ಕೊಲೆ‌ ಆರೋಪಿ ಮೇಲೆ ಪೊಲೀಸ್ ಗುಂಡೇಟು

0
4

ಬೆಂಗಳೂರು- ಕ್ಷುಲ್ಲಕ ಕಾರಣಕ್ಕೆ ಮಂಗಳಮುಖಿ ಸೇರಿದಂತೆ ನಾಲ್ವರ ಗುಂಪು ಯುವಕನನ್ನು ಬರ್ಬರವಾಗಿ ಹತ್ಯೆ ಮಾಡಿ‌‌ ಪರಾರಿಯಾಗಿದ್ದ ಓರ್ವ ಆರೋಪಿ ಕಾಲಿಗೆ ಪೊಲೀಸರು ಗುಂಡು ಹಾರಿಸಿರುವ ಘಟನೆ ತಿಲಕ್ ನಗರದ ಅರಸು ಕಾಲೋನಿಯಲ್ಲಿ ನಡೆದಿದೆ.
ಆರೋಪಿ ತಬರೇಜ್ ಬಲಗಾಲಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ. ಪೊಲೀಸರು ಈತನನ್ನು ಬಂಧಿಸಲು ಮುಂದಾಗಿದಾಗ ಪೊಲೀಸರ ಮೇಲೆ ಆತ ಹಲ್ಲೆ ಮಾಡಿದ್ದಾನೆ. ಶರಣಾಗಲು ತಿಳಿಸಿ ಗಾಳಿಯಲ್ಲಿ ಗುಂಡು ಹಾರಿಸಿದರೂ, ಆತ ಇನ್ಸ್ ಪೆಕ್ಟರ್ ಅನಿಲ್ ಕುಮಾರ್ ಮೇಲೆ ಹಲ್ಲೆಗೆ ಯತ್ನಿಸಿದ್ದಾನೆ.
ಗಾಳಿಯಲ್ಲಿ ಗುಂಡು ಹಾರಿಸಿ ಆತ್ಮ ರಕ್ಷಣೆಗಾಗಿ ಇನ್ಸ್ ಪೆಕ್ಟರ್ ಅನಿಲ್ ಕುಮಾರ್ ಆರೋಪಿ ತಬರೇಜ್ ಬಲಗಾಲಿಗೆ ಗುಂಡು ಹಾರಿಸಿದ್ದಾರೆ.
ಘಟನೆಯಲ್ಲಿ ಪೇದೆ ಆನಂದ್ ಮೇಲೆ ಆರೋಪಿ ಚಾಕುವಿನಿಂದ ಹಲ್ಲೆ ಮಾಡಿದ್ದನು. ಸದ್ಯ ಆರೋಪಿ ಹಾಗೂ ಪೇದೆಯನ್ನು ಖಾಸಗಿ ಆಸ್ಪತ್ರೆಯಲ್ಲಿ‌ ಚಿಕಿತ್ಸೆ ನೀಡಲಾಗುತ್ತಿದೆ.  ತಬರೇಜ್ ವಿರುದ್ಧ ಚಾಮರಾಜಪೇಟೆ ಠಾಣೆಯಲ್ಲಿ ಹಲವು ಪ್ರಕರಣಗಳು ದಾಖಲಾಗಿದ್ದವು. ಕೆಲ ಪ್ರಕರಣದಲ್ಲಿ ಜೈಲು ಸೇರಿದ್ದ. ಬಿಡುಗಡೆಯಾದ ಬಳಿಕ ಮತ್ತದೇ ಚಾಳಿ ಮುಂದುವರಿಸಿದ್ದಾನೆ ಎಂದು ತಿಳಿದು ಬಂದಿದೆ.
ಘಟನೆಯ ಹಿನ್ನೆಲೆ
ಕ್ಷುಲ್ಲಕ ಕಾರಣಕ್ಕೆ ಮಂಗಳಮುಖಿ ಸೇರಿದಂತೆ ನಾಲ್ವರ ಗುಂಪು ಯುವಕನೋರ್ವನನ್ನು ಬರ್ಬರವಾಗಿ ತಿಲಕ್ ನಗರದ ಬಾರೊಂದರಲ್ಲಿ ಭಾನುವಾರ ಮಧ್ಹಾಹ್ನ ಕೊಲೆ ಮಾಡಿ ಪರಾರಿಯಾಗಿದ್ದರು.
ಆರೋಪಿಗಳನ್ನು ತಬರೇಜ್, ಆನಂದ್, ಮಧು ಹಾಗೂ ಮಂಗಳಮುಖಿಯನ್ನು ಅರ್ಪಿತ ಎಂದು ಗುರುತಿಸಲಾಗಿದೆ.
ಕಿಶೋರ್ ಕೊಲೆಯಾದ ದುರ್ದೈವಿ. ಈತ ಖಾಸಗಿ ಕಂಪನಿಯಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದು, ಬೈರಸಂದ್ರದ ನಿವಾಸಿಯಾಗಿದ್ದನು.  ಭಾನುವಾರ ಮಧ್ಯಾಹ್ನ ಗೆಳೆಯನ ಜೊತೆ ಮದ್ಯಪಾನ ಮಾಡಲು ಜಯನಗರದ ಈಸ್ಟ್ ಎಂಡ್ ಬಾರ್ ಗೆ ಹೋಗಿದ್ದನು.
ಇದೇ ಸಮಯದಲ್ಲಿ ಪಕ್ಕದ ಟೇಬಲ್‍ನಲ್ಲಿ ಕುಳಿತಿದ್ದ ನಾಲ್ವರ ಗ್ಯಾಂಗ್ ಕುಡಿದು ಜೋರಾಗಿ ಕೇಕೆ ಹಾಕಿದ್ದರು. ಇದನ್ನು ಗಮನಿಸಿದ ಕಿಶೋರ್ ಜೋರಾಗಿ ಮಾತನಾಡಬೇಡಿ.  ಸ್ವಲ್ಪ ನಿಧಾನಕ್ಕೆ ಮಾತನಾಡಿ ಎಂದಿದ್ದ.
ಇಷ್ಟಕ್ಕೇ ಆಕ್ರೋಶಗೊಂಡ ಗ್ಯಾಂಗ್ ನಮ್ಮ ದುಡ್ಡು ನಮ್ಮ ಇಷ್ಟ ನೀನು ಯಾರು ಕೇಳೊಕೆ ಎಂದು ಗಲಾಟೆ ಮಾಡಿ  ಕಿಶೋರ್ ಗೆ ಚಾಕುವಿನಿಂದ ಇರಿದು ಪರಾರಿಯಾಗಿದೆ.
ಆ ಗ್ಯಾಂಗ್‍ನಲ್ಲಿ ಮಂಗಳಮುಖಿ ಸಹ ಇದ್ದು, ಆಕೆ ಕೂಡ ಹಂತಕರಿಗೆ ಸಹಾಯ ಮಾಡಿದ್ದಾಳೆ. ಇದು ಬಾರ್ ನ ಸಿಟಿಟಿವಿಯಲ್ಲಿ ಸೆರೆಯಾಗಿದೆ.  ತಿಲಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಉಳಿದ ಆರೋಪಿಗಳಿಗೆ ಪೊಲೀಸರು ಬಲೆ ಬೀಸಿದ್ದಾರೆ.

loading...