ಕೋಳಿವಾಡ ಮರಳು ಮಾಫಿಯಾದಲ್ಲಿ ಧುಮಕಿದ್ದಾರೆ: ಹಿರೇಮಠ ಆರೋಪ

0
40

ರಾಣಿಬೆನ್ನೂರ: ಸ್ಥಳಿಯ ಶಾಸಕ ಹಾಗೂ ವಿಧಾನಸಭಾಧ್ಯಕ್ಷ ಕೆ.ಬಿ.ಕೋಳಿವಾಡರವರು ಮರಳು ಮಾಫಿಯಾದಲ್ಲಿ ಆಳವಾಗಿ ಧುಮಕಿದ್ದಾರೆ. ಮರಳು ಮಾಫಿಯಾದ ಜೊತೆಗೆ ಶಾಲಾ ಸಂಸ್ಥೆಯ ಜಾಗೆ ಅಕ್ರಮದಲ್ಲೂ ಮಿಲಾಪಿಯಾಗಿದ್ದು, ವಿಧಾನಸಭೆಯ ಕೆಲ ಹುದ್ದೆಗಳಲ್ಲಿ ಅಕ್ರಮ ನೇಮಕಾತಿ ನಡೆದಿದ್ದು, ಈ ಬಗ್ಗೆ ತನಿಖೆ ನಡೆಯುತ್ತಿದೆ. ಇಂತಹ ಕಳಂಕಿತ ವ್ಯಕ್ತಿ ಸ್ಪೀಕರ್‌ ಸ್ಥಾನಕ್ಕೂ ಕಪ್ಪು ಚುಕ್ಕೆ ತಂದಿದ್ದಾರೆ. ಬೇರೆಯವರಿಗೆ ಗೌರವ ಮರ್ಯಾದೆ ನೀಡದ ಸ್ಪೀಕರ್‌ವರು ಶ್ರೀಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುವುದು ದೂರದ ಮಾತಾಗಿದೆ ಸಮಾಜಿಕ ಹೋರಾಟಗಾರ ಎಸ್‌.ಆರ್‌.ಹಿರೇಮಠ ಗಂಭೀರವಾಗಿ ಆರೋಪಿಸಿದರು.
ಮಂಗಳವಾರ ನಗರದಲ್ಲಿ ಜನಾಂದೋಲನ ಮಹಾಮೈತ್ರಿ ಅಭ್ಯರ್ಥಿ ವಿ.ಸಿ.ಪಾಟೀಲರ ಪರ ಮತಯಾಚಿಸಿ ಮಾತನಾಡಿದರು. ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ ಪಕ್ಷಗಳೂ ಸಹ ರಾಜಕೀಯ ಮೌಲ್ಯಗಳನ್ನು ಕಳೆದುಕೊಂಡಿವೆ. ಪಕ್ಷಗಳಲ್ಲಿನ ರಾಜಕಾರಣಿಗಳು ಅನ್ಯಾಯ, ಅನೀತಿ, ಅಧರ್ಮದ ಮೂಲಕ ಸಮಾಜವನ್ನು ಹದಗೆಡಿಸುವ ವ್ಯವಸ್ಥಿತ ಸಂಚು ರೂಪಿಸುತ್ತಿದ್ದಾರೆ. ಇದರಿಂದ ಇಡೀ ಪ್ರಜಾಪ್ರಭುತ್ವದ ವ್ಯವಸ್ಥೆ ಮತ್ತು ಸಂವಿಧಾನ ತತ್ವಗಳಿಗೆ ಬೆಲೆ ಇಲ್ಲದಂತಾಗಿದೆ ಎಂದವರು ವಿಷಾಧಿಸಿದರು.
ಈ ದೇಶ ಹಾಗೂ ರಾಜ್ಯವನ್ನಾಳಿದ ಬಿಜೆಪಿ, ಕಾಂಗ್ರೆಸ್‌ ಮತ್ತು ಜೆಡಿಎಸ್‌ ಸೇರಿದಂತೆ ಇತರೆ ಪಕ್ಷಗಳನ್ನು ಬಹುತೇಕ ರಾಜಕಾರಣಿಗಳು ಮಹಾಭ್ರಷ್ಟರು, ಲೂಟಿಕೋರರು, ನಯವಂಚಕರು ಹಾಗೂ ಸಮಾಜಘಾತುಕ ಶಕ್ತಿಗಳಾಗಿ ಮೆರೆಯುತ್ತಿದ್ದಾರೆ. ಇದರಿಂದ ಪ್ರಜಾಪ್ರಭುತ್ವದ ವ್ಯವಸ್ಥೆ ಅಧೋಗತಿಗಿಳಿಯುತ್ತಿದೆ. ಇದಕ್ಕೆ ಕಡಿವಾಣ ಹಾಕಲು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮತದಾರರು ತಕ್ಕ ಪಾಠ ಕಲಿಸಬೇಕೆಂದು ಒತ್ತಾಯಿಸಿದರು.
ಬಿ.ಎಸ್‌.ಯಡಿಯೂರಪ್ಪ, ಸಿದ್ದರಾಮಯ್ಯ, ಕುಮಾರಸ್ವಾಮಿ, ಜಗದೀಶ ಶೆಟ್ಟರ್‌, ಡಿ.ಕೆ.ಶಿವಕುಮಾರ, ಕೆ.ಬಿ.ಕೋಳಿವಾಡ. ಜನಾರ್ಧನರಡ್ಡಿ, ಶ್ರೀರಾಮುಲು, ಸೋಮಶೇಖರ ರಡ್ಡಿ ಸೇರಿದಂತೆ ಮತ್ತಿತರರು ರಾಜಕೀಯ ನೀತಿ ಧರ್ಮಗಳನ್ನು ಬಿಟ್ಟು ಭ್ರಷ್ಟಾಚಾರ, ಅವ್ಯವಹಾರ ಮಾಡುತ್ತಿದ್ದಾರೆ. ಇಂತವರಿಂದಲೇ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಧಕ್ಕೆಯುಂಟಾಗುತ್ತಿದೆ. ಇಂತವರನ್ನು ಚುನಾಯಿಸಿದರೆ ಸಮಾಜಕ್ಕೆ ಕಳಂಕ ಬರುತ್ತದೆ ಎಂದವರು ದೂರಿದರು.
ಜನಕ್ರಾಂತಿ ಹಾಗೂ ಜನಾಂದೋಲನ ಮಹಾಮೈತ್ರಿಯಿಂದ ರಾಜ್ಯದ ವಿವಿಧಡೆಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು ಈ ಕ್ಷೇತ್ರದಲ್ಲೂ ಸಹ ವಿ.ಸಿ.ಪಾಟೀಲರು ಸ್ಪರ್ಧೆಗಿಳಿದಿದ್ದಾರೆ. ಅವರನ್ನು ಆಯ್ಕೆ ಮಾಡಲು ತಾಲೂಕಿನ ಜನತೆ ಮುಂದಾಗಬೇಕು. ಕೆಲ ಕ್ರಿಮಿನಲ್‌ ರಾಜಕಾರಣಿಗಳು ಭ್ರಷ್ಟರಾಗಿ ಅಧಿಕಾರ ದುರುಪಯೋಗಪಡೆಸಿಕೊಂಡು ಸ್ವಜನಪಕ್ಷಪಾತದಿಂದ ಪ್ರಜಾಪ್ರಭುತ್ವವನ್ನು ಹಾಳು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಇಂತಹ ರಾಜಕಾರಣಿಗಳಿಗೆ ಕಡಿವಾಣ ಹಾಕಬೇಕಾದ ದೇಶದ ಮೂರು ಅಂಗಗಳು ಸಹ ನಿಷ್ಕ್ರಿಯವಾಗಿವೆ. ಇವರುಗಳಿಗೆ ಜನಜಾಗೃತಿಯ ಮೂಲಕ ಮತದಾರರೇ ತಕ್ಕ ಪಾಠ ಕಲಿಸಬೇಕಾಗಿದೆ ಎಂದರು. ಡಾ.ಎಸ್‌.ಎಲ್‌.ಪವಾರ, ವಿ.ಸಿ.ಪಾಟೀಲ, ಬಿಎ ಸುನೀಲ, ತೋಟಪ್ಪ ಹಳ್ಳಿಕೇರಿ, ಅರ್ಕಾಚಾರಿ, ಬೂದಿಹಾಳಮಠ, ಎಂ.ಸಿ.ಹಾವೇರಿ ಸೇರಿದಂತೆ ಮತ್ತಿತರರು ಇದ್ದರು.

loading...