ಗ್ರಾಮೀಣ ಕ್ಷೇತ್ರದ ಕ್ರೀಡಾಪಟುಗಳಿಗೆ ಸೂಕ್ತ ತರಬೇತಿ ಅವಶ್ಯ: ಕುಂಬಾರ

0
21

ಕನ್ನಡಮ್ಮ ಸುದ್ದಿ-ನರೇಗಲ್ಲ: ಕ್ರೀಡಾ ಪಟುವಿಗೆ ದೈಹಿಕ ಸಾಮರ್ಥ್ಯದಷ್ಟೇ ಮಾನಸಿಕ ಸಾಮರ್ಥ್ಯವೂ ಮುಖ್ಯ. ಭಾರತದಲ್ಲಿ ಕ್ರೀಡಾ ಕ್ಷೇತ್ರವನ್ನು ಹೆಚ್ಚು ಅಭಿವೃದ್ಧಿ ಪಡಿಸಬೇಕಿದೆ. ಗ್ರಾಮಾಂತರ ಭಾಗದಲ್ಲಿರುವ ಅನೇಕ ಕ್ರೀಡಾಪಟುಗಳಿಗೆ ಅಗತ್ಯ ತರಬೇತಿ ಸೌಲಭ್ಯಗಳಿಲ್ಲದೆ ಹಿಂದೆ ಉಳಿಯುತ್ತಿದ್ದಾರೆ ಎಂದು ದೈಹಿಕ ಶಿಕ್ಷಕ ವಿ.ಎ. ಕುಂಬಾರ ಹೇಳಿದರು.
ಪಟ್ಟಣದ ಈಶ್ವರಿ ವಿಶ್ವವಿದ್ಯಾಲಯದಲ್ಲಿ ಜರುಗಿದ ಮೇಜರ್‌ ಧ್ಯಾನಚಂದ ಅವರ ಜನ್ಮ ದಿನದ ನಿಮಿತ್ತ ವಿಶ್ವ ಕ್ರೀಡಾ ದಿನಾಚರಣೆಯಲ್ಲಿ ಮಾತನಾಡಿದ ಅವರು, ಧ್ಯಾನಚಂದ ಅಪ್ಪಟ ದೇಶಭಕ್ತ, ಅಪ್ರತಿಮ ಹಾಕಿ ಆಟಗಾರ, ಸ್ವಾತಂತ್ರ್ಯ ಬರುವುದಕ್ಕಿಂತ ಮುಂಚೆಯೇ ಭಾರತಕ್ಕೆ ಒಲಿಂಪಿಕ್ಸ್‌ನಲ್ಲಿ ಮೂರು ಬಾರಿ ಗೋಲ್ಡ್‌ ಮೆಡಲ್‌ಗಳನ್ನು ತಂದು ಕೊಟ್ಟ ದೇಶದ ಹೆಮ್ಮೆಯ ಪುತ್ರ. ಕ್ರೀಡೆಗಳಲ್ಲಿ ಅತಿ ಹೆಚ್ಚಿನ ಆಸಕ್ತಿ ತೋರುತ್ತಿದ್ದ ಧ್ಯಾನಚಂದ, ಕುಸ್ತಿಯಲ್ಲಿಯಾವಾಗಲೂ ಮಗ್ನರಾಗಿರುತ್ತಿದ್ದರು. ಕ್ರೀಡೆ ಕೇವಲ ದೈಹಿಕ ಕಸರತ್ತಿಗಾಗಿ ಅಲ್ಲದೆ ವಿದ್ಯಾರ್ಥಿ ಜೀವನದಲ್ಲಿ ಮೈಲುಗಲ್ಲಾಗಬಹುದು. ಉತ್ತಮ ಕ್ರೀಡಾಪಟುಗಳನ್ನು ಸರ್ಕಾರವೇ ಗುರುತಿಸಿ ಕ್ರೀಡೆಯಲ್ಲಿ ಸಾಧನೆ ಮೆರದವರಿಗೆ ಸರ್ಕಾರಿ ನೌಕರಿಗಳನ್ನು ಒದಗಿಸಬೇಕು. ಇಂದಿನ ವಿದ್ಯಾರ್ಥಿಗಳು ಕ್ರೀಡೆಗೆ ಹೆಚ್ಚಿನ ಆಸಕ್ತಿ ತೋರುವುದರಿಂದ ಸರ್ವತೋಮುಖ ಅಭಿವೃದ್ಧಿ ಸಾಧಿಸಬಹುದು ಎಂದರು.
ದೈಹಿಕ ಶಿಕ್ಷಕ ಆರ್‌.ಎಸ್‌. ನರೇಗಲ್ಲ ಮಾತನಾಡಿ, ವಿಶ್ವ ಕ್ರೀಡಾ ಇತಿಹಾಸದಲ್ಲಿ ಅವಿಸ್ಮರಣೀಯವಾಗಿರುವ ಧ್ಯಾನಚಂದ ಅವರು ಭಾರತದಲ್ಲಷ್ಟೇ ಅಲ್ಲ ಪ್ರಂಪಚದಲ್ಲಿಯೇ ಅತ್ಯಂತ ಶ್ರೇಷ್ಟ ಹಾಕಿ ಪಟು ಎಂಬ ಗೌರವಕ್ಕೆ ಪಾತ್ರವಾಗಿದ್ದಾರೆ. ಇಂದಿನವರೆಗೂ ಧ್ಯಾನಚಂದ ಸರಿಗಟ್ಟುವ ಆಟಗಾರನೂ ಇಲ್ಲ ಎಂಬುದು ಸತ್ಯ ಸಂಗತಿ. ಜರ್ಮನಿಯ ಸರ್ವಾಧಿಕಾರಿ ಹಿಟ್ಲರ್‌ ಅವರನ್ನು ಬೆರಗುಗೊಳಿಸಿದ ಕ್ರೀಡಾ ಮಾಂತ್ರಿಕ ಧ್ಯಾನಚಂದ ಅವರನ್ನು ಅಕ್ಕರೆಯಿಂದ ದಾದಾ ಎಂದು ಕರೆಯಲಾಗುತ್ತಿತ್ತು. 1905 ಅಗಸ್ಟ್‌ 29 ರಂದು ಅಲಹಾಬಾದ್‌ನಲ್ಲಿ ಹುಟ್ಟಿ ಬೆಳೆದ ಧ್ಯಾನಚಂದ 1928,1932 ಹಾಗೂ 1936ರಲ್ಲಿ ಒಲಿಂಪಿಕ್‌ ಚಿನ್ನದ ಪದಕ ಗೆಲ್ಲಲು ನೆರವಾಗಿದ್ದರು. ಅವರ ಕಾಲಘಟ್ಟದಲ್ಲಿ ಹಾಕಿ ಕ್ರೀಡೆಯಲ್ಲಿ ಭಾರತ ಅಕ್ಷರಶಃ ಅಧಿಪತ್ಯವನ್ನು ಸ್ಥಾಪಿಸಿತ್ತು ಎಂದರು.
1948ರಲ್ಲಿ ಕೊನೆಯ ಅಂತಾರಾಷ್ಟ್ರೀಯ ಹಾಕಿ ಪಂದ್ಯವನ್ನಾಡಿರುವ ಧ್ಯಾನಚಂದ ದಾಖಲೆಯ 400ಕ್ಕೂ ಹೆಚ್ಚು ಗೋಲುಗಳನ್ನು ಬಾರಿಸಿದ್ದಾರೆ. ಹಾಗೆಯೇ 1956ರಲ್ಲಿ ಭಾರತ ಸರ್ಕಾರವು ಮೂರನೇ ಅತಿ ದೊಡ್ಡ ನಾಗರಿಕ ಪ್ರಶಸ್ತಿ ಪದ್ಮ ಭೂಷಣ ನೀಡಿ ಗೌರವಿಸಿತ್ತು. 1979 ಡಿಸೆಂಬರ್‌ 3ರಂದು ಇಹಲೋಕಕ್ಕೆ ಧ್ಯಾನಚಂದ ತ್ಯಜಿಸಿದರು ಎಂದರು.
ಜಕ್ಕಲಿ, ಯಲಬುರ್ಗಾ, ಬೂದಿಹಾಳ, ತೋಟಗಂಟಿ, ಕೋಡಿಕೊಪ್ಪ ಹಾಗೂ ನರೇಗಲ್ಲ ಪಟ್ಟಣದಿಂದ ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾ ಪಟುಗಳಿಗೆ ಹಾಗೂ ತರಬೇತಿದಾರರಿಗೆ ಸನ್ಮಾನಿಸಲಾಯಿತು. ದೈಹಿಕ ಶಿಕ್ಷಕ ಕೆ.ಸಿ. ಜೋಗಿ, ಬ್ರಹ್ಮ ಕುಮಾರಿ ಸವಿತಾಕ್ಕ, ಮುಖ್ಯಶಿಕ್ಷಕಿ ಭಾರತಿ ಶಿರ್ಸಿ, ಎ.ವೈ. ರೋಟಿ ಸೇರಿದಂತೆ ಕ್ರೀಡಾಪಟುಗಳು ಉಪಸ್ಥಿತರಿದ್ದರು.

loading...