ಗಂಟೆಗೆ 180 ಕಿ.ಮೀ ವೇಗದಲ್ಲಿ ಚಲಿಸುವ ರೈಲು ಉತ್ಪಾದನೆ

0
3

ನವದೆಹಲಿ:- ಪಶ್ಚಿಮ ಬಂಗಾಳದ ಚಿತ್ತರಂಜನ್ ಲೋಕೋಮೋಟಿವ್ ಎಂಜಿನ್‌ ಉತ್ಪಾದನಾ ಘಟಕದಲ್ಲಿ ‘ಮೇಕ್ ಇನ್ ಇಂಡಿಯಾ’ ಕಾರ್ಯಕ್ರಮದಡಿ ಗಂಟೆಗೆ 180 ಕಿ.ಮೀ ವೇಗದಲ್ಲಿ ಚಲಿಸುವ ಎಂಜಿನ್‌ಗಳನ್ನು ಉತ್ಪಾದಿಸಿದೆ.
ಈ ಹೊಸ ಎಂಜಿನ್‌, ರೈಲುಗಳನ್ನು ಹಿಂದೆಂದಿಗಿಂತಲೂ ವೇಗವಾಗಿ ಚಲಿಸುವಂತೆ ಮಾಡುತ್ತದೆ ಎಂದು ರೈಲ್ವೆ ಸಚಿವ ಪಿಯೂಷ್ ಗೋಯಲ್ ಟ್ವೀಟ್ ಮಾಡಿದ್ದಾರೆ.
ಹಿರಿಯ ರೈಲ್ವೆ ಅಧಿಕಾರಿಯೊಬ್ಬರ ಪ್ರಕಾರ, ಆಗಸ್ಟ್ 12ರಂದು ಕೋಟಾ ವಿಭಾಗದ ಆರ್‌ಡಿಟಿ-ಎಲ್‌ಬಿಎನ್ ವಿಭಾಗದಲ್ಲಿ ನಡೆಸಿದ ಪ್ರಯೋಗದಲ್ಲಿ ಈ ರೈಲುಗಳು 180 ಕಿ.ಮೀ ವೇಗದಲ್ಲಿ ಚಲಿಸುವುದು ಸಾಬೀತಾಗಿದೆ.
ಡಬ್ಲ್ಯುಎಪಿ- 7ಎಚ್‌ಎಸ್‌ ಲೊಕೊಮೊಟಿವ್, 24 ಕೋಚ್ ರೈಲನ್ನು 160 ಕಿ.ಮೀ ವೇಗದಲ್ಲಿ ಎಳೆಯುವ ಸಾಮರ್ಥ್ಯ ಹೊಂದಿದೆ. ಪ್ರಸ್ತುತ ಗರಿಷ್ಠ ವೇಗ ಗಂಟೆಗೆ 140 ಕಿ.ಮೀ ಇದೆ.
ವಿನ್ಯಾಸ, ಸಿಮ್ಯುಲೇಶನ್‌ಗಳು ಮತ್ತು ಉತ್ಪಾದನೆ ಸೇರಿದಂತೆ ಸಿಎಲ್‌ಡಬ್ಲ್ಯಗೆ ಈ ಕೆಲಸವನ್ನು 2018ರ ಸೆಪ್ಟೆಂಬರ್‌ನಲ್ಲಿ ನಿಯೋಜಿಸಲಾಗಿತ್ತು. ದಾಖಲೆಯ ಆರು ತಿಂಗಳಲ್ಲಿ ಸಿಎಲ್‌ಡಬ್ಲ್ಯೂ ಈ ಕಾರ್ಯವನ್ನು ಪೂರ್ಣಗೊಳಿಸಿದ್ದು, 2019ರ ಮಾರ್ಚ್ 7 ರಂದು ಗೋಯಲ್ ಅವರು ಈ ಲೊಕೊವನ್ನು ರಾಷ್ಟ್ರಕ್ಕೆ ಸಮರ್ಪಿಸಿದ್ದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಲೋಕೋಮೋಟಿವ್‌ನ ಸಂಪೂರ್ಣ ವಿನ್ಯಾಸ ಮತ್ತು ಅಭಿವೃದ್ಧಿಯನ್ನು ಸಿಎಲ್‌ಡಬ್ಲ್ಯೂನಲ್ಲಿ ಸ್ಥಳೀಯವಾಗಿ ಮಾಡಲಾಗಿದೆ. ಲೋಕೋಮೋಟಿವ್‌ನ ವೇಗವನ್ನು ಹೆಚ್ಚಿಸಲು, ಸುಮಾರು 14 ಟನ್‌ಗಳಷ್ಟು ತೂಕವನ್ನು ಕಡಿಮೆ ಮಾಡಲಾಗಿದೆ. ಹೊಸ ರೀತಿಯ ಲೋಕೋಮೋಟಿವ್ ಹೆಚ್ಚಿನ ವೇಗದಲ್ಲಿ ಚಲಿಸುವ ರಾಜಧಾನಿ, ಶತಾಬ್ದಿ ಮತ್ತು ಡುರಾಂಟೊದಂತಹ ಪ್ರೀಮಿಯಂ ರೈಲುಗಳ ಕಾರ್ಯಾಚರಣೆಗೆ ಅನುಕೂಲವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

loading...