ಗಾಂಧೀ ಬಝಾರ್‌ ತೆರವು ವಿರೋಧಿಸಿ ಬಂದ್‌ ಆಚರಿಸಿದ ವ್ಯಾಪಾರಸ್ಥರು

0
22

ಕಾರವಾರ: ನಗರದ ಹೃದಯಭಾಗದ ಗಾಂಧೀ ಮಾರ್ಕೆಟ್‌ನ 50 ಅಂಗಡಿಕಾರರಿಗೆ ಏಕಾಏಕಿ ನಗರಸಭೆ ಖಾಲಿ ಮಾಡುವಂತೆ ನೋಟಿಸ್‌ ನೀಡಿರುವುದನ್ನು ವಿರೋಧೀಸಿ ನಗರದ ಎಲ್ಲಾ ವ್ಯಾಪಾರಸ್ಥರು ತಮ್ಮ ಅಂಗಡಿ ಮುಂಗಟ್ಟು ಬಂದ್‌ ಮಾಡಿ ಪ್ರತಿಭಟನೆ ನಡೆಸಿದರು.
ಸುಮಾರು ನೂರು ವರ್ಷದ ಹಿಂದಿನ ಗಾಂಧೀ ಮಾರ್ಕೆಟ್‌ ಶಿಥಿಲಾವಸ್ಥೆಯಲ್ಲಿದೆ. ಆಗೋ ಈಗೋ ಮುರಿದು ಬೀಳುವ ಹಂತದಲ್ಲಿರುವ ಈ ಕಟ್ಟಡಗಳನ್ನು ಖುಲ್ಲಾಪಡಿಸಿ ಆ ಸ್ಥಳದಲ್ಲಿ ದೊಡ್ಡದಾದ ಸುವ್ಯವಸ್ಥಿತವಾದ ಮಾರ್ಕೆಟ್‌ ನಿರ್ಮಿಸಲು ನಗರಸಭೆ ನಿರ್ಧರಿಸಿದೆ. ನೂತನ ಮಾರ್ಕೆಟ್‌ ನಿರ್ಮಾಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಮೊದಲ ಹಂತದಲ್ಲಿ ಹಣಕಾಸು ಸಹ ಮಂಜೂರಾಗಿದ್ದು ನೀಲಿ ನಕ್ಷೆ ಸಹ ತಯಾರಾಗಿದೆ. ಇದರ ಅಂಗವಾಗಿ ಗಾಂಧೀ ಮಾರ್ಕೇಟ್‌ ಹೊಂದಿಕೊಂಡಂತಿರುವ ಹಳೆ ಮೀನು ಮಾರುಕಟ್ಟೆ ನೆಲಸಮಗೊಳಿಸಿ ಅಲ್ಲಿ ಹೊಸ ಮೀನು ಮಾರುಕಟ್ಟೆ ಸಹ ನಿರ್ಮಾಣಗೊಳ್ಳುತ್ತಿದೆ.
ಸ್ಥಳೀಯ ನಗರಸಭೆ ಒಂದು ವರ್ಷದ ಹಿಂದೆ ಗಾಂಧೀ ಮಾರ್ಕೇಟ್‌ನಲ್ಲಿರುವ ಅಂಗಡಿಕಾರರಿಗೆ ಅಂಗಡಿ ಖಾಲಿ ಮಾಡುವಂತೆ ನೋಟಿಸ್‌ ನೀಡಿದಾಗ ಅಲ್ಲಿಯ 22 ಅಂಗಡಿಕಾರರು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದರು. ನಗರಸಭೆಯ ನೋಟಿಸ್‌ ಸ್ವೀಕರಿಸಿದ್ದ ಉಳಿದ ಇಬ್ಬರು ಅಂಗಡಿಕಾರರು ಮಾತ್ರ ನ್ಯಾಯಾಲಯದ ಮೊರೆ ಹೋಗಿರಲಿಲ್ಲ. ಇವರಿಗೆ ಮೊನ್ನೆ ಶನಿವಾರ ನಗರಸಭೆ ಅಂಗಡಿ ಖಾಲಿ ಮಾಡುವಂತೆ ನೋಟಿಸ್‌ ಜಾರಿ ಮಾಡಿ ಏಕಾಏಕಿ ಅವರ ಅಂಗಡಿಗೆ ನುಗ್ಗಿ ಬಲವಂತವಾಗಿ ಅಲ್ಲಿರುವ ಎಲ್ಲಾ ಸಾಮಾನುಗಳನ್ನು ಹೊರಕ್ಕೆ ಹಾಕಿ ಅಂಗಡಿ ಸೀಲ್‌ ಮಾಡಿದೆ ಎಂದು ವ್ಯಾಪಾರಸ್ಥರ ಅಸೋಶಿಯನ್‌ ಆರೋಪಿಸಿದೆ. ಅಧಿಕಾರಿಗಳು ಮುಂದಿನ ದಿನಗಳಲ್ಲಿ ಉಳಿದ ಅಂಗಡಿಗಳಿಗೂ ಸಹ ಇದೇ ರೀತಿ ಮಾಡಬಹುದು ಎಂದು ಭಯ ವ್ಯಕ್ತಪಡಿಸುವ ವ್ಯಾಪಾರಿಗಳು ತಮಗೆ ಜೀವನಾಧಾರಕ್ಕೆ ಈ ಅಂಗಡಿ ಬಿಟ್ಟು ಬೇರೆ ಯಾವುದೇ ಮಾರ್ಗವಿಲ್ಲ. ಬೇರೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕೆಂದು ವ್ಯಾಪಾರಸ್ಥರು ಆಗ್ರಹಿಸಿದ್ದಾರೆ. ಗಾಂಧೀ ಮಾರ್ಕೇಟ್‌ ಸುಮಾರು ನೂರು ವರ್ಷದ ಹಿಂದೆ ಆಗೀನ ಬ್ರಿಟಿಷ್‌ ಸರ್ಕಾರ ಅಂಗಡಿಕಾರರಿಗೆ 99 ವರ್ಷ ಲೀಸ್‌ ಮೇಲೆ ನೀಡಲಾಗಿತ್ತು. ಈ ಅಂಗಡಿಗಳು ಕೈಯಿಂದ ಕೈಗೆ ಬದಲಾಗುತ್ತಾ ಬಂದಿದೆ. ಈ ಅಂಗಡಿಗಳ ಬಹುತೇಕ ಮೂಲ ಮಾಲಿಕರ್ಯಾರು ಇಲ್ಲಿಲ್ಲ. ನಂತರದ ದಿನಗಳಲ್ಲಿ ಈ ಅಂಗಡಿಗಳನ್ನು ಅಕ್ರಮಿಸಿಕೊಂಡವರು ಬಹಳ ವರ್ಷದಿಂದ ಇಲ್ಲಿಯೇ ವ್ಯಾಪಾರ ವಹಿವಾಟು ನಡೆಸುತ್ತಿದ್ದಾರೆ ಎಂದು ನಗರಸಭೆ ಅಧಿಕಾರಿಗಳು ಆರೋಪಿಸುತ್ತಾರೆ. ಈ ಕಟ್ಟಡಗಳು ಈಗ ಅತ್ಯಂತ ಶಿಥೀಲಾವಸ್ಥೆ ತಲುಪಿದೆ. ಇಂದೋ ನಾಳೆ ಮುರಿದು ಬೀಳುವ ಸ್ಥಿತಿಯಲ್ಲಿದ್ದು ಒಂದೊಮ್ಮೆ ಅವಘಡ ಸಂಭವಿಸಿದರೆ ಜವಾಬ್ದಾರರ್ಯಾರು ಎಂದು ಅಧಿಕಾರಿಗಳು ಪ್ರಶ್ನಿಸುತ್ತಾರೆ. ಇಂಥ ಬಂದ್‌ಗಳ ಮೂಲಕ ನೂತನ ಮಾರುಕಟ್ಟೆ ನಿರ್ಮಾಣ ಸ್ಥಗಿತಗೊಳಿಸಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಶಾಸಕಿ ಭೇಟಿ: ಶಾಸಕಿ ರೂಪಾಲಿ ನಾಯ್ಕ ಗಾಂಧೀ ಮಾರ್ಕೇಟ್‌ಗೆ ಭೇಟಿ ನೀಡಿ ವ್ಯಾಪಾರಸ್ಥರ ಸಮಸ್ಯೆಗಳನ್ನು ಆಲಿಸಿ ಈ ಬಗ್ಗೆ ಸರ್ಕಾರದ ಗಮನಕ್ಕೆ ತಂದು ನ್ಯಾಯ ಒದಗಿಸುವ ಭರವಸೆ ನೀಡಿದರು. ಮಾಜಿ ಶಾಸಕ ಸತೀಶ ಸೈಲ್‌ ಹಾಗೂ ಮಾಜಿ ಸಚಿವ ಆನಂದ ಅಸ್ನೋಟಿಕರ್‌ ಸಹ ಭೇಟಿ ನೀಡಿ ವ್ಯಾಪಾರಸ್ಥರ ಹೋರಾಟ ಬೆಂಬಲಿಸಿದರು. ನಗರದ ಅಂಗಡಿ ಮುಂಗಟ್ಟುಗಳ ಬಂದ್‌ ಆಚರಿಸಿದರೂ ಜನ ಹಾಗೂ ವಾಹನ ಸಂಚಾರ, ಶಾಲಾ ಕಾಲೇಜುಗಳು ಎಂದಿನಂತೆ ಇತ್ತು. ಪೋಲಿಸ್‌ ಇಲಾಖೆ ವ್ಯಾಪಕ ಬಂದೋಬಸ್ತ ಕೈಗೊಂಡಿತ್ತು.

loading...