ಕೆಟ್ಟದಾಗಿ ಮಾತನಾಡುವುದು ಈಶ್ವರಪ್ಪನವರ ಸಂಸ್ಕೃತಿ: ಡಿ.ಕೆ.ಶಿವಕುಮಾರ್

0
4

ಹುಬ್ಬಳ್ಳಿ:-ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಇಂದು ಇಲ್ಲಿನ ಖಾಸಗಿ ಹೋಟೆಲ್‌ನಲ್ಲಿ ಸರಳವಾಗಿ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡರು.
ಅಭಿಮಾನಿಗಳು ತಂದಿದ್ದ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿಕೊಂಡ ಅವರಿಗೆ ಹಲವು ನಾಯಕರು, ಕಾರ್ಯಕರ್ತರು ಶುಭಹಾರೈಸಿದರು.
ಇದೇ ವೇಳೆ “ಕಾಂಗ್ರೆಸ್‌ನವರೆಲ್ಲ ನರ ಸತ್ತವರು ಎಂಬ” ಬಿಜೆಪಿ ನಾಯಕ ಕೆ.ಎಸ್.ಈಶ್ವರಪ್ಪ ಅವರ ಹೇಳಿಕೆಗೆ ತಿರುಗೇಟು ನೀಡಿದ ಶಿವಕುಮಾರ್, ನರ ಇದೆಯೋ ಸತ್ತಿದೆಯೋ ಎಂಬುದರ ಬಗ್ಗೆ ಪರೀಕ್ಷೆ ಮಾಡುವ ಶಕ್ತಿ ಅವರಿಗಿದ್ದರೆ ನಮ್ಮ ಜನ ತೋರಿಸುತ್ತಾರೆ. ಗಂಡಸ್ತನದ ಬಗ್ಗೆ ಪರೀಕ್ಷೆ ಮಾಡಲಿ, ಯಾರು ಗಂಡಸು, ಯಾರು ನರ ಸತ್ತವರು ಎನ್ನುವುದು ತಿಳಿಯುತ್ತದೆ ಎಂದು ಖಾರವಾಗಿ ಪ್ರತಿಕ್ರಿಯಿಸಿದರು.

ಕೆ.ಎಸ್.ಈಶ್ವರಪ್ಪ ಅವರಂತಹ ನಾಯಕರಿಂದಲೇ ಕಾಂಗ್ರೆಸ್ ಪಕ್ಷಕ್ಕೆ ಶ್ರೇಯಸ್ಸಾಗಲಿದೆ. ಈ ರೀತಿ ಕೆಟ್ಟದಾಗಿ ಮಾತನಾಡುವುದು ಈಶ್ವರಪ್ಪನವರ ಸಂಸ್ಕೃತಿಯಾಗಿದೆ ಎಂದು ಹರಿಹಾಯ್ದರು.
ಮೈತ್ರಿ ಸರ್ಕಾರದ ಅಸಮಾಧಾನದ ಬಗ್ಗೆ ಜೆಡಿಎಸ್ ವರಿಷ್ಠ ಎಚ್‌.ಡಿ. ದೇವೇಗೌಡ ಅವರು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಪತ್ರ ಬರೆದ ವಿಚಾರದ ಬಗ್ಗೆ ಕೇಳಿದಾಗ, ಈ ಇಬ್ಬರು ನಾಯಕರ ನಡುವೆ ಯಾವ ಪತ್ರ ವ್ಯವಹಾರವೂ ಆಗಿಲ್ಲ. ಇದು ಕೇವಲ ವದಂತಿ. ರಾಹುಲ್ ಮತ್ತು ದೇವೇಗೌಡ ಅವರು ಮಾಡಿಕೊಂಡ ಒಪ್ಪಂದ ಮುಂದುವರೆಯುತ್ತದೆ. ದೋಸ್ತಿ ಸರ್ಕಾರ ಕಿತ್ತೆಸೆಯಲು ಇದು ಕಡಲೇಕಾಯಿ ಗಿಡ ಅಲ್ಲ ಎಂದು ಹೇಳಿದರು.

ಸರ್ಕಾರದಲ್ಲಿ ಗೊಂದಲ ಸೃಷ್ಟಿ ಮಾಡಲು ಬಿಜೆಪಿ ಪ್ರಯತ್ನಿಸುತ್ತಿದೆ. ಹಿಂದಿನಿಂದಲೂ ಇದೇ ಮಾಡಿಕೊಂಡು ಬಂದಿದೆ. ಅದೇ ಅವರ ಕೆಲಸ. 20 ಜನ ಶಾಸಕರು ನಮ್ಮ ಜತೆ ಇದ್ದಾರೆ ಎಂದು ಹೇಳಿ ಗೊಂದಲ ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದರು.

ಮೈತ್ರಿ ಬೇಡ ಚುನಾವಣೆಗೇ ಹೋಗೋಣ ಎಂದು ಬಿಜೆಪಿ ಹೈಕಮಾಂಡ್‌ ನಿರ್ಧರಿಸಿದರೆ ನಾವೇನು ಇದನ್ನು ನೋಡಿಕೊಂಡು ಸುಮ್ಮನಿರುವುದಿಲ್ಲ. ಪ್ರಾರಂಭದಿಂದ ಬಿಜೆಪಿಯವರು ಸರ್ಕಾರದ ಪತನಕ್ಕೆ ಅನೇಕ ಗಡುವು ನೀಡಿದ್ದಾರೆ. ಇವರ ರಾಜಕೀಯ ನೋಡಿ ಅಸಹ್ಯವಾಗುತ್ತಿದೆ. ಅಧಿಕಾರ ಇಲ್ಲದೆ ಇರಲು ಅವರಿಗೆ ಆಗುತ್ತಿಲ್ಲ. ಅಧಿಕಾರ ಇದ್ದಾಗ ಅದನ್ನು ಸರಿಯಾಗಿ ಬಳಸಿಕೊಂಡಿಲ್ಲ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಐಟಿ ದಾಳಿಯ ಬಗ್ಗೆ ಕೇಳಿದ ಪ್ರಶ್ನೆಗೆ. ಕಾನೂನು, ನ್ಯಾಯ ಇದೆ. ಕಾನೂನಿಗಿಂತ ಯಾರೂ ದೊಡ್ಡವರಲ್ಲ. ಕಾನೂನು ಮತ್ತು ನ್ಯಾಯದಲ್ಲಿ ತಮಗೆ ನಂಬಿಕೆ ಇದೆ. ಕಾನೂನು ಹೋರಾಟ ಮುಂದುವರಿಸುತ್ತೇನೆ ಎಂದು ಹೇಳಿದರು.

loading...