ಗದಗ ಜಿಲ್ಲೆಯಲ್ಲಿ ಕೈ ಪ್ರಾಬಲ್ಯ-ಈ ಬಾರಿ ಅರಳುವುದೇ ಕಮಲ ?

0
59

ಬಿಸಿಲಿನೊಂದಿಗೆ ಬಿಸಿ ಎರುತ್ತಿವೆ ಜಿಲ್ಲೆಯ ರಾಜಕೀಯ ಚಟುವಟಿಕೆಗಳು

ಬಸವರಾಜ ದಂಡಿನ

ಗದಗ: ಮತದಾರರ ಹಾಗೂ ಸಾರ್ವಜನಿಕರ ಅತ್ಯಂತ ಕುತೂಹಲ ಕೆರಳಿಸಿದ್ದ ವಿಧಾನಸಭಾ ಚುನಾವಣೆಯ ಗದಗ ಜಿಲ್ಲೆಯ ನಾಲ್ಕೂ ಮತಕ್ಷೇತ್ರಗಳ ರಾಷ್ಟ್ರೀಯ ಪಕ್ಷವಾದ ಕಾಂಗ್ರೇಸ್ ಮತ್ತು ಬಿಜೆಪಿಯ ಚುನಾವಣಾ ಸ್ಪರ್ಧಾ ಆಕಾಂಕ್ಷಿಗಳ ಹೆಸರುಗಳು ಪ್ರಕಟಗೊಳ್ಳುತ್ತಿದ್ದಂತೆಯೆ ಗದಗ ಜಿಲ್ಲೆಯ ರಾಜಕೀಯ ವಲಯದಲ್ಲಿ ತೀವ್ರ ಸಂಚಲನವನ್ನುಂಟು ಮಾಡಿದೆ.
ಕಳೆದ ಚುನಾವಣೆಯಲ್ಲಿ ಗದಗ, ನರಗುಂದ, ರೋಣ ಹಾಗೂ ಶಿರಹಟ್ಟಿ ಮತಕ್ಷೇತ್ರದಲ್ಲೂ ಕಾಂಗ್ರೇಸ್ ತನ್ನ ಪ್ರಾಬಲ್ಯವನ್ನು ಸಾಧಿಸಿತ್ತು. ಎಚ್.ಕೆ.ಪಾಟೀಲ ಗದಗದಿಂದ, ಜಿ.ಎಸ್.ಪಾಟೀಲ ರೋಣದಿಂದ, ಬಿ.ಆರ್.ಯಾವಗಲ್ ನರಗುಂದದಿಂದ ಹಾಗೂ ರಾಮಕೃಷ್ಣ ದೊಡ್ಡಮನಿ ಶಿರಹಟ್ಟಿಯಿಂದ ಚುನಾಯಿತರಾಗಿದ್ದರು ಎಚ್.ಕೆ.ಪಾಟೀಲ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‍ರಾಜ್ ಇಲಾಖೆಯ ಸಚಿವರಾಗಿ ಗದಗ ಜಿಲ್ಲಾ ಉಸ್ತುವಾರಿ ಸಚಿವರಾಗಿ ಕಾರ್ಯನಿರ್ವಹಿಸಿದರು. ಇದಕ್ಕೂ ಮುನ್ನ ಈ ನಾಲ್ಕೂ ಕ್ಷೇತ್ರಗಳು ಬಿಜೆಪಿಯ ಮಡಿಲಲ್ಲಿದ್ದವು.

ಗದಗ ಮತಕ್ಷೇತ್ರ : ಗದಗ ವಿಧಾನಸಭಾ ಮತಕ್ಷೇತ್ರದಲ್ಲಿ ಕಾಂಗ್ರೇಸ್ ಅಭ್ಯರ್ಥಿಯಾಗಿ ಎಚ್.ಕೆ.ಪಾಟೀಲ ಕಣದಲ್ಲಿದ್ದಾರೆ. ಕಳೆದ ಚುನಾವಣೆಯಲ್ಲಿ ಸಮೀಪದ ಪ್ರತಿಸ್ಪರ್ಧಿ ಬಿ.ಎಸ್.ಆರ್ ಕಾಂಗ್ರೇಸ್ ಪಕ್ಷದ ಅಭ್ಯರ್ಥಿ ಅನಿಲ ಪ್ರಕಾಶಬಾಬು ಮೆಣಸಿನಕಾಯಿ ಅವರಿಗಿಂತ 33,727 ಹೆಚ್ಚಿನ ಮತಗಳ ಅಂತರದಿಂದ 70,475 ಮತಗಳನ್ನು ಪಡೆದು ವಿಜಯಶಾಲಿಯಾಗಿದ್ದರು. ಅನಿಲ ಪ್ರಕಾಶಬಾಬು ಮೆಣಸಿನಕಾಯಿ ಅವರು 36,748 ಮತಗಳನ್ನು ಪಡೆದು ಎರಡನೇ ಸ್ಥಾನದಲ್ಲಿದ್ದರು. ಇದೀಗ ಕಾಂಗ್ರೇಸ್‍ನ ಎಚ್.ಕೆ.ಪಾಟೀಲರ ವಿರುದ್ಧ ಬಿಜೆಪಿ ಅಭ್ಯರ್ಥಿಯಾಗಿ ಅನಿಲ ಮೆಣಸಿನಕಾಯಿ ಸ್ಪರ್ಧಾ ಕಣದಲ್ಲಿದ್ದಾರೆ.
ಬಿಜೆಪಿಗೆ ಅನಿಲ ಮೆಣಸಿನಕಾಯಿ ಅವರಿಗೆ ಟಿಕೇಟ್ ಖಚಿತಗೊಳ್ಳುತ್ತಿದ್ದಂತೆಯೇ ಗದಗ ಮತಕ್ಷೇತ್ರದಲ್ಲಿ ಬಿಜೆಪಿಯಲ್ಲಿ ಅನಿಲ ಸೇರಿ ಸುಮಾರು 8 ಆಕಾಂಕ್ಷಿಗಲ್ಲಿ 7 ಜನರಿಗೆ ಸಹಜವಾಗಿ ಅಸಮಾಧಾನವಾಗಿದ್ದರೂ ಅದನ್ನು ಅಭಿವ್ಯಕ್ತಗೊಳಿಸದೇ ಈ ಮೊದಲು ಹೇಳಿಕೊಂಡಂತೆ ಒಗ್ಗಟ್ಟಿನ ಮಂತ್ರ ಜಪಿಸುತ್ತಿದ್ದಾರೆ. ಕಾಂಗ್ರೇಸ್‍ಗೆ ಪ್ರಬಲ ಪೈಪೋಟಿ ಒಡ್ಡಲು ಸಿದ್ದತೆಯಲ್ಲಿ ತೊಡಗಿದ್ದಾರೆ. ಈ ಹಿಂದೆ ಗದಗ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಬಿ.ಶ್ರೀರಾಮುಲು ಹಾಗೂ ಗಣಿ ದೊರೆಗಳ ಆಪ್ತರಾಗಿರುವ ಅನಿಲ ಮೆಣಸಿನಕಾಯಿ ಶ್ರೀರಾಮುಲು ಪ್ರಭಾವ ಹಾಗೂ ತಮ್ಮ ವರ್ಚಸ್ಸನ್ನು ಪಣಕ್ಕಿಡುವ ತಯಾರಿಯಲ್ಲಿದ್ದಾರೆ.

ಎಚ್.ಕೆ.ಪಾಟೀಲ ಹಲವಾರು ರಚನಾತ್ಮಕ ಹಾಗೂ ಪ್ರಗತಿಪರ ಕಾರ್ಯಗಳನ್ನು ಮಾಡಿದ್ದು ಅವುಗಳನ್ನು ಮುಂದಿಟ್ಟುಕೊಂಡೇ ಕಣಕ್ಕಿಳಿದಿದ್ದು ಅವರೂ ಗೆಲುವಿನ ಎಲ್ಲ ತಂತ್ರಗಳನ್ನು ಪ್ರಯೋಗಿಸಲು ಸಿದ್ದತೆಯಲ್ಲಿದ್ದಾರೆ. ಗದಗ ಮತಕ್ಷೇತ್ರದಲ್ಲಿ ಉಳಿದ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಇದುವರೆಗೂ ಸ್ಪಷ್ಠವಾಗಿ ಘೋಷಣೆ ಮಾಡಿಲ್ಲ. ಮಹಿಮಾ ಪಟೇಲ್‍ರ ಜೆಡಿಯು ಪಕ್ಷದಿಂದ ಗದಗ ಮತಕ್ಷೇತ್ರದ ಅಭ್ಯರ್ಥಿಯಾಗಿ ಎಸ್.ಎಸ್.ರಡ್ಡೇರ ಬಿ.ಫಾರ್ಮ ಪಡೆದುಕೊಂಡಿದ್ದು ಕಣಕ್ಕಿಳಿಯುವ ಸಿದ್ದತೆಯಲ್ಲಿದ್ದಾರೆ. ಜೆಡಿಎಸ್ ಬಿಎಸ್ಪಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿದ್ದರಿಂದ ಅಭ್ಯರ್ಥಿಯನ್ನು ಅಧಿಕೃತವಾಗಿ ಘೋಷಣೆ ಮಾಡಿಲ್ಲ. ಪ್ರಾದೇಶಿಕ ಮತ್ತು ಪಕ್ಷೇತರ ಅಭ್ಯರ್ಥಿಗಳು ಕಣಕ್ಕಿಳಿಯಲು ಮೀನ ಮೇಷ ಎಣಿಸುತ್ತಿದ್ದಾರೆ.

*ರೋಣ ಮತಕ್ಷೇತ್ರ : ರೋಣ ಮತಕ್ಷೇತ್ರದಲ್ಲಿ ಕಾಂಗ್ರೇಸ್ ಅಭ್ಯರ್ಥಿ ಜಿ.ಎಸ್.ಪಾಟೀಲ್ ಪುನಃ ಕಣದಲ್ಲಿದ್ದಾರೆ. ಕಳೆದ ಚುನಾವಣೆಯಲ್ಲಿ ಪಾಟೀಲರು ತಮ್ಮ ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ಕಳಕಪ್ಪ ಬಂಡಿ ಅವರಿಗಿಂತ 18,165 ಹೆಚ್ಚಿನ ಮತಗಳನ್ನು ಪಡೆದು ಆಯ್ಕೆಯಾಗಿದ್ದರು. ಜಿ.ಎಸ್.ಪಾಟೀಲ್ ಅವರು 74,219 ಪಡೆದುಕೊಂಡಿದ್ದರೆ ಬಿಜೆಪಿಯ ಕಳಕಪ್ಪ ಬಂಡಿ ಅವರು 56,054 ಮತಗಳನ್ನು ಪಡೆದಿದ್ದರು. ಈ ಸಲದ ಚುನಾವಣೆಯಲ್ಲಿ ಕಾಂಗ್ರೇಸ್‍ದಿಂದ ಜಿ.ಎಸ್.ಪಾಟೀಲ, ಬಿಜೆಪಿಯಿಂದ ಕಳಕಪ್ಪ ಬಂಡಿ ಕಣದಲ್ಲಿದ್ದಾರೆ.

ಕಳಕಪ್ಪ ಬಂಡಿ ಅವರು ಬಿಜೆಪಿ ಅಧಿಕಾರದ ಅವಧಿಯಲ್ಲಿ ಗದಗ ಜಿಲ್ಲಾ ಉಸ್ತುವಾರಿ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ ಈ ಸಲದ ಚುನಾವಣೆಯನ್ನು ಪ್ರತಿಷ್ಠೆಯನ್ನಾಗಿ ತೆಗೆದುಕೊಂಡಿರುವ ಬಂಡಿ ಅವರು ರೋಣದ ಗೌಡರ ವಿರುದ್ಧ ಜಿದ್ದಾಜಿದ್ದಿನ ಸ್ಪರ್ಧೆವೊಡ್ಡುವ ಸಾಧ್ಯತೆಗಳಿವೆ.
* ನರಗುಂದ ಮತಕ್ಷೇತ್ರ: ನರಗುಂದ ಮತಕ್ಷೇತ್ರದಲ್ಲಿ ಕಾಂಗ್ರೇಸ್ ಪಕ್ಷದ ಅಭ್ಯರ್ಥಿ ಬಿ.ಆರ್.ಯಾವಗಲ್ ಪುನಃ ಕಣದಲ್ಲಿದ್ದಾರೆ. ಕಳೆದ ಚುನಾವಣೆಯಲ್ಲಿ ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಬಿಜೆಪಿ ಅಭ್ಯರ್ಥಿ ಸಿ.ಸಿ.ಪಾಟೀಲ್ ಅವರಿಗಿಂತ 8585 ಹೆಚ್ಚಿನ ಮತಗಳನ್ನು ಪಡೆದು ಆಯ್ಕೆಯಾಗಿದ್ದರು. ಬಿ.ಆರ್.ಯಾವಗಲ್ ಅವರು 59,620 ಹಾಗೂ ಸಿ.ಸಿ.ಪಾಟೀಲ್ ಅವರು 51,035 ಮತಗಳನ್ನು ಪಡೆದಿದ್ದರು. ಇದೀಗ ಇಬ್ಬರೂ ಕಣದಲ್ಲಿದ್ದಾರೆ.

ಈ ಸಲದ ಚುನಾವಣೆಯಲ್ಲಿ ಸತಾಯಗತಾಯ ಗೆಲ್ಲುವ ಹುಮ್ಮಸ್ಸು ಸಿ.ಸಿ.ಪಾಟೀಲರಲ್ಲಿದ್ದರೆ, ಕ್ಷೇತ್ರದಲ್ಲಿ ನಾನು ಮಾಡಿದ ಹಲವಾರು ಜನಪರ ಅಭಿವೃದ್ಧಿ ಕಾರ್ಯಗಳಿಂದಲೇ ನನಗೆ ಗೆಲವು ಸುಲಭ ಎಂದು ಯಾವಗಲ್ ತೀವ್ರ ಪೈಪೋಟಿ ನೀಡಲು ಸಿದ್ಧತೆ ಮಾಡಿಕೊಂಡಿದ್ದಾರೆ.
* ಶಿರಹಟ್ಟಿ ಮತಕ್ಷೇತ್ರ : ಶಿರಹಟ್ಟಿ (ಪ.ಜಾ.) ಮತಕ್ಷೇತ್ರದಲ್ಲಿ ಕಾಂಗ್ರೇಸ್ ಪಕ್ಷದ ಅಭ್ಯರ್ಥಿ ರಾಮಕೃಷ್ಣ ದೊಡ್ಡಮನಿ ಪುನಃ ಕಣದಲ್ಲಿದ್ದಾರೆ. ಕಳೆದ ಚುನಾವಣೆಯಲ್ಲಿ ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ರಾಮಪ್ಪ ಲಮಾಣಿ ಲಮಾಣಿ ಅವರಿಗಿಂತ 315 ಹೆಚ್ಚಿನ ಮತಗಳನ್ನು ಪಡೆದು ಆಯ್ಕೆಯಾಗಿದ್ದರು. ದೊಡ್ಡಮನಿ ಅವರು 44,738 ಹಾಗೂ ಲಮಾಣಿ ಅವರು 44,423 ಮತಗಳನ್ನು ಪಡೆದುಕೊಂಡಿದ್ದರು ಇದೀಗ ಇಬ್ಬರೂ ಕಣದಲ್ಲಿದ್ದಾರೆ.

ಶಿರಹಟ್ಟಿ ಮತಕ್ಷೇತ್ರದಲ್ಲಿ ಬಿಜೆಪಿಯ ರಾಮಣ್ಣ ಲಮಾಣಿ ಅವರಿಗೆ ಪ್ರತಿಷ್ಠೆಯ ಕಣವಾಗಿದೆ. ಲಮಾಣಿ ಅವರಿಗೆ ಟಿಕೇಟ್ ನೀಡಬೇಡಿ ಎಂಬ ಕೂಗು ಕೇಳಿ ಬಂದಿತ್ತು ಹಾಗೆಯೇ ಕಾಂಗ್ರೇಸ್ ಪಕ್ಷದಲ್ಲಿ ಹಲವಾರು ಆಕಾಂಕ್ಷಿಗಳು ಟಿಕೇಟ್ ಸಿಗಲಾರದ್ದಕ್ಕೆ ಮುನಿಸಿಕೊಂಡಿದ್ದಾರೆ ಹೀಗಾಗಿ ಇಬ್ಬರಿಗೂ ಪ್ರತಿಷ್ಠೆಯ ಕಣವೆಂದೇ ಹೇಳಬೇಕು.

 

ಹುಲಕೋಟಿ ಹುಲಿಗೇ ಸಚಿವ ಸ್ಥಾನದ ಸಿಂಹ ಪಾಲು:
ಗದಗ ಜಿಲ್ಲೆಯ ನಾಲ್ಕು ಮತಕ್ಷೇತ್ರಗಳ ವಿಧಾನಸಭಾ ಚುನಾವಣೆಗೆ ಕಾಂಗ್ರೇಸ್‍ದಿಂದ ನಾಲ್ವರು, ಬಿಜೆಪಿಯಿಂದ ನಾಲ್ವರು ಮಾಜಿ ಸಚಿವರು, ಮಾಜಿ ಶಾಸಕರು ಕಣದಲ್ಲಿದ್ದಾರೆ. ಕಾಂಗ್ರೇಸ್‍ನ ಭದ್ರಕೋಟೆ ಎಂದೆ ಬಣ್ಣಿಸಲಾಗುವ ಗದಗ ಪರಿಸರದಲ್ಲಿ ದಿ.ಕೆ.ಎಚ್.ಪಾಟೀಲ, ಎಚ್.ಕೆ.ಪಾಟೀಲ, ಡಿ.ಆರ್.ಪಾಟೀಲ ಕುಟುಂಬ ರಾಜಕಾರಣ ಮಾಡಿಕೊಂಡು ಬಂದಿದೆ. ಸ್ವಾತಂತ್ರ ನಂತರದ ರಾಜಕೀಯ ಇತಿಹಾಸದಲ್ಲಿ ಸಚಿವ ಸ್ಥಾನದ ಗಾದೆ ಕೆ.ಎಚ್.ಪಾಟೀಲರ ನಂತರ ಎಚ್.ಕೆ.ಪಾಟೀಲರು ಅನುಭವಿಸುತ್ತಾ ಬಂದಿದ್ದಾರೆ. ಜಿ.ಎಸ್.ಪಾಟೀಲ, ಬಿ.ಆರ್.ಯಾವಗಲ್ ಸಚಿವ ಸ್ಥಾನದ ಆಕಾಂಕ್ಷಿಗಳಾಗಿಯೇ ಕಾಂಗ್ರೇಸ್‍ದಲ್ಲಿ ಉಳಿದುಕೊಂಡು ಬಂದಿದ್ದಾರೆ.
ಜನತಾ ದಳ ಸರಕಾರವಿದ್ದಾಗ ಮುಂಡರಗಿ ಮತಕ್ಷೇತ್ರದ ಶಾಸಕ ಎಸ್.ಎಸ್.ಪಾಟೀಲ ಸಹಕಾರಿ ಸಚಿವರಾಗಿದ್ದರು. ಬಿಜೆಪಿ ಸರಕಾರವಿದ್ದಾಗ ಬಳ್ಳಾರಿಯ ಬಿ.ಶ್ರೀರಾಮುಲು, ನರಗುಂದ ಮತಕ್ಷೇತ್ರದ ಬಿಜೆಪಿಯ ಸಿ.ಸಿ.ಪಾಟೀಲ, ರೋಣ ಮತಕ್ಷೇತ್ರದ ಬಿಜೆಪಿ ಕಳಕಪ್ಪ ಬಂಡಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರು. ಕಳೆದ ಅವಧಿಯ ಕಾಂಗ್ರೇಸ್ ಸಿದ್ದರಾಮಯ್ಯ ಸರಕಾರದಲ್ಲಿ ಗದಗ ಮತಕ್ಷೇತ್ರದ ಎಚ್.ಕೆ.ಪಾಟೀಲ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರು. ಕಾಂಗ್ರೇಸ್ ಸರಕಾರ ರಚನೆಗೊಂಡಾಗಲೆಲ್ಲ ಸಚಿವ ಸ್ಥಾನ ಕೆ.ಎಚ್.ಪಾಟೀಲ, ಎಚ್.ಕೆ.ಪಾಟೀಲರಿಗೆ ಕಟ್ಟಿಟ್ಟ ಬುತ್ತಿ ಎನ್ನುವ ಮಾತು ಗದಗ ಜಿಲ್ಲೆಯ ರಾಜಕೀಯ ವಲಯದಲ್ಲಿ ಕೇಳಿ ಬರುವ ಮಾತು. ಈ ಸಲ ಮತದಾರ ಪ್ರಭುಗಳು ಈ ಉಸ್ತುವಾರಿಯನ್ನು ಯಾರಿಗೆ ವಹಿಸುವರು ಎಂಬುದನ್ನು ಕಾದು ನೋಡಬೇಕಿದೆ.

loading...