ಕೂರ್ಮಗಡ ಬೋಟ್‌ ದುರಂತ: ಹೆಚ್ಚಿನ ಪರಿಹಾರಕ್ಕೆ ಒತ್ತಾಯ

0
14

ಕಾರವಾರ: ಇಲ್ಲಿನ ಕೂರ್ಮಗಡ ಬೋಟ್‌ ದುರಂತದಲ್ಲಿ ಮಡಿದವರಿಗೆ ಕೇವಲ ಎರಡು ಲಕ್ಷ ರೂ. ಪರಿಹಾರ ಘೋಷಿಸಿ ಸರಕಾರ ಉತ್ತರ ಕರ್ನಾಟಕದವರಿಗೆ ಒಂದು ರೀತಿ ಮತ್ತು ದಕ್ಷಿಣ ಕರ್ನಾಟಕದ ಜನರಿಗೆ ಇನ್ನೊಂದು ರೀತಿಯಲ್ಲಿ ತಾರತಮ್ಯ ತೋರುತ್ತಿದೆ ಎಂದು ವಿದ್ಯಾರ್ಥಿ ಒಕ್ಕೂಟದ ಜಿಲ್ಲಾಧ್ಯಕ್ಷ ರಾಘು ನಾಯ್ಕ ಆರೋಪಿಸಿದರು.
ನಗರದಲ್ಲಿ ಬುಧವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಡಿಸೆಂಬರ್‌ ತಿಂಗಳಲ್ಲಿ ನಡೆದ ಮಂಡ್ಯ ದುರ್ಘಟನೆಯಲ್ಲಿ ಮಡಿದವರ ಕುಟುಂಬಗಳಿಗೆ 5 ಲಕ್ಷ ರೂ. ಪರಿಹಾರ ತಕ್ಷಣ ಘೋಷಿಸಿದ ಸರಕಾರ ಕಾರವಾರದಲ್ಲಿ ದುರಂತ ನಡೆದು ನಾಲ್ಕು ದಿನ ಕಳೆಯುತ್ತಾ ಬಂದರೂ ಇನ್ನು ತನಕ ಹೆಚ್ಚಿನ ಪರಿಹಾರ ಘೋಷಿಸಿಲ್ಲ. ಮಂಡ್ಯ,ಹಾಸನ ಭಾಗಕ್ಕೆ ಪರಿಹಾರದಿಂದ ಹಿಡಿದು ನಾನಾ ಸೌಲಭ್ಯವನ್ನು ವಿಶೇಷ ಆಸಕ್ತಿಯಿಂದ ನೀಡುವ ಸರಕಾರ ಉತ್ತರಕರ್ನಾಟಕದ ಜನರ ವಿಷಯದಲ್ಲಿ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಚುನಾಯಿತ ಸರಕಾರ ಕೇವಲ ನಿರ್ದಿಷ್ಟ ಭಾಗಕ್ಕೆ ಸೀಮಿತವಾಗದೇ, ಅಖಿಲ ಕರ್ನಾಟಕದ ಜನತೆಯ ಒಳಿತಿನ ಬಗ್ಗೆ ಚಿಂತನೆ ನಡೆಸಬೇಕು.ಆದ್ದರಿಂದ ಕೂರ್ಮಗಡ್‌ ಅವಘಡದಲ್ಲಿ ಮಡಿದವರಿಗೆ ಕೂಡಲೇ ತಲಾ 10 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು. ದುರಂತ ತಡೆಯುವಲ್ಲಿ ಜಿಲ್ಲಾಡಳಿತ ಮತ್ತು ಪೊಲೀಸ್‌ ಇಲಾಖೆ ಸಂಪೂರ್ಣವಾಗಿ ವಿಫಲವಾಗಿದೆ. ಇನ್ನು ಮುಂದೆಯಾದರೂ ಜಿಲ್ಲಾಡಳಿತ ಜಾಗೃತಗೊಂಡು, ಯಾತ್ರಿಕರ ಸುರಕ್ಷತೆ ಬಗ್ಗೆ ನಿಗಾ ವಹಿಸಬೇಕು. ಶಾಸಕರ ನೇತ್ರತ್ವದಲ್ಲಿ ಕರಾವಳಿ ಉತ್ಸವ ನಡೆಸುವಂತೆ, ಜಾತ್ರೆ ನಡೆಯುವ ಒಂದು ವಾರದ ಮುಂಚೆಯೇ ಶಾಸಕರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿಕೊಂಡು ಅವಶ್ಯಕ ಸುರಕ್ಷತಾ ಕ್ರಮ ಕೈಗೊಳ್ಳಬೇಕು.
ಶಾಸಕಿ ರೂಪಾಲಿ ನಾಯ್ಕ ಅವರು ಮುಳುಗಡೆಯಾಗುತ್ತಿದ್ದ ಕೆಲ ಜನರ ಜೀವ ಉಳಿಸಲು ಕಾರಣರಾಗಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಆದರೆ ಮೃತ ಕುಟುಂಬದವರಿಗೆ ಹೆಚ್ಚಿನ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ ನನ್ನನ್ನು ಅವಾಚ್ಯ ಶಬ್ಧಗಳಿಂದ ಬೈದು ಅವಮಾನ ಮಾಡಿರುವುದು ಖಂಡನೀಯವಾಗಿದೆ. ಈ ಬಗ್ಗೆ ಕಾನೂನು ಹೋರಾಟ ಮಾಡಲಾಗುವುದು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಚಂದ್ರಕಾಂತ್‌ ನಾಯ್ಕ, ಖಲೀಲುಲ್ಲಾ, ಶಾದಿಕ್‌ ಖಾನ್‌, ಸಂದೀಪ್‌ ಭಂಡಾರಿ, ಸರಫ್‌ರಾಜ್‌ ಇದ್ದರು.

loading...