ಕ್ವಾರ್ಟರ್‌ ಫೈನಲ್‌ ಅರ್ಹತೆ ಪಡೆಯುವಲ್ಲಿ ಜಪಾನ್‌, ಈಕ್ವೆಡಾರ್‌ ವಿಫಲ

0
4

ಸಾವೊ ಪಾಲೊ:- ಪ್ರಸಕ್ತ ನಡೆಯುತ್ತಿರುವ ಕೊಪಾ ಅಮೆರಿಕಾ ಫುಟ್ಬಾಲ್‌ ಟೂರ್ನಿಯ ಅಂತಿಮ ಎಂಟರ ಘಟ್ಟಕ್ಕೆ ಸ್ಥಾನ ಪಡೆಯುವಲ್ಲಿ ಜಪಾನ್‌ ಹಾಗೂ ಈಕ್ವೆಡಾರ್ ತಂಡಗಳು ವಿಫಲವಾಗಿವೆ.
ಸೋಮವಾರ ನಡೆದ ‘ಸಿ’ ಗುಂಪಿನ ಕೊನೆಯ ಪಂದ್ಯದಲ್ಲಿ ಜಪಾನ್‌ ಹಾಗೂ ಈಕ್ವೆಡಾರ್ ತಂಡಗಳು 1-1 ಸಮಬಲದೊಂದಿಗೆ ಡ್ರಾಗೆ ತೃಪ್ತಿಗೊಂಡವು. ಈ ಫಲಿತಾಂಶದೊಂದಿಗೆ ಉರುಗ್ವೆ ಹಾಗೂ ಚಿಲೆ ಎರಡು ಸಿ ಗುಂಪಿನಲ್ಲಿ ಅಗ್ರ ಎರಡು ಸ್ಥಾನಗಳನ್ನು ಪಡೆಯುವ ಮೂಲಕ ನಾಕೌಟ್‌ ಹಂತಕ್ಕೆ ಪ್ರವೇಶ ಮಾಡಿತು.
‘ಬಿ’ ಗುಂಪಿನಲ್ಲಿ ಪರುಗ್ವೆ ಮೂರನೇ ಸ್ಥಾನ ಪಡೆಯುವ ಮೂಲಕ ಅಂತಿಮ ಎಂಟರ ಘಟ್ಟಕ್ಕೆ ತಲುಪಿದೆ. ಸೋಮವಾರ ನಡೆದ ಪಂದ್ಯದಲ್ಲಿ ಜಪಾನ್ 15ನೇ ನಿಮಿಷದಲ್ಲಿ ಶೋಯಾ ನಕಜಿಮಾ ಅವರು ಗಳಿಸಿದ ಗೋಲಿನ ನೆರವಿನಿಂದ ಮುನ್ನಡೆ ಸಾಧಿಸಿತು. ಇದಾದ ಬಳಿಕ ಏಂಜೆಲೊ ಮೆನಾ ಅವರು ಈಕ್ವೆಡಾರ್ಗೆ 35ನೇ ನಿಮಿಷದಲ್ಲಿ ಗೋಲು ಗಳಿಸಿ ಸಮಬಲ ಸಾಧಿಸಲು ನೆರವಾದರು.

ಕೊಪಾ ಅಮೆರಿಕಾ ಟೂರ್ನಿಯ ಅಂತಿಮ ಎಂಟರ ಘಟ್ಟಕ್ಕೆ ತಲುಪುವ ಕನಸು ಕಂಡಿದ್ದ ಜಪಾನ್‌ಗೆ ಪಂದ್ಯ ಡ್ರಾ ಆಗಿದ್ದರಿಂದ ತೀವ್ರ ನಿರಾಸೆ ಉಂಟಾಯಿತು.

ಮತ್ತೊಂದು ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್ ಚಿಲೆಯನ್ನು 1-0 ಅಂತರದಲ್ಲಿ ಸೋಲಿಸಿದ ಉರುಗ್ವೆ ಸಿ ಗುಂಪಿನಲ್ಲಿ ಅಗ್ರ ಸ್ಥಾನ ಅಲಂಕರಿಸಿತು. ಉರುಗ್ವೆ 7 ಅಂಕಗಳು ಹಾಗೂ ಚಿಲೆ 6 ಅಂಕಗಳನ್ನು ಪಡೆಯುವ ಮೂಲಕ ಸಿ ಗುಂಪಿನಲ್ಲಿ ಕ್ರಮವಾಗಿ ಮೊದಲನೇ ಹಾಗೂ ಎರಡನೇ ಸ್ಥಾನ ಪಡೆದವು.

ಕ್ವಾರ್ಟರ್‌ ಫೈನಲ್ಸ್‌ ಹಣಾಹಣಿಯಲ್ಲಿ ಬ್ರೆಜಿಲ್ ಹಾಗೂ ಪರುಗ್ವೆ ಮುಖಾಮುಖಿಯಾದರೆ,
ವೆನೆಜುವೆಲಾ ತಂಡ, ಅರ್ಜೆಂಟೀನಾ ವಿರುದ್ಧ ಸೆಣಸಲಿದೆ. ಮತ್ತೊಂದೆಡೆ ಕೊಲಂಬಿಯಾ ಹಾಗೂ ಚಿಲೆ ಮತ್ತೊಂದು ಪಂದ್ಯದಲ್ಲಿ ಸೆಣಸಿದರೆ, ಉರುಗ್ವೆ ಹಾಗೂ ಪೆರು ಮತ್ತೊಂದು ಪಂದ್ಯದಲ್ಲಿ ಸೆಣಸಾಟ ನಡೆಸಲಿವೆ.

loading...