ಗ್ರಾಮೀಣರಿಗೆ ಸರ್ಕಾರಿ ಆಸ್ಪತ್ರೆ ಆಶಾಕಿರಣ: ಶಾಸಕ ಬಂಡಿ

0
27

ಕನ್ನಡಮ್ಮ ಸುದ್ದಿ-ಗಜೇಂದ್ರಗಡ: ಗ್ರಾಮೀಣ ರೋಗಿಗಳ ಬಾಳಿಗೆ ಸರ್ಕಾರಿ ಆಸ್ಪತ್ರೆ ಆಶಾಕಿರಣವಾಗಿರಬೇಕು. ವೈದ್ಯರ ಮತ್ತು ರೋಗಿಗಳ ಬಾಂಧವ್ಯ ಉತ್ತಮವಾಗಿರಬೇಕು. ರೋಗಿಗಳೊಂದಿಗೆ ವಾತ್ಸಲ್ಯದಿಂದ ಮತ್ತು ಸಂಯಮದಿಂದ ವರ್ತಿಸುವ ಮೂಲಕ ಉತ್ತಮ ಸೇವೆಯನ್ನು ನೀಡಲು ಮುಂದಾಗಿ. ಆಸ್ಪತ್ರೆ ಹಾಗೂ ನಿಮ್ಮ ಸಮಸ್ಯೆಗಳಿಗೂ ಸಹ ತಾಲೂಕಾಡಳಿತ ಸಕಾರಾತ್ಮಕ ಹಾಗೂ ತ್ವರಿತಗತಿಯಲ್ಲಿ ಸ್ಪಂದಿಸಲಿದೆ ಎಂದು ಶಾಸಕ ಕಳಕಪ್ಪ ಬಂಡಿ ವೈದ್ಯರಿಗೆ ಸಲಹೆ ನೀಡಿದರು.

ಪಟ್ಟಣದ ರೋಣ ರಸ್ತೆಯ ಸರ್ಕಾರಿ ಆಸ್ಪತ್ರೆಯ ತಾಲೂಕಾ ಹಾಗೂ ಸ್ಥಳೀಯ ವೈದ್ಯಾಧಿಕಾರಿಗಳೊಂದಿಗೆ ಶುಕ್ರವಾರ ನಡೆದ ಔಪಚಾರಿಕ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಸಮಾಜದಲ್ಲಿನ ಜನತೆಯ ಪಾಲಿಗೆ ನೀವು ಕಾಣುವ ದೇವರಾಗಿದ್ದೀರಿ. ಅಲ್ಲದೆ ವೈದ್ಯರಾಗುವ ಭಾಗ್ಯ ಎಲ್ಲರಿಗೂ ಬರುವದಿಲ್ಲ. ಹೀಗಾಗಿ ಅಪಘಾತ ಹಾಗೂ ರೋಗದಿಂದ ಬಳಲುತ್ತಿರುವ ಜನರು ಆಸ್ಪತ್ರೆಗೆ ಬಂದ ತಕ್ಷಣ ಚಿಕಿತ್ಸೆ ದೊರೆಯಬೇಕು ಎಂದು ಸಹಜವಾಗಿ ಬಯಸುತ್ತಾರೆ. ಆದರೆ ಅವರಿಗೆ ನಿಮ್ಮ ಕೆಲಸದ ಒತ್ತಡದ ಬಗ್ಗೆ ತಿಳಿದಿರುವುದಿಲ್ಲ. ಹೀಗಾಗಿ ನೀವು ಶಾಂತ ರೀತಿಯಲ್ಲಿ ಸ್ಪಂದಿಸುವ ಮೂಲಕ ಅವರಿಗೆ ಚಿಕಿತ್ಸೆ ನೀಡಲು ಮುಂದಾದಾಗ ಮಾತ್ರ ರೋಗಿಗಳು ಮಾನಸಿಕವಾಗಿ ಹಾಗೂ ದೈಹಿಕವಾಗಿ ಗುಣಮುಖರಾಗಲು ಸಾಧ್ಯವಿದೆ ಎಂದರು.

ಸ್ಥಳೀಯ ಕೆಲ ವೈದ್ಯಾಧಿಕಾರಿಗಳು ಆಸ್ಪತ್ರೆಯಲ್ಲಿರುವ ವೈದ್ಯರು, ಸಿಬ್ಬಂದಿ ಹಾಗೂ ಯಂತ್ರೋಪಕರಣದ ತೊಂದರೆ ಕುರಿತು ಶಾಸಕರ ಗಮನ ಸೆಳೆದ ಅವರು, ಕೆಲ ಸಂಘಟನೆಗಳು ಆಸ್ಪತ್ರೆಯಲ್ಲಿನ ಮೂಲಸೌಲಭ್ಯ ಕೊರತೆ ಮುಂದಿಟ್ಟುಕೊಂಡು ಇಲ್ಲಸಲ್ಲದ ಆರೋಪಗಳನ್ನು ಮಾಡುವ ಮೂಲಕ ಸಮರ್ಪಕವಾಗಿ ಕೆಲಸ ನಿರ್ವಹಿಸಲು ಬೀಡುತ್ತಿಲ್ಲ. ಪರಿಣಾಮ ಮಾನಸಿಕ ಕಿರಿಕಿರಿಯುಂಟಾಗುತ್ತಿದೆ ಎಂದು ಅಳಲು ತೋಡಿಕೊಂಡರು.
ವೈದ್ಯರ ಸಮಸ್ಯೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಶಾಸಕ ಕಳಕಪ್ಪ ಬಂಡಿ, ಆಸ್ಪತ್ರೆಗೆ ಬೇಕಾಗಿರುವ ಸಿಬ್ಬಂದಿ ಕೊರತೆ ನಿಗಿಸಲು ಜಿಲ್ಲಾ ವೈದ್ಯಾಧಿಕಾರಿಗಳೊಂದಿಗೆ ಚರ್ಚಿಸುತ್ತೇನೆ ಜೊತೆಗೆ ಆಸ್ಪತ್ರೆಗೆ ಬೇಕಿರುವ ಯಂತ್ರೋಪಕರಣಗಳ ಪಟ್ಟಿಯನ್ನು ನನಗೆ ನೀಡಿ ಶಾಸಕರ ನಿಧಿಯಿಂದ ಹಾಗೂ ಸರ್ಕಾರದ ಅನುದಾನದಿಂದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗುವುದು. ಅಲ್ಲದೆ ಕರ್ತವ್ಯಕ್ಕೆ ಅಡ್ಡಿ ಪಡಿಸುವ ಯಾವುದೇ ಸಂಘಟನೆ ಇದ್ದರೂ ಕ್ರೀಮಿನಲ್ ದಾವೆ ಹೂಡಿ ಅವರ ವಿರುದ್ಧ ಕೈಗೊಳ್ಳಬಹುದಾದ ಕಾನೂನಿನ ಕ್ರಮಗಳ ಕುರಿತು ತಿಂಗಳಾಂತ್ಯದಲ್ಲಿ ಮತ್ತೊಮ್ಮೆ ಆಸ್ಪತ್ರೆಯಲ್ಲಿಯೇ ಪಿಎಸ್‍ಐ ಹಾಗೂ ಸಿಪಿಐ ಸಮ್ಮುಖದಲ್ಲಿ ಸಭೆ ನಡೆಸಿ ನಿಮಗೆ ಕಾನೂನಿ ನೆರವು ನೀಡಿಸುತ್ತೇನೆ ಎಂದು ಭರವಸೆ ನೀಡಿದರು.

ಈ ವೇಳೆ ತಾಲೂಕಾ ವೈದ್ಯಾಧಿಕಾರಿ ಎಂ.ಬಿ.ಪಾಟೀಲ, ಜಿಲ್ಲಾ ಪಂಚಾಯ್ತಿ ಸದಸ್ಯ ಪಡಿಯಪ್ಪ ಪೂಜಾರ, ಪುರಸಭೆ ಸದಸ್ಯರಾದ ಚಂದ್ರು ಚಳಗೇರಿ, ಕಳಕಪ್ಪ ಗುಳೇದ, ವೈದ್ಯಾಧಿಕಾರಿಗಳಾದ ಸಂಗಮೇಶ ಬಂಕದ, ಮಹೇಶ ಚೋಳಿನ, ರಿಯಾಜ ನಿರಲಗಿ, ಪ್ರಶಾಂತ ಮಲ್ಲಾಪೂರ ಸಿಬ್ಬಂದಿಗಳಾದ ಕೆ.ಎ ಹಾದಿಮನಿ, ಅಶೋಕ ಕೋಳಿವಾಡ, ದೇವೆಂದ್ರಪ್ಪ ಬಡಿಗೇರ, ಮುಖಂಡರಾದ ಕನಕಪ್ಪ ಅರಳಿಗಿಡದ, ಮುತ್ತು ಕಡಗದ, ಈಶ್ವರ ರಾಠೋಡ ಸೇರಿ ಇತರರು ಇದ್ದರು.

loading...