ಗನ್‍ಮ್ಯಾನ್ ಅಟ್ಟಹಾಸಕ್ಕೆ ನಾಲ್ವರು ಬಲಿ

0
28

ಸ್ಟ್ರಾಸ್‍ಬರ್ಗ್(ಫ್ರಾನ್ಸ್)- ಬಂದೂಕುದಾರಿಯೊಬ್ಬ ಕ್ರಿಸ್ಮಸ್ ಮಾರುಕಟ್ಟೆಗೆ ನುಗ್ಗಿ ನಡೆಸಿದ ಗುಂಡಿನ ದಾಳಿಯಲ್ಲಿ ನಾಲ್ವರು ಮೃತಪಟ್ಟು, 12ಕ್ಕೂ ಹೆಚ್ಚು ಜನರು ಗಾಯಗೊಂಡ ಘಟನೆ ಫ್ರಾನ್‍ಸ‍ನ ಸ್ಟ್ರಾಸ್‍ ಬರ್ಗ‍ನಲ್ಲಿ ನಿನ್ನೆ ರಾತ್ರಿ ನಡೆದಿದೆ. ಇದು ಉಗ್ರಗಾಮಿಯ ಕೃತ್ಯ ಎಂದು ಶಂಕಿಸಲಾಗಿದೆ. ಪಹರೆಯಲ್ಲಿದ್ದ ಯೋಧರು ಮತ್ತು ಹಂತಕನ ನಡುವೆ ಗುಂಡಿನ ಚಕಮಕಿ ನಡೆಯಿತು. ಎನ್‍ಕೌಂಟರ್‍ನಲ್ಲಿ ದುಷ್ಕರ್ಮಿಗೆ ಗುಂಡೇಟು ತಗುಲಿದ್ದರೂ ಆತ ಪರಾರಿಯಾಗಿದ್ದಾನೆ. ಹಂತಕ ಗನ್‍ಮ್ಯಾನ್‍ಗಾಗಿ ಫ್ರೆಂಚ್ ಭದ್ರತಾಪಡೆ ವ್ಯಾಪಕ ಬಲೆ ಬೀಸಿದೆ.

ಸ್ಟ್ರಾಸ್‍ಬರ್ಗ‍ನ ಅತ್ಯಂತ್ಯ ಜನಸಂದಣಿಯ ಕ್ರಿಸ್ಮಸ್ ಮಾರುಕಟ್ಟೆಗೆ ನಿನ್ನೆ ರಾತ್ರಿ 8 ಗಂಟೆಗೆ ನುಗ್ಗಿದ ಗನ್‍ಮ್ಯಾನ್ ಜನರ ಗುಂಪಿನತ್ತ ಗುಂಡಿನ ದಾಳಿ ನಡೆಸಿದ. ಈ ಕೃತ್ಯದಲ್ಲಿ ನಾಲ್ವರು ಹತರಾದರು. 12ಕ್ಕೂ ಹೆಚ್ಚು ಮಂದಿ ತೀವ್ರ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೆಲವರ ಸ್ಥಿತಿ ಶೋಚನೀಯವಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ವೈದ್ಯರು ಆತಂಕ ವ್ಯಕ್ತಪಡಿಸಿದ್ದಾರೆ. ಬಂದೂಕುದಾರಿಯು ಗುಂಡಿನ ದಾಳಿ ನಡೆಸುತ್ತಿದ್ದಂತೆ ಜನರು ಹೆದರಿ ದಿಕ್ಕಾಪಾಲಾಗಿ ಓಡಿ ಹೋಗಿ ಸುರಕ್ಷಿತ ಸ್ಥಳಗಳಲ್ಲಿ ಅವಿತುಕೊಂಡಿದ್ದರಿಂದ ಹೆಚ್ಚಿನ ಅನಾಹುತ ಸಂಭವಿಸಲಿಲ್ಲ.

ಪಹರೆಯಲ್ಲಿದ್ದ ಯೋಧರು ಇದೇ ಸಂದರ್ಭದಲ್ಲಿ ಜನರ ರಕ್ಷಣೆಗೆ ಧಾವಿಸಿದಾಗ ಗನ್‍ಮ್ಯಾನ್ ಗುಂಡು ಹಾರಿಸಿದ. ನಂತರ ನಡೆದ ಎನ್‍ಕೌಂಟರ್‍ನಲ್ಲಿ ದುಷ್ಕರ್ಮಿಗೆ ಗುಂಡೇಟು ತಗಲಿದೆ. ಆದರೆ ಆತ ಪರಾರಿಯಾಗಿದ್ದಾನೆ. ಗೃಹ ಸಚಿವ ಕ್ರಿಸ್ಟೋಫ್ ಕ್ಯಾಸ್ಟನೆರ್ ಹಂತಕನ ದಾಳಿಯಲ್ಲಿ ನಾಲ್ವರು ಮೃತಪಟ್ಟು, 12ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ತಿಳಿಸಿದ್ದಾರೆ. 2016ರಲ್ಲಿ ಟುನಿಷ್ಯಾದ ಉಗ್ರನೊಬ್ಬ ಬರ್ಲಿನ್ ಕ್ರಿಸ್ಮಸ್ ಮಾರುಕಟ್ಟೆಗೆ ಟ್ರಕ್ ನುಗ್ಗಿಸಿ 12 ಮಂದಿಯನ್ನು ಬಲಿ ತೆಗೆದುಕೊಂಡಿದ್ದ ಘಟನೆಯಲ್ಲಿ ಇಲ್ಲಿ ಉಲ್ಲೇಖಿಸಬಹುದು.

loading...