ಗೇರು ಬೆಳೆಯ ತೋಟಗಳಿಗೆ ಕೃಷಿ ತಜ್ಞರ ಭೇಟಿ

0
40

 

ಹಳಿಯಾಳ: ಮಾವಿನ ಹಣ್ಣಿನ ಫಸಲು ಬೆಳವಣಿಗೆ ಹಂತದಲ್ಲಿದ್ದು ಈ ಹಂತದಲ್ಲಿ ಮಾವು ಗಿಡಗಳಿಗೆ ಒಂದೆರಡು ಸಲ ನೀರು ಒದಗಿಸಿದರೆ ಹಣ್ಣಿನ ಗಾತ್ರ ಮತ್ತು ಇಳುವರಿ ಹೆಚ್ಚುತ್ತದೆ ಎಂದು ತೋಟಗಾರಿಕಾ ತಜ್ಞರು ಸಲಹೆ ನೀಡಿದ್ದಾರೆ.
ಶಿರಸಿಯಲ್ಲಿರುವ ಕೃಷಿ ವಿಜ್ಞಾನ ಕೇಂದ್ರದ ತಜ್ಞರು ಬುಧವಾರ ಹಳಿಯಾಳ ಹಾಗೂ ಜೋಯಿಡಾ ತಾಲೂಕಿನಾದ್ಯಂತ ಸಂಚರಿಸಿ ಮಾವು ಹಾಗೂ ಗೇರು ಬೆಳೆಯ ತೋಟಗಳಿಗೆ ಭೇಟಿ ನೀಡಿ ಪ್ರಸ್ತುತ ಬೆಳೆಯ ಸ್ಥಿತಿ-ಗತಿಗಳನ್ನು ಪರಿಶೀಲಿಸಿದರು. ಮಾವಿನ ಬೆಳೆಯಲ್ಲಿ ೨ ವರ್ಷಕ್ಕೊಮ್ಮೆ ಹೆಚ್ಚಿನ ಫಸಲು ನೀಡುವ ಗುಣಧರ್ಮವಿರುತ್ತದೆ. ಈ ಕಾರಣ ಫಸಲು ಕುಂಠಿತವಾಗಬಹುದಾಗಿದೆ. ಅದರ ಜೊತೆಗೆ ರೈತರು ಸೂಕ್ತ ಸಮಯದಲ್ಲಿ ಯಾವುದೇ ಔಷಧಿಗಳನ್ನು ಸಿಂಪಡಿಸದೇ ಇರುವುದರಿಂದಲೂ ಸಹ ಸಮಸ್ಯೆಯಾಗಬಹುದಾಗಿದೆ. ಹೀಗಾಗಿ ತೋಟಗಾರಿಕಾ ಇಲಾಖೆಯ ಸಲಹೆಯಂತೆ ವಿವಿಧ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ.

ಮಳೆಯಾಶ್ರಿತ ಫಸಲಾಗಿದ್ದರೂ ಸಹ ಅವಕಾಶವಿದ್ದವರು ಫಲಕಟ್ಟುವ ಸಂದರ್ಭದಲ್ಲಿ ನೀರು ಹಾಯಿಸಬಹುದಾಗಿದೆ. ಮರದ ಸುತ್ತಮುತ್ತಲು ಬೆಳೆದ ಗಿಡ-ಗಂಟಿಗಳನ್ನು ತೆರವುಗೊಳಿಸುವುದು ಮಾತ್ರವಲ್ಲದೇ ಗಿಡದಲ್ಲಿ ಬೆಳೆದಿರುವ ಅಡ್ಡತಿಡ್ಡ ಹಾಗೂ ಒಣ ರೆಂಬೆ-ಕೊಂಬೆಗಳನ್ನು ಕಡಿದು ಸ್ವಚ್ಛವಾಗಿಟ್ಟುಕೊಳ್ಳುವುದು ಅವಶ್ಯಕವಾಗಿದೆ ಎಂದು ತೋಟಗಾರಿಕಾ ತಜ್ಞರು ಸಲಹೆ ನೀಡಿದ್ದಾರೆ.
ಶಿರಸಿಯ ಕೃಷಿ ವಿಜ್ಞಾನ ಕೇಂದ್ರದ ತಜ್ಞರಾದ ಡಾ. ಮಂಜು ಎಂ.ಜೆ., ಡಾ. ರೂಪಾ ಎಸ್. ಪಾಟೀಲ, ಡಾ. ಸಂತೋಷ ಎಚ್.ಎಂ., ಹಾರ್ಟಿ ಕ್ಲಿನಿಕ್ ವಿಷಯ ತಜ್ಞ ವಿ.ಎಂ. ಹೆಗಡೆ ಹಾಗೂ ಹಳಿಯಾಳ ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ ಎ.ಆರ್. ಹೆರಿಯಲ್ ಮತ್ತು ಜೋಯಿಡಾ ತೋಟಗಾರಿಕಾ ಇಲಾಖೆಯ ಸಹಾಯಕ ತೋಟಗಾರಿಕಾ ಅಧಿಕಾರಿ ಟೋನಿ ಇವರುಗಳು ಕ್ಷೆÃತ್ರ ಭೇಟಿಯ ಸಂದರ್ಭದಲ್ಲಿದ್ದರು.

loading...