ಕಾರ್ಮಿಕರ ಹಿತರಕ್ಷಣೆಯಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ: ಕೇಂದ್ರ ಸಚಿವ ಸಂತೋಷ್ ಕುಮಾರ್

0
4

ಕನ್ನಡಮ್ಮ ಸುದ್ದಿ-ಹುಬ್ಬಳಿ: ಕರ್ನಾಟಕ ರಾಜ್ಯವು ಕಾರ್ಮಿಕರ ಕಲ್ಯಾಣ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡುವಲ್ಲಿ ದೇಶದಲ್ಲಿಯೇ ಮುಂಚೂಣಿಯಲ್ಲಿದೆ ಎಂದು ಕೇಂದ್ರದ ಕಾರ್ಮಿಕ ಮತ್ತು ಉದ್ಯೋಗ ಖಾತೆ ರಾಜ್ಯ ಸಚಿವರಾದ ಸಂತೋಷ್ ಕುಮಾರ್ ಗಂಗ್ವಾರ್ ಮುಕ್ತಕಂಠದಿಂದ ಶ್ಲಾಘಿಸಿದರು.
ಹುಬ್ಬಳ್ಳಿಯ ಕೃಷ್ಣಾಪುರದಲ್ಲಿ ನೂತನವಾಗಿ ನಿರ್ಮಿಸಲಾಗುತ್ತಿರುವ ಧಾರವಾಡ ಜಿಲ್ಲಾ ಕಾರ್ಮಿಕ ಕಛೇರಿಗಳ ಕಟ್ಟಡ ಕಾಮಗಾರಿಯ ಭೂಮಿಪೂಜೆ, ಶಿಲಾನ್ಯಾಸ ಕಾರ್ಯಕ್ರಮದ ಬಳಿಕ ನ್ಯೂ ಕಾಟನ್ ಮಾರುಕಟ್ಟೆಯ ಸಾಂಸ್ಕøತಿಕ ಭವನದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಫಲಾನುಭವಿಗಳಿಗೆ ವಿವಿಧ ಸೌಲಭ್ಯಗಳನ್ನು ವಿತರಿಸಿ ಅವರು ಮಾತನಾಡಿದರು. ಅಸಂಘಟಿತ ವಲಯದ ಕಾರ್ಮಿಕರ ಸಂಖ್ಯೆ ನಿರ್ಮಾಣ ವಲಯದಲ್ಲಿ 5 ಕೋಟಿಗೂ ಅಧಿಕವಿದೆ. ಪ್ರಧಾನಮಂತ್ರಿ ರೋಜಗಾರ್ ಪ್ರೋತ್ಸಾಹ ಯೋಜನೆ, ಅಟಲ್ ಬೀಮಿತ್ ವ್ಯಕ್ತಿ ಕಲ್ಯಾಣ ಯೋಜನೆ ಸೇರಿದಂತೆ ಹಲವು ಕಲ್ಯಾಣ ಕಾರ್ಯಕ್ರಮಗಳನ್ನು ಕೇಂದ್ರ ಸರ್ಕಾರ ಜಾರಿಗೊಳಿಸಿದೆ. ಅವುಗಳ ಪ್ರಯೋಜನಗಳನ್ನು ದೇಶದ ಎಲ್ಲಾ ರಾಜ್ಯಗಳು ಪಡೆಯಬೇಕು. ಕರ್ನಾಟಕದಲ್ಲಿ 18 ಲಕ್ಷಕ್ಕೂ ಅಧಿಕ ಕಾರ್ಮಿಕರು ನೊಂದಣಿ ಮಾಡಿಕೊಂಡಿದ್ದಾರೆ. ಸರ್ವೋಚ್ಛ ನ್ಯಾಯಾಲಯದ ನಿರ್ದೇಶನದಂತೆ ಸರ್ಕಾರ ಸಂಗ್ರಹಿಸುವ ಕಾರ್ಮಿಕರ ಪಾಲಿನ ಸೆಸ್‍ನ್ನು ಅವರ ಕಲ್ಯಾಣಕ್ಕಾಗಿಯೇ ವಿನಿಯೋಗಿಸಲು ಕೇಂದ್ರ ಸಿದ್ಧವಿದೆ. ಈ ಕುರಿತು ಬರುವ ಏಪ್ರಿಲ್‍ನಲ್ಲಿ ಎಲ್ಲಾ ರಾಜ್ಯಗಳ ಕಾರ್ಮಿಕ ಸಚಿವರ ಸಭೆ ನಡೆಸಲಾಗುವುದು.
ಇದುವರೆಗೂ ಸಂಗ್ರಹಿಸಿರುವ 20 ಸಾವಿರ ಕೋಟಿ ರೂ.ಗಳಲ್ಲಿ 12 ಸಾವಿರ ಕೋಟಿ ರೂ.ಗಳನ್ನು ಕಾರ್ಮಿಕರ ಕಲ್ಯಾಣ ಚಟುವಟಿಕೆಗಳಲ್ಲಿ ವಿನಿಯೋಗಿಸಲಾಗಿದೆ ಎಂದು ಹೇಳಿದರು. ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ಸರಕಾರದ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಮಳೆ, ಚಳಿ, ಬಿಸಿಲು ಲೆಕ್ಕಿಸದೇ ದುಡಿಯುವ ಕಾರ್ಮಿಕರು ತಮ್ಮ ಮಕ್ಕಳ ಭವಿಷ್ಯ ಗಮನದಲ್ಲಿಟ್ಟುಕೊಂಡು ಶಿಕ್ಷಣ ಕೊಡಿಸಬೇಕು ಎಂದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಸಕ ಅರವಿಂದ ಬೆಲ್ಲದ ಮಾತನಾಡಿ, ಉತ್ತರ ಕರ್ನಾಟಕದ ಪ್ರಮುಖ ನಗರವಾಗಿರುವ ಹುಬ್ಬಳ್ಳಿಯಲ್ಲಿ ಸುಸಜ್ಜಿತ ಕಾರ್ಮಿಕ ತರಬೇತಿ ಅಕಾಡೆಮಿ ಸ್ಥಾಪಿಸಬೇಕು. ಆ ಮೂಲಕ ಈ ಭಾಗದ ಕಾರ್ಮಿಕರಿಗೆ ಕೌಶಲ್ಯ ಅಭಿವೃದ್ಧಿ ಪಡಿಸಿಕೊಳ್ಳಲು ಮಾರ್ಗದರ್ಶನ ನೀಡಬೇಕು ಎಂದರು.ಸಂಸದ ಪ್ರಲ್ಹಾದ ಜೋಷಿ, ಶಾಸಕ ಅರವಿಂದ ಬೆಲ್ಲದ, ಜಿಪಂ ಅಧ್ಯಕ್ಷೆ ಚೈತ್ರಾ ಶಿರೂರ, ಕಾರ್ಮಿಕ ಇಲಾಖೆಯ ಸರಕಾರದ ಕಾರ್ಯದರ್ಶಿ ಅಮ್ಲನ್ ಆದಿತ್ಯ ಬಿಸ್ವಾಸ್, ಆಯುಕ್ತ ಎನ್.ಪಾಲಯ್ಯ, ಉಪ ಕಾರ್ಮಿಕ ಆಯುಕ್ತ ವೆಂಕಟೇಶ್ ಶಿಂದಿಹಟ್ಟಿ, ಸಹಾಯಕ ಕಾರ್ಮಿಕ ಆಯುಕ್ತೆ ಮೀನಾ ಪಾಟೀಲ್ ಇದ್ದರು.

loading...