು. ಇಲ್ಲದಿದ್ದಲ್ಲಿ ಸರಕಾರ ಪ್ರಾರಂಭಿಸಿರುವ 3.770 ಆಂಗ್ಲ ಮಾಧ್ಯಮ ಶಾಲೆಗಳಿಗೆ ಬೀಗ ಜಡಿದು ಉಗ್ರ ಹೋರಾಟ ನಡೆಸಲಾಗುವುದು ಎಂದು ಮನವಿಯಲ್ಲಿ ಎಚ್ಚರಿಸಿದ್ದಾರೆ.
ಪ್ರತಿಭಟನೆಯಲ್ಲಿ ಸಂತೋಷ ಬಾಬು ಸೇರಿದಂತೆ ಮೊದಲಾದವರು ಹಾಜರಿದ್ದರು.

loading...