ಕಾಂಗ್ರೆಸ್-ಬಿಜೆಪಿ ಆಡಳಿತಾವಧಿಯಲ್ಲಿ ಅಭಿವೃದ್ಧಿ ಗೌಣ: ಹಡಪದ ಆರೋಪ

0
45

ಕನ್ನಡಮ್ಮ ಸುದ್ದಿ-ಗಜೇಂದ್ರಗಡ: ಪುರಸಭೆ ಅಧಿಕಾರ ಚುಕ್ಕಾಣಿ ಹಿಡಿದಿದ್ದ ಕಾಂಗ್ರೆಸ್-ಬಿಜೆಪಿಯ ಆಡಳಿತಾವಧಿಯಲ್ಲಿ ಪಟ್ಟಣದಲ್ಲಿನ ಜನತೆಗೆ ಕುಡಿಯುವ ನೀರು, ನಿವೇಶನ ಹಾಗೂ ಹಕ್ಕುಪತ್ರ ಸೇರಿ ಮೂಲ ಸೌಲಭ್ಯಗಳನ್ನು ಮರೀಚಿಕೆ ಮಾಡಿ ಪಕ್ಷದ ಸ್ವಹಿತಾಸಕ್ತಿ ಕಾಪಾಡುವ ಮೂಲಕ ವಿಶ್ವಾಸ ಇಟ್ಟಿದ್ದ ಜನತೆಗೆ ಅನ್ಯಾಯ ಎಸಗಿದ್ದಾರೆ ಎಂದು ಪುರಸಭೆ ಸದಸ್ಯ ಎಂ.ಎಸ್. ಹಡಪದ ಆರೋಪಿಸಿದರು.
ಸ್ಥಳೀಯ ಕಾರ್ಯನಿರತ ಪತ್ರಕರ್ತರ ಸಂಘದ ಪತ್ರಿಕಾ ಭವನದಲ್ಲಿ ಸಿಪಿಐ(ಎಂ) ಪಕ್ಷದ ವತಿಯಿಂದ ಜರುಗಿದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಗಜೇಂದ್ರಗಡದಲ್ಲಿ 25 ದಿನಕ್ಕೊಮ್ಮೆ ನೀರು ಸರಬರಾಜು ಮಾಡುತ್ತಿದ್ದ ಪರಿಣಾಮ ಜನತೆ ನೀರಿಗಾಗಿ ಪರಿತಪಿಸುವಂತಾಗಿತ್ತು. ಆದರೆ, ಈಗ ಕೆಲ ದಿನಗಳಿಂದ 8 ದಿನಕ್ಕೊಮ್ಮೆ ನೀರು ಪೂರೈಸುತ್ತಿದ್ದಾರೆ. ಯಾವುದೇ ಕೆರೆ ಕಟ್ಟೆಗಳು ತುಂಬಿಲ್ಲ, ಹೊಸ ಬೊರವೆಲ್ ಕೊರೆಸಿಲ್ಲ. ಈಗೆಲ್ಲಿಂದ ಬಂತು ನೀರು ಎಂದು ಪ್ರಶ್ನಿಸಿದ ಅವರು, ಕಾಂಗ್ರೆಸ್-ಬಿಜೆಪಿಯ ಕೆಲ ಪ್ರಭಾವಿ ರಾಜಕಾರಣಿಗಳು ಪಟ್ಟಣದಲ್ಲಿ ಕೃತಕ ನೀರಿನ ಅಭಾವ ಸೃಷ್ಟಿಸಿ, ವ್ಯವಸ್ಥಿತವಾಗಿ ಟ್ಯಾಂಕರ್ ಮಾಫಿಯಾ ಹುಟ್ಟು ಹಾಕುವ ಮೂಲಕ ತಮ್ಮದೆ ಬೊರ್‍ವೆಲ್‍ನಿಂದ ಟ್ಯಾಂಕರ್‍ಗಳಿಗೆ ನೀರು ನೀಡುವುದಲ್ಲದೆ, ಅವೈಜ್ಞಾನಿಕ ದರ ನಿಗದಿ ಮಾಡಿ ಸಾರ್ವಜನಿಕರ ಲಕ್ಷಾಂತರ ತೆರಿಗೆ ಹಣ ಪೋಲು ಮಾಡಿದ್ದಾರೆ ಎಂದು ದೂರಿದ ಅವರು, ಈ ಹಿಂದಿನ ಬಿಜೆಪಿ ಸರ್ಕಾರದ ಅವಧಿ 2010 ರಲ್ಲಿ ಉಣಚಗೇರಿ ಬಳಿಯ 7 ಎಕರೆ ಜಮೀನಿನಲ್ಲಿ ಹಾಗೂ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ 9 ಎಕರೆ ಜಮೀನಿನಲ್ಲಿ ಮನೆ ಹಾಗೂ ನಿವೇಶನ ನೀಡುತ್ತೇವೆ ಎಂದು ಜನತೆಗೆ ಮೋಸ ಮಾಡುವ ಮೂಲಕ ಚುನಾವಣೆ ಎದುರಿಸುತ್ತಾ ಬಂದಿದ್ದಾರೆ. ಹೀಗಾಗಿ, ಈ ಬಾರಿಯ ಚುನಾವಣೆಯಲ್ಲಿ ಎರಡು ಪಕ್ಷವನ್ನು ತಿರಸ್ಕರಿಸುವ ಮೂಲಕ ಜನಪರ ಹೋರಾಟ ಮತ್ತು ಆಡಳಿತ ನಡೆಸುವ ಸಿಪಿಐಎಂ ಬೆಂಬಲಿಸಬೇಕು ಎಂದು ಮನವಿ ಮಾಡಿದರು.
ಮಹೇಶ ಪತ್ತಾರ ಮಾತನಾಡಿ, ಪಟ್ಟಣದ ಕಳೆದ ಪುರಸಭೆ ಚುನಾವಣೆಯಲ್ಲಿ 8 ಅಭ್ಯರ್ಥಿಗಳನ್ನು ನಿಲ್ಲಿಸಲಾಯಿತು. ಇದರಲ್ಲಿ ಜನತೆ 2ನೇ ವಾರ್ಡ್‍ನ ಅಭ್ಯರ್ಥಿಯಾಗಿದ್ದ ಎಂ.ಎಸ್. ಹಡಪದ ಅವರನ್ನು ಆಯ್ಕೆ ಮಾಡಿದ್ದರು. ಹೀಗಾಗಿ, ಜನತೆ ಇಟ್ಟಿದ್ದ ವಿಶ್ವಾಸ ಹಾಗೂ ನಂಬಿಕೆಗೆ ದಕ್ಕೆ ಬಾರದಂತೆ ಕೆಲಸ ನಿರ್ವಹಿಸಿರುವ ಪರಿಣಾಮ ಈ ಭಾರಿ ಪಕ್ಷದಿಂದ 15 ಅಭ್ಯರ್ಥಿಗಳು ಚುನಾವಣೆಯಲ್ಲಿ ಸ್ಪರ್ಧಿಸಲಿದ್ದು, ಜನತೆಯ ಆಶೋತ್ತರಗಳಿಗೆ ಸ್ಪಂದಿಸುವ ಸಿಪಿಐ(ಎಂ) ಅಭ್ಯರ್ಥಿಗಳನ್ನು ಗೆಲ್ಲಿಸಿ ಎಂದರು.
ಬಾಲು ರಾಠೋಡ, ಮಾರುತಿ ಚಿಟಗಿ ಮಾತನಾಡಿ, ಪಟ್ಟಣದ 7 ಸ್ಲಂ ವಾರ್ಡ್‍ಗಳಲ್ಲಿ ಹೇಳಿಕೊಳ್ಳುವ ಅಭಿವೃದ್ಧಿಕಾರ್ಯ ನಡೆದಿಲ್ಲ, ಕನಿಷ್ಟ ಸೌಲಭ್ಯಕೂಡ ಇಲ್ಲಿಲ್ಲ. ಪಕ್ಷ ಅಧಿಕಾರಕ್ಕೆ ಸ್ಲಂಗಳ ಅಭಿವೃದ್ಧಿ ಜೊತೆಗೆ ಪಟ್ಟಣದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತೇವೆ ಎಂದರು.
ಮಹೇಶ ಹಿರೇಮಠ, ಫಯಾಜ್ ತೋಟದ, ಪೀರು ರಾಠೋಡ, ಮೈಬು ಹವಾಲ್ದಾರ, ಇಮಾಮಸಾಬ ಆನಿ, ರಜಾಕ ಗೋಡೆಕಾರ ಇದ್ದರು.

loading...