ಕಾಶ್ಮೀರ ವಿಷಯ ಚರ್ಚಿಸದಿರಲು ಟ್ರಂಪ್ ನಿರ್ಧಾರ; ಹರ್ಷವರ್ಧನ್ ಶ್ರಿಂಗ್ಲಾ

0
4
Official portrait of President Donald J. Trump, Friday, October 6, 2017. (Official White House photo by Shealah Craighead)

ವಾಷಿಂಗ್ಟನ್ :- ಕಾಶ್ಮೀರ ವಿಷಯದಲ್ಲಿ ಮಧ್ಯಸ್ಥಿಕೆ ವಹಿಸಲು ಸಿದ್ಧ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿದ್ದ ಹೇಳಿಕೆ, ಭಾರತದಲ್ಲಿ ತೀವ್ರ ವಿವಾದಕ್ಕೆ ಹಾದಿ ಮಾಡಿಕೊಟ್ಟಿತ್ತು. ಆದರೆ, ಇತ್ತೀಚಿನ ಪರಿಸ್ಥಿತಿಯ ಹಿನ್ನೆಲೆಯಲ್ಲಿ, ಇನ್ನೂ ಮುಂದೆ ಕಾಶ್ಮೀರ ವಿಷಯದ ಬಗ್ಗೆ ಯಾವುದೇ ಹಸ್ತಕ್ಷೇಪ ನಡೆಸದಿರಲು ಟ್ರಂಪ್ ನಿರ್ಧರಿಸಿದ್ದಾರೆ ಎಂಬುದು ಹೊಸ ಸುದ್ದಿ.
ಕಾಶ್ಮೀರ ವಿಷಯದಲ್ಲಿ ಮಧ್ಯಸ್ಥಿಕೆ ವಹಿಸುವೆ ಎಂದು ನೀಡಿದ್ದ ಆಹ್ವಾನ ಇನ್ನೆಂದಿಗೂ ಚರ್ಚಿಗೆ ಬರುವುದಿಲ್ಲ ಎಂದು ಡೋನಾಲ್ಡ್ ಟ್ರಂಪ್ ಸ್ಪಷ್ಟಪಡಿಸಿದ್ದಾರೆ ಎಂದು ಅಮೆರಿಕಾದಲ್ಲಿನ ಭಾರತ ರಾಯಭಾರಿ ಹರ್ಷವರ್ಧನ್ ಶ್ರಿಂಗ್ಲಾ ಹೇಳಿದ್ದಾರೆ.
ಜಮ್ಮು ಮತ್ತು ಕಾಶ್ಮೀರ ವಿಷಯದಲ್ಲಿ ಮಧ್ಯಸ್ಥಿಕೆ ವಹಿಸುವ ತಮ್ಮ ಪ್ರಸ್ತಾಪ ಭಾರತ ಹಾಗೂ ಪಾಕಿಸ್ತಾನದ ಸಮ್ಮತಿಯ ಮೇಲೆ ಆಧಾರಿತವಾಗಿದ್ದು, ಉಭಯ ದೇಶಗಳು ಒಪ್ಪಿದರೆ ಮಧ್ಯಸ್ಥಿಕೆ ವಹಿಸಲು ಸಿದ್ಧ ಎಂದು ಹೇಳಿದ್ದರು.
ಆದರೆ, ಮಧ್ಯಸ್ಥಿಕೆ ಪ್ರಸ್ತಾಪವನ್ನು ಸ್ವೀಕರಿಸಲು ಭಾರತ ತಳ್ಳಿಹಾಕಿರುವ ಹಿನ್ನೆಲೆಯಲ್ಲಿ ಮಧ್ಯಸ್ಥಿಕೆ ವಿಷಯ ಎಂದೂ ಚರ್ಚಿಸುವುದಿಲ್ಲ. ಕಾಶ್ಮೀರ ವ್ಯವಹಾರದಲ್ಲಿ ಮಧ್ಯಸ್ಥಿಕೆ ವಹಿಸದಿರುವುದು ಅಮೆರಿಕ ದಶಕಗಳಿಂದ ಪಾಲಿಸಿಕೊಂಡು ಬಂದಿರುವ ನೀತಿಯಾಗಿದೆ. ಆದರೆ, ಭಾರತ ಮತ್ತು ಪಾಕಿಸ್ತಾನ ದ್ವಿಪಕ್ಷೀಯ ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಲು ಉಭಯ ದೇಶಗಳಿಗೆ ಪ್ರೋತ್ಸಾಹ, ಉತ್ತೇಜನ ನೀಡುತ್ತದೆ ಎಂದು ಹರ್ಷವರ್ಧನ್ ಶ್ರಿಂಗ್ಲಾ ಫಾಕ್ಸ್ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಅಮೆರಿಕ ಪ್ರವಾಸದಲ್ಲಿದ್ದ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರೊಂದಿಗೆ ಜುಲೈ 22 ಡೋನಾಲ್ಡ್ ಟ್ರಂಪ್ ಪತ್ರಿಕಾಗೋಷ್ಠಿ ನಡೆಸಿದ್ದಾಗ, ಕಾಶ್ಮೀರ ವಿಷಯದಲ್ಲಿ ಮಧ್ಯಸ್ಥಿಕೆ ವಹಿಸುವಂತೆ ಭಾರತ ಪ್ರಧಾನಿ ನರೇಂದ್ರ ಮೋದಿ ತಮ್ಮನ್ನು ಕೇಳಿಕೊಂಡಿದ್ದರು ಎಂದು ಟ್ರಂಪ್ ಹೇಳಿದ್ದರು. ಟ್ರಂಪ್ ಅವರ ಹೇಳಿಕೆ ಭಾರತದಲ್ಲಿ ವಿವಾದ ಸೃಷ್ಟಿಸಿದ್ದವು. ಇದಕ್ಕೆ ತೀವ್ರವಾಗಿ ಪ್ರತಿಕ್ರಿಯಿಸಿದ್ದ ಭಾರತ ಸರ್ಕಾರ, ಅಮೆರಿಕ ಅಧ್ಯಕ್ಷರ ಹೇಳಿಕೆಯನ್ನು ಸ್ಪಷ್ಟವಾಗಿ ನಿರಾಕರಿಸಿತು. ಪ್ರಧಾನಿ ನರೇಂದ್ರ ಮೋದಿ, ಅಮೆರಿಕಾ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಜತೆ ಕಾಶ್ಮೀರ ಕುರಿತು ಯಾವುದೇ ಪ್ರಸ್ತಾಪ ಮಾಡಿಲ್ಲ ಭಾರತ ಸ್ಪಷ್ಟಪಡಿಸಿತ್ತು.
ಇದಾದ ಕೆಲವೇ ದಿನಗಳಲ್ಲಿ ಟ್ರಂಪ್, “ಕಾಶ್ಮೀರ ವಿಷಯ ಭಾರತ, ಪಾಕಿಸ್ತಾನ ನಡುವಣ ದ್ವಿಪಕ್ಷೀಯ ವಿಷಯವಾಗಿದೆ” ಎಂದು ಹೇಳಿದ್ದರು. ಸಮಸ್ಯೆ ಪರಿಹರಿಸಲು ನಮ್ಮ ಸಹಾಯ ಕೇಳಿದರೆ ನಾವು ಮಧ್ಯಸ್ಥಿಕೆ ವಹಿಸಲು ಸಿದ್ಧರಿದ್ದೇವೆ, ”ಎಂದು ಅವರು ಸ್ಪಷ್ಟಪಡಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಭಾರತ , ಕಾಶ್ಮೀರದ ಬಗ್ಗೆ ಯಾವುದೇ ಮಾತುಕತೆ ನಡೆದರೆ ಅದು ಪಾಕಿಸ್ತಾನದೊಂದಿಗೆ ಮಾತ್ರ .. ಅದೂ ಕೂಡ ದ್ವಿಪಕ್ಷೀಯ ಮಾತುಕತೆ ಮಾತ್ರ ಎಂದು ಕಡ್ಡಿತುಂಡಾಗುವಂತೆ ಸ್ಪಷ್ಟಪಡಿಸಿತ್ತು. ಜಮ್ಮು ಮತ್ತು ಕಾಶ್ಮೀರದಲ್ಲಿ 370 ನೇ ವಿಧಿ ರದ್ದುಗೊಳಿಸುವ ಭಾರತ ಸರ್ಕಾರ ಕ್ರಮಕ್ಕೆ ಪ್ರತಿಕ್ರಿಯಿಸಿದ್ದ ಅಮೆರಿಕಾ, ಅದು ಸಂಪೂರ್ಣ ದ್ವಿಪಕ್ಷೀಯ ವಿಷಯ ಎಂದು ಹೇಳಿತ್ತು.

loading...