ಗ್ರಾಪಂಗಳ ಅಭಿವೃದ್ಧಿ ಕಾಮಗಾರಿಗಳ ಶಿಲಾನ್ಯಾಸ

0
43

ಕನ್ನಡಮ್ಮ ಸುದ್ದಿ-ಶಿರಸಿ: ಬನವಾಸಿ ಹೋಬಳಿ ಎರಡು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ವರದಾ ನದಿಯಿಂದ ಕೆರೆಗೆ ನೀರು ತುಂಬುವ ಯೋಜನೆಗೆ ಮಂಜೂರಾತಿ ದೊರೆತಿದ್ದು ತಿಂಗಳೊಳಗೆ ಕಾಮಗಾರಿ ಪ್ರಾರಂಭಿಸಲಾಗುವುದು ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು.
ತಾಲೂಕಿನ ಬನವಾಸಿ ಹೋಬಳಿಯ ವಿವಿಧ ಗ್ರಾಮ ಪಂಚಾಯ್ತಿಗಳಲ್ಲಿ ಅಭಿವೃದ್ಧಿ ಕಾಮಗಾರಿಗಳ ಶಿಲಾನ್ಯಾಸ ನೆರವೇರಿಸಿದ್ದಲ್ಲದೇ ಕಿರವತ್ತಿಯಲ್ಲಿ ರಸ್ತೆ ಹಾಗೂ ಅಂಬೇಡ್ಕರ ಭವನ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. ಜನರ ಬೇಡಿಕೆಗನುಗುಣವಾಗಿ ಕಾಮಗಾರಿ ಅನುಷ್ಠಾನಕ್ಕೆ ತರಲಾಗುತ್ತಿದೆ. ವಸತಿ, ಆಹಾರ, ಶಿಕ್ಷಣ, ಆರೋಗ್ಯ ಕ್ಷೇತ್ರಕ್ಕೆ ಕಾಂಗ್ರೆಸ್‌ ಆದ್ಯತೆ ನೀಡಿದೆ. ಬನವಾಸಿ ಹೋಬಳಿ ಬರಗಾಲಪೀಡಿತ ಪ್ರದೇಶವಾಗಿದೆ. ಹೀಗಾಗಿ ವರದಾ ನದಿಯಿಂದ ಈ ಭಾಗದ ಕೆರೆ ತುಂಬುವ ನೀರಾವರಿ ಯೋಜನೆ ಜಾರಿ ಮಾಡಲಾಗಿದೆ. 20 ದಿನಗಳೊಳಗೆ ಶಿಲಾನ್ಯಾಸ ನೆರವೇರಿಸಲಾಗುವುದು ಎಂದು ತಿಳಿಸಿದರು.
20 ವರ್ಷ ಬಿಜೆಪಿ ಆಳಿದ ಈ ನೆಲದಲ್ಲಿ ಅಭಿವೃದ್ಧಿಯೇ ಆಗಿರಲಿಲ್ಲ. ಈಗ ಅಭೂತಪೂರ್ವ ಏಳ್ಗೆ ಸಾಧ್ಯವಾಗಿದೆ ಎಂದ ಅವರು, ಮತದಾರರು ಸೇವಕರಲ್ಲ ಮಾಲಕರಾಗಿದ್ದಾರೆ. ಅವರ ಬೇಡಿಕೆ ಈಡೇರಿಸುವುದು ಜನಪ್ರತಿನಿಧಿಯಾದವನ ಕರ್ತವ್ಯವಾಗಿದೆ. ಜಾತಿ, ಧರ್ಮದ ಆಧಾರದಲ್ಲಿ ನಾವು ರಾಜಕಾರಣ ಮಾಡುವುದಿಲ್ಲ. ಅಭಿವೃದ್ಧಿಯ ಮಾನದಂಡದಲ್ಲಿ ರಾಜಕಾರಣ ಮಾಡುತ್ತೇವೆ. ಹಾಗಾಗಿ ಜನರು ಕಾಂಗ್ರೆಸ್‌ ಬೆಂಬಲಿಸಿ ಅಭಿವೃದ್ಧಿ ಸಾಧಿಸಬೇಕು ಎಂದರು.
ಈ ವೇಳೆ ತಾಲೂಕಾ ಪಂಚಾಯ್ತಿ ಅಧ್ಯಕ್ಷೆ ಶ್ರೀಲತಾ ಕಾಳೇರಮನೆ, ಅಂಡಗಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ದೇವರಾಜ ನಾಯ್ಕ, ಜಿಲ್ಲಾ ಪಂಚಾಯ್ತಿ ಸದಸ್ಯ ಬಸವರಾಜ, ರೂಪಾ ನಾಯ್ಕ, ತಾಲೂಕು ಪಂಚಾಯ್ತಿ ಸದಸ್ಯರಾದ ಪ್ರೇಮಾ ಬೇಡರ್‌, ರತ್ನಾ ಶೆಟ್ಟಿ, ಬನವಾಸಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ದ್ಯಾಮಣ್ಣ ದೊಡ್ಮನಿ, ಪ್ರಮುಖರಾದ ಸಿ.ಎಫ್‌.ನಾಯ್ಕ, ಸಿ.ಬಿ.ಗೌಡ, ಬಸಣ್ಣ ಕುಪ್ಪಗಡ್ಡೆ, ಅಧಿಕಾರಿಗಳಾದ ರಾಮಚಂದ್ರ ಗಾಂವಕರ್‌ ಹಾಗೂ ಇತರರು ಇದ್ದರು.

loading...