ಕ್ವಾರಿಯಲ್ಲಿ ಸ್ಫೋಟ್ ಸಂಭವಿಸಿದ ವರದಿ ಬಂದ 24 ಗಂಟೆಗಳಲ್ಲಿ ಕ್ರಮ: ಸಚಿವ ಬೊಮ್ಮಾಯಿ

0
11

ಚಿಕ್ಕಬಳ್ಳಾಪುರ:

ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆಯ ಹಿರೆನಾಗವೇಲಿಯ ಕಲ್ಲು ಕ್ವಾರಿಯಲ್ಲಿ ಸಂಭವಿಸಿರುವ ಸ್ಪೋಟ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಲು ತೀರ್ಮಾನಿಸಿರುವುದಾಗಿ ಹೇಳಿರುವ ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವರಾದ ಬಸವರಾಜ ಬೊಮ್ಮಾಯಿ, ಈ ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ಒಯ್ದು ತಪ್ಪಿತಸ್ಥರನ್ನು ಶಿಕ್ಷೆಗೆ ಗುರಿಪಡಿಸುವುದಾಗಿ ಹೇಳಿದರು.

ಸ್ಪೋಟ ಸಂಭವಿಸಿದ ಕ್ವಾರಿಗೆ ಮಂಗಳವಾರ ಭೇಟಿ ನೀಡಿದ ಬಳಿಕ ಅವರು ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು.

ಘಟನೆ ಸಂಭವಿಸುತ್ತಿದ್ದAತೆಯೇ ಚಿಕ್ಕಬಳ್ಳಾಪುರದ ಹಿರೆನಾಗವೇಲಿ ಕ್ವಾರಿಗೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿಯನ್ನು ಪರಿಶೀಲಿಸಿದ ಸಚಿವರು, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಈ ಘಟನೆಯನ್ನು ಗೃಹ ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ಈ ಬಗ್ಗೆ ನಿಷ್ಪಕ್ಷಪಾತ ತನಿಖೆ ಆಗಬೇಕು. ಹೀಗಾಗಿ ಈ ಪ್ರಕರಣವನ್ನು ಸಿಐಡಿಗೆ ವಹಿಸಿಲು ತೀರ್ಮಾನಿಸಿದ್ದೇನೆ ಎಂದು ಬೊಮ್ಮಾಯಿ ಹೇಳಿದರು.

24 ಗಂಟೆಗಳಲ್ಲಿ ಕ್ರಮ

ಪ್ರಕರಣದ ಕುರಿತು ವರದಿ ಬಂದ 24 ಗಂಟೆಗಳಲ್ಲಿ ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಠಿಣ ಕ್ರಮ ಜರುಗಿಸುತ್ತೇನೆ. ಈ ಪ್ರಕರಣದಲ್ಲಿ ನನ್ನ ಇಲಾಖೆಯಿಂದಲೇ ಕ್ರಮ ಆರಂಭಿಸುತ್ತೇನೆ. ಯಾರನ್ನೂ ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.

 

ದುರ್ಘಟನೆ ನಡೆದಿದ್ದು ಹೇಗೆ? ಈ ಕ್ವಾರಿಯ ಮಾಲೀಕರು ಯಾರು? ಯಾವ ರೀತಿ ಈ ಸ್ಫೋಟ ಸಂಭವಿಸಿರಬಹುದು? ಇಲ್ಲಿ ಇರಿಸಲಾಗಿದ್ದ ಸ್ಪೋಟಕಗಳು ಮತ್ತು ಅವುಗಳ ತೀವ್ರತೆ ಬಗ್ಗೆ ಪ್ರಾಥಮಿಕ ತನಿಖೆ ಯಿಂದ ಗೊತ್ತಾದ ಮಾಹಿತಿಯನ್ನು ಬಸವರಾಜ ಬೊಮ್ಮಾಯಿ ವಿವರವಾಗಿ ಹೇಳಿದರು.

ಹಿರೆನಾಗವೇಲಿಯಲ್ಲಿ 3 ಎಕರೆಯಲ್ಲಿ ಕಲ್ಲು ಕ್ವಾರಿ ಇದೆ. ಮತ್ತೆ 3 ಎಕರೆಯಲ್ಲಿ ಕ್ರಷರ್ ಇದೆ. ಈ ಕ್ವಾರಿಯ ಹೆಸರು ಶ್ರೀ ಶಿರಡಿ ಸಾಯಿ ಎಜೆನ್ಸಿಜ್. ಇದಕ್ಕೆ 3 ಜನ ಪಾಲುದಾರರು. ಒಬ್ಬರು ಕರ್ನಾಟಕದ ನಾಗರಾಜ ಮತ್ತು ಇಬ್ಬರು ಆಂಧ್ರ ಮೂಲದ ರೆಡ್ಡಿ ಎಂಬುವರು.

ಈ ಕ್ವಾರಿಯ ಮೇಲೆ ಕೆಲ ದಿನಗಳ ಹಿಂದೆ ಜಿಲ್ಲಾ ಪೊಲೀಸ್ ವರಿಷ್ಠ ಆಧಿಕಾರಿ ದಾಳಿ ನಡೆಸಿದ್ದರು. ಅದರ ಆಧಾರದ ಮೇಲೆ ಫೆ. 7 ರಂದು ಸ್ಥಳೀಯ ಪೊಲೀಸರು ದಾಳಿ ನಡೆಸಿದ್ದರು. ಆಗ ಪೊಲೀಸರು ಒಂದು ವಾಹನ ಸೀಜ್ ಮಾಡಿದ್ದರು. ಆ ಸಂದರ್ಭದಲ್ಲಿ ಇಲ್ಲಿ ಅಪಾರ ಪ್ರಮಾಣದ ಸ್ಪೋಟಕಗಳನ್ನು ಬಚ್ವಿಟ್ಟಿರಬಹುದು. ಆ ಸ್ಪೋಟಕ ತಮ್ಮ ಕ್ವಾರಿಯಲ್ಲಿ ಸಿಕ್ಕರೆ ದೊಡ್ಡ ಕೇಸ್ ಆಗಬಹುದು ಎಂಬುದು ಎಂಬ ಆತಂಕ ಅವರನ್ನು ಕಾಡುತ್ತಿರಬಹುದು. ಹೀಗಾಗಿ ರಾತ್ರೋ ರಾತ್ರಿ ಅಲ್ಲಿನ ಸ್ಫೋಟಕಗಳನ್ನು ತರಬೇತಿ ಇಲ್ಲದ ಕೆಲ ಯುವಕರು ಸ್ಥಳಾಂತರಿಸುವ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ. ಸ್ಪೋಟಗೊಂಡ ಸ್ಥಳದಲ್ಲಿ ನೆಲ ತಗ್ಗು ಬಿದ್ದಿಲ್ಲ. ನೆಲದ ಮೇಲೆ ಯಾವುದೇ ಗುರುತು ಇಲ್ಲ. ಸ್ಫೋಟಕಗಳನ್ನು ಸ್ಥಳಾಂತರಿಸುವ ಸಂದರ್ಭದಲ್ಲಿಯೇ ಅವು ಸ್ಪೋಟಗೊಂಡಿರಬಹುದು ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದಿದೆ. ಆರು ಜನರ ದೇಹ ಛಿದ್ರ ಛಿದ್ರಗೊಂಡಿವೆ. ಒಂದು ಮೋಟರ್ ಸೈಕಲ್ ಮತ್ತು ಒಂದು ನಾಲ್ಕು ಚಕ್ರದ ವಾಹನ ಜಖಂ ಗೊಂಡಿವೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಘಟನೆಯ ಕುರಿತು ಎಳೆ ಎಳೆಯಾಗಿ ವಿವರಿಸಿದರು.

ಇದು ಜೆಲ್ ಎಕ್ಸ್ ಪ್ಲೋಸಿವ್ ?
ಸ್ಪೋಟಗೊಂಡ ವಸ್ತು ಮೇಲ್ನೋಟಕ್ಕೆ ಜೆಲ್ ಎಕ್ಸ್ ಪ್ಲೋಸಿವ್ ಇರಬಹುದು ಎಂದು ತರ್ಕಿಸಲಾಗಿದೆ. ಪೆಟ್ರೋಲಿಯಂ ಜೆಲ್ ಎಕ್ಸ್ ಪ್ಲೋಸಿವ್ ಮತ್ತು ಅಮೋನಿಯಂ ನೈಟ್ರೇಟ್ ವಸ್ತುಗಳು ಸ್ಫೋಟಗೊಂಡಿರುವ ಸಾಧ್ಯತೆಗಳಿವೆ ಎಂಬುದು ಪ್ರಾಥಮಿಕಮಾಹಿತಿಯಿಂದ ತಿಳಿದು ಬರುತ್ತದೆ ಎಂದು ಸಚಿವ ಬೊಮ್ಮಾಯಿ ವಿವರಿಸಿದರು.

 

ಇದು ಬಹಳ ದೊಡ್ಡ ಪ್ರಮಾಣದ ಸ್ಫೋಟ. ಬಹಳ ನೋವಿನ ಸಂಗತಿ. ಸ್ಫೋಟದಲ್ಲಿ ದೇಹಗಳು ಛಿದ್ರಗೊಂಡಿವೆ. ದೇಹಗಳನ್ನು ಗುರುತಿಸಲು ಆಗುತ್ತಿಲ್ಲ. ನೋಡಿದರೆ ಕರುಳು ಕಿತ್ತು ಬರುತ್ತದೆ. ನಮ್ಮ ಕುಟುಂಬದವರಿಗೆ ಹೀಗಾದ್ರೆ ಹೇಗೆ ಎಂಬ ಯೋಚನೆ ಬರುತ್ತಿದೆ.
__ ಬಸವರಾಜ ಬೊಮ್ಮಾಯಿ , ಗೃಹ ಸಚಿವರು

loading...