ಗಣೇಶ ಚತುರ್ಥಿ, ಮೊಹರಂ ಹಬ್ಬಗಳ ನಿಮಿತ್ತ ಶಾಂತಿ ಪಾಲನಾ ಸಭೆ

0
14

ಕನ್ನಡಮ್ಮ ಸುದ್ದಿ-ಮುಂಡಗೋಡ: ಗಣೇಶ ಚತುರ್ಥಿ ಮತ್ತು ಮೊಹರಂ ಹಬ್ಬಗಳ ನಿಮಿತ್ತ ಇಲ್ಲಿನ ದೈವಜ್ಞ ಸಭಾ ಭವನದಲ್ಲಿ ರವಿವಾರ ಸಂಜೆ ಶಾಂತಿ ಪಾಲನಾ ಸಭೆ ನಡೆಯಿತು.
ಇಲ್ಲಿನ ಸಿಪಿಐ ಕಿರಣಕುಮಾರ ನಾಯಕ ಸಭೆಯನ್ನುದ್ದೇಶಿಸಿ ಮಾತನಾಡಿ, ಎಲ್ಲಾ ಕಡೆ ಗಣೇಶ ಚತುರ್ಥಿಯ ಆಚರಣೆಯ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯ ಸಿಬ್ಬಂದಿಗಳ ಕೊರತೆ ಇದ್ದು ಸಾರ್ವಜನಿಕ ಗಣಪತಿ ಪ್ರತಿಷ್ಠಾಪಿಸುವ ಯುವಕರು ಸಹಕರಿಸಬೇಕು. ಈ ಬಗ್ಗೆ ಪೊಲೀಸ್ ಇಲಾಖೆಗೆ ಸಂಬಂಧಪಟ್ಟ ದಾಖಲೆಗಳನ್ನು ನೀಡಿ ಅನುಮತಿ ಪಡೆದು 24ಗಂಟೆ ಸ್ವಯಂ ಸೇವಕರನ್ನು ನೇಮಿಸಿ ರಾತ್ರಿ ಹೊತ್ತು ಬಂಗಾರ ಮತ್ತು ಬೆಲೆಬಾಳುವ ವಸ್ತುಗಳನ್ನು ಇಡಬಾರದು. ಬೆಂಕಿ ಅನಾಹುತವಾಗದಂತೆ ಮುನ್ನೆಚ್ಚರಿಕೆಯಾಗಿ ಮಂಟಪದ ಪಕ್ಕದಲ್ಲಿ ಮರಳು ಮತ್ತು ನೀರನ್ನು ಇಡಬೇಕು. ಮೊಹರಂ ಹಬ್ಬದ ಕೊನೆಯ ದಿನ ಮತ್ತು ಗಣಪತಿ ವಿಸರ್ಜನೆಯ 9ನೇ ದಿನ ಎರಡೂ ಒಂದೇ ದಿವಸ ಇದ್ದು ಆ ದಿನದಂದು ತಾಲೂಕಿನ ಹಿಂದು ಹಾಗೂ ಮುಸ್ಲಿಂ ಬಾಂಧವರು ಮೆರವಣಿಗೆಯ ಬಗ್ಗೆ ಮುಂಚಿತವಾಗಿ ಪೊಲೀಸ್ ಇಲಾಖೆಗೆ ತಿಳಿಸಬೇಕು. ಮೆರವಣಿಗೆಯ ಸಂದರ್ಭದಲ್ಲಿ ಯುವಕರು ಸ್ಪರ್ಧೆಗಿಳಿಯಬಾರದು. ವಿಸರ್ಜನೆಯಾದ ನಂತರ ವಾಹನಗಳನ್ನು ತೆರವುಗೊಳಿಸಿ ಹಿಂದಿನವರಿಗೆ ಅವಕಾಶ ಮಾಡಿಕೊಡಿ ಎಂದು ಸೂಚಿಸಿದರು. ಸಾರ್ವಜನಿಕ ಗಣಪತಿಗಳ ಪ್ರತಿಷ್ಠಾಪನೆಗಾಗಿ ಹೆಸ್ಕಾಂ ಪ.ಪಂ. ಮತ್ತು ಪೊಲೀಸ್ ಇಲಾಖೆಗಳ ಅನುಮತಿಯನ್ನು ಸೆ.11ರಂದು ಇಲ್ಲಿನ ಪೊಲೀಸ್ ಠಾಣೆಯಲ್ಲಿಯೇ ನೀಡಲಾಗುವುದು ಎಂದು ಹೇಳಿದರು.

ನಂತರ ಮಾತನಾಡಿದ ತಹಶೀಲ್ದಾರ ಅಶೋಕ ಗುರಾಣಿ,ನ್ಯಾಯಾಲಯದ ಆದೇಶದಂತೆ ಪ್ಲಾಸ್ಟರ ಆಫ್ ಪ್ಯಾರೀಸ್ ಗಣಪತಿ ಮೂರ್ತಿಗಳನ್ನು ಬಳಸಬಾರದು. ಹಾಗೇನಾದರೂ ಬಳಸಿರುವುದು ಕಂಡು ಬಂದಲ್ಲಿ ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಪೊಲೀಸ್ ಇಲಾಖೆ ಮತ್ತು ತಾಲೂಕಾಡಳಿತಗಳ ತಂಡ ಕಾರ್ಯಾಚರಣೆ ಮಾಡಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. ದೇವಸ್ಥಾನ, ಮಸೀದಿ ಮತ್ತು ಚರ್ಚಗಳ ಹತ್ತಿರ ಮೆರವಣಿಗೆಯ ವೇಳೆ ವಾಹನ ಸಂಚಾರಕ್ಕೆ ತೊಂದರೆ ಮಾಡಬೇಡಿರಿ ಮತ್ತು ಡಿಜೆಗಳನ್ನು ಬಳಸಲು ಅನುಮತಿಯಿಲ್ಲ ಎಂದ ಅವರು ಗಣೇಶ ಚತುರ್ಥಿ ಮತ್ತು ಮೊಹರಂ ಹಬ್ಬಗಳನ್ನು ಶಾಂತಿಯುತವಾಗಿ ಆಚರಣೆ ಮಾಡಲು ಕೋರಿದರು.
ಪ.ಪಂ ಸಿಬ್ಬಂದಿಗಳಾದ ಮರಿಯಪ್ಪ ಹಳ್ಳೆಮ್ಮನವರ, ಚಂದ್ರಕಾಂತ ಕುದಳೆ, ಹೆಸ್ಕಾಂ ಸಿಬ್ಬಂದಿಗಳಾದ ಈರಪ್ಪ, ರವಿ ಪಾಟೀಲ, ಅಗ್ನಿಶಾಮಕ ಸಿಬ್ಬಂದಿ ಬಿ.ಬಿ.ಜಾಡರ ಹಾಗೂ ಪಟ್ಟಣ ಮತ್ತು ತಾಲೂಕಿನ ಸುತ್ತಮುತ್ತಲಿನ ಹಿಂದು ಮತ್ತು ಮುಸ್ಲಿಂ ಬಾಂಧವರು ಉಪಸ್ಥಿತರಿದ್ದರು. ಇಲ್ಲಿನ ಪೊಲೀಸ್ ಸಿಬ್ಬಂದಿ ಗುರುರಾಜ ನಾಯ್ಕ ಸ್ವಾಗತಿಸಿ ನಿರೂಪಿಸಿದರು.

loading...