ಕರಾಡ-ಬೆಳಗಾವಿ ರೈಲು ಯೋಜನೆ ಅನುಷ್ಠಾನ ಯಾವಾಗ ?

0
47

|| 4 ವರ್ಷದ ಹಿಂದೆ 191 ಕಿಮೀ ಸರ್ವೆ ಕಾರ್ಯ ಪೂರ್ಣ || ಕರ್ನಾಟಕ-ಮಹಾ ಸರಕಾರಗಳ ನಿರ್ಲಕ್ಷ್ಯ ||
ಶಿವಾನಂದ ಪದ್ಮಣ್ಣವರ
ಚಿಕ್ಕೋಡಿ 11: ಉತ್ತರ ಕರ್ನಾಟಕ ಹಾಗೂ ದಕ್ಷಿಣ ಮಹಾರಾಷ್ಟ್ರ ರಾಜ್ಯಗಳಿಗೆ ಸಂಪರ್ಕ ಕೊಂಡಿಯಾಗಿರುವ ಕರಾಡ-ಬೆಳಗಾವಿ ರೈಲು ಯೋಜನೆಯ ಸರ್ವೆ ಕಾರ್ಯ ಪೂರ್ಣಗೊಂಡು ನಾಲ್ಕು ವರ್ಷ ಕಳೆದರೂ ಉಭಯ ರಾಜ್ಯ ಸರಕಾರಗಳು ಯೋಜನೆಗೆ ಅಗತ್ಯವಿರುವ ಭೂಮಿ ಹಾಗೂ ಹಣಕಾಸು ನೆರವು ಒದಗಿಸುವಲ್ಲಿ ಹಿಂದೆಬಿದ್ದಿವೆ.
ಹೌದು, ಆರ್ಥಿಕವಾಗಿ, ಸಾಮಾಜಿಕ, ಔದ್ಯೋಗಿಕವಾಗಿ ಹಿಂದುಳಿದಿರುವ ಉತ್ತರ ಕರ್ನಾಟಕದ ಬೆಳಗಾವಿ ಹಾಗೂ ದಕ್ಷಿಣ ಮಹಾರಾಷ್ಟ್ರದ ಕೊಲ್ಹಾಪೂರ ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ 191 ಕಿಮೀ ಅಂತರದ ರೈಲು ಯೋಜನೆ ಅನುಷ್ಠಾನಕ್ಕೆ ಈ ಹಿಂದಿನ ಜನಪ್ರತಿನಿಧಿಗಳು ಎಡಬಿಡದೇ ಪ್ರಯತ್ನ ಮುಂದುವರೆದರೂ ಯೋಜನೆಯ ಜಾರಿಗೆ ರಾಜ್ಯ ಹಾಗೂ ಕೇಂದ್ರ ಸರಕಾರ ವಿಳಂಬ ಧೋರಣೆ ಮುಂದುವರೆಸಿದ್ದು, ಕೇಂದ್ರದಲ್ಲಿ ನರೇಂದ್ರ ಮೋದಿ ಸರಕಾರ ಅಧಿಕಾರಕ್ಕೆ ಬಂದ ನಂತರ ಈ ಯೋಜನೆಗೆ ಯಾವೊಬ್ಬ ಜನಪ್ರತಿನಿಧಿಗಳು ಧ್ವನಿಯೆತ್ತಿದ ಉದಾಹರಣೆಗಳಿಲ್ಲ.
ಕಳೆದ ಎರಡು ದಶಕಗಳಿಂದ ನೆನೆಗುದಿಗೆ ಬಿದ್ದಿರುವ ಯೋಜನೆ ಅನುಷ್ಠಾನಗೊಳಿಸಲು ಕಳೆದ ಬಾರಿ ಕೇಂದ್ರ ರೈಲು ಇಲಾಖೆ ರಾಜ್ಯ ಸಚಿವರಾಗಿದ್ದ ಕೆ.ಎಚ್.ಮುನಿಯಪ್ಪ ಅವರ ಮೂಲಕ ಕೇಂದ್ರದ ಮೇಲೆ ಒತ್ತಡ ತರುವಲ್ಲಿ ಆಗಿನ ಸಂಸದ ರಮೇಶ ಕತ್ತಿ ಹಾಗೂ ಶಾಸಕರಾಗುವ ಜೊತೆಗೆ ರಾಜ್ಯ ರೈಲು ಯೋಜನೆ ಅನುಷ್ಠಾನ ಸಮಿತಿ ಸದಸ್ಯರಾಗಿದ್ದ ಕಾಕಾಸಾಹೇಬ ಪಾಟೀಲ ಈ ಯೋಜನೆ ಬಗ್ಗೆ ಹೆಚ್ಚಿನ ಆಸಕ್ತಿ ತೋರಿದ್ದರ ಪರಿಣಾಮ ಅಂದಿನ ಸರಕಾರ ಈ ಯೋಜನೆಯ ಸರ್ವೆ ಮಾಡುವಂತೆ ಪುಣೆಯ ಸೆಂಟ್ರಲ್ ಡಿವ್ಹಿಜನ್‍ಗೆ ಆದೇಶ ನೀಡಿತ್ತು.
ಇದರ ಪರಿಣಾಮ ಪುಣೆ ಸೆಂಟ್ರಲ್ ಡಿವಿಜನ್ 2014ರಲ್ಲಿ ಪೂರ್ಣಗೊಳಿಸಿದ ಸರ್ವೆ ಪ್ರಕಾರ ಬೆಳಗಾವಿ-ಕಾಕತಿ-ದಡ್ಡಿ-ಸಂಕೇಶ್ವರ-ನಿಪ್ಪಾಣಿ-ಕೊಲ್ಹಾಪೂರ-ಕರಾಡ ಮಾರ್ಗದ ಮುಖಾಂತರ 191 ಕಿಮೀ ಅಂತರದ ರೈಲು ಮಾರ್ಗ ನಿರ್ಮಾಣದ ಅವಶ್ಯಕತೆಯಿದ್ದು, ಈ ಯೋಜನೆಗೆ 2100 ಕೋಟಿ ಅಂದಾಜು ವೆಚ್ಚವಾಗಲಿದೆ. ಈ ಯೋಜನೆಯ ರೈಲು ಮಾರ್ಗ ಕರ್ನಾಟಕದಲ್ಲಿ 97.3 ಕಿಮೀ ಹಾಗೂ ಮಹಾರಾಷ್ಟ್ರದಲ್ಲಿ 94.6 ಕಿಮೀಗಳಷ್ಟು ರೈಲು ಮಾರ್ಗ ನಿರ್ಮಾಣವಾಗಲಿದೆ. ಈ ಯೋಜನೆಗೆ ಕರ್ನಾಟಕ ಹಾಗೂ ಮಹಾರಾಷ್ಟ್ರ ಸರಕಾರಗಳು ಅರ್ಧದಷ್ಟು ರಾಜ್ಯದ ವಂತಿಗೆ ನೀಡುವ ಜೊತೆಗೆ ಅಗತ್ಯವಿರುವ ಭೂಮಿ ಒದಗಿಸಬೇಕಾಗಿದೆ.
ಪರ್ಯಾಯ ಮಾರ್ಗಕ್ಕೂ ಸಿಕ್ಕಿಲ್ಲ ಸಮ್ಮತಿ:
ರೈಲು ಅಂತರ ಕಡಿಮೆಗೊಳಿಸುವ ನಿಟ್ಟಿನಲ್ಲಿ ಚಿಕ್ಕೋಡಿ ತಾಲೂಕಿನ ಪರಕನಟ್ಟಿ-ಅರ್ಜುನವಾಡ-ಸಂಕೇಶ್ವರ-ಕಣಗಲಾ-ನಿಪ್ಪಾಣಿ-ಕಾಗಲ-ಘಡಮುಡಸಿಂಗಿ ಮಾರ್ಗಕ್ಕೆ ಜೋಡಿಸುವ 85 ಕಿಮೀ ಅಂತರದ ಸರ್ವೆ ಕಾರ್ಯ 2013ರಲ್ಲಿ ಪೂರ್ಣಗೊಂಡಿದೆ. ಹುಬ್ಬಳ್ಳಿಯ ನೈರುತ್ಯ ರೈಲು ವಲಯದ ಅಧಿಕಾರಿಗಳು ನಡೆಸಿದ ಯೋಜನೆ ಅನುಷ್ಠಾನದ ಬಗ್ಗೆ ಸರಕಾರಗಳು ಈ ಗಮನಹರಿಸಿಲ್ಲ.
ಮಕ್ಕಳಿಂದ ರೈಲು ಸಚಿವರಿಗೆ ಪತ್ರ:
ಬೆಳಗಾವಿ ಜಿಲ್ಲೆಯ ಕನ್ನಡ, ಇಂಗ್ಲೀಷ, ಉರ್ದು, ಮರಾಠಿ ವಿವಿಧ ಮಾಧ್ಯಮ ಶಾಲೆಯ ಮಕ್ಕಳು ಈ ಭಾಗದಲ್ಲಿ ರೈಲು ಯೋಜನೆ ಅನುಷ್ಠಾನಗೊಳಿಸುವದರಿಂದ ಆಗಲಿರುವ ಅನುಕೂಲತೆಗಳ ಬಗ್ಗೆ ಕೇಂದ್ರ ಸರಕಾರದ ರೈಲು ಸಚಿವರಿಗೆ ಸುಮಾರು 700ಕ್ಕೂ ಶಾಲಾ ಮಕ್ಕಳು ಪತ್ರ ಬರೆಯುವ ಮೂಲಕ ಕೇಂದ್ರ ಸರಕಾರದ ಮೇಲೆ ಒತ್ತಡ ಹೇರಿದರೂ ಯಾವುದೇ ಪ್ರಯೋಜನವಾಗಿಲ್ಲ.
ರೈಲು ಮಾರ್ಗದಿಂದ ಈ ಭಾಗದಲ್ಲಿ ಅನೇಕ ಅಭಿವೃದ್ಧಿಯಾಗತ್ತೇ ಎನ್ನುವ ನಿರೀಕ್ಷೆಯಲ್ಲಿ ಕಾದು ಕುಳಿತಿರುವ ಜನರಿಗೆ ಯೋಜನೆಯ ಅನುಷ್ಠಾನ ಕನಸಿನಂತಾಗಿದ್ದು, ಇನ್ನಾದರೂ ಉಭಯ ರಾಜ್ಯ ಸರಕಾರಗಳು ಯೋಜನೆಗೆ ಅಗತ್ಯವಿರುವ ನೆರವು ಒದಗಿಸಿ ಯೋಜನೆ ಜಾರಿಗೆ ಕೇಂದ್ರ ಸರಕಾರದ ಮೇಲೆ ಒತ್ತಡ ಹೇರಬೇಕಿದೆ.
ಪ್ರತಿಕ್ರಿಯೆ:
ಕಳೆದ ಎರಡು ದಶಕಗಳಿಂದ ಈ ಯೋಜನೆ ಅನುಷ್ಠಾನದ ಕುರಿತು ರೈಲು ಇಲಾಖೆ ಸಚಿವರಿಗೆ, ಇಲಾಖೆ ಹಿರಿಯ ಅಧಿಕಾರಿಗಳಿಗೆ, ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯ ಸರಕಾರಗಳಿಗೆ ಹಲವಾರು ಬಾರಿ ಪತ್ರ ಬರೆದರೂ ಯಾವುದೇ ಪ್ರಯೋಜನವಾಗಿಲ್ಲ. ಸರ್ವೆ ಮುಗಿದು ಮೂರು ವರ್ಷವಾದರೂ ಈ ಯೋಜನೆ ಜಾರಿಗೆ ಜನಪ್ರತಿನಿಧಿಗಳು ಒತ್ತಡ ಹೇರದಿರುವುದೇ ವಿಳಂಬಕ್ಕೆ ಕಾರಣ.
ವಿಲಾಸ ಘೋರ್ಪಡೆ
ಅಧ್ಯಕ್ಷರು, ಕರಾಡ-ಬೆಳಗಾವಿ ರೈಲು ಅನುಷ್ಠಾನ ಹೋರಾಟ ಸಮಿತಿ

loading...