ಚಂಡಿ ವಾದ್ಯ ಮೇಳದೊಂದಿಗೆ ಗಣಪತಿ ವಿಸರ್ಜನೆ

0
19

ಕನ್ನಡಮ್ಮ ಸುದ್ದಿ-ಮುಂಡಗೋಡ: ಸಾಂಸ್ಕøತಿಕ ಗಜಾನನೋತ್ಸವಕೆ ಹೆಸರಾಗಿರುವ ಪಟ್ಟಣದ ದೈವಜ್ಞ ಸಮಾಜದ ಗಜಾನನೋತ್ಸವ 25 ವರ್ಷ ಪೂರೈಸಿದ್ದು, ರಜತ ಮಹೋತ್ಸವವನ್ನು ಸಾಂಪ್ರದಾಯಿಕವಾಗಿ ಭಾರಿ ವಿಜೃಂಬಣೆಯಿಂದ ಆಚರಿಸಲಾಯಿತು. ಡಿಜೆ ಮುಂತಾದ ಆಡಂಬರಕ್ಕೆ ಮಾರು ಹೋಗುತ್ತಿರುವ ಇಂದಿನ ಆಧುನಿಕ ಯುಗದಲ್ಲಿ ಇದಕ್ಕೆ ಪ್ರತಿಯಾಗಿ ಸಂಪ್ರದಾಯ ಹಾಗೂ ಸಂಸ್ಕøತಿ ಎತ್ತಿ ತೋರುವ ರೀತಿಯಲ್ಲಿ ಚಂಡಿ ವಾದ್ಯ ಮೇಳದೊಂದಿಗೆ ಗಣಪತಿ ಮೂರ್ತಿ ಮೆರವಣಿಗೆಯೊಂದಿಗೆ ವಿಸರ್ಜನಾ ಕಾರ್ಯ ಪೂರ್ಣಗೊಳಿಸಿದ ಮುಂಡಗೋಡ ದೈವಜ್ಞ ಯುವಕ ಮಂಡಳದವರು ಇತರರಿಗೆ ಮಾದರಿಯಾದರು. ಪಟ್ಟಣದ ದೈವಜ್ಞ ಸಭಾ ಭವನದಲ್ಲಿ 25 ವರ್ಷಗಳಿಂದ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುತ್ತಿದೆ.

9 ದಿನಗಳ ಕಾಲ ಪ್ರತಿಭಾ ಪುರಸ್ಕಾರ, ರಂಗೋಲಿ ಸ್ಪರ್ಧೆ, ಸಾಂಸ್ಕøತಿಕ ಕಾರ್ಯಕ್ರಮ, ಸನ್ಮಾನ ಸೇರಿದಂತೆ ಹಲವು ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತ ಬಂದಿರುವ ದೈವಜ್ಞ ಯುವಕ ಮಂಡಳದವರು ನಮ್ಮ ಸಂಸ್ಕøತಿಯಂತೆ ವಿಶೇಷವಾದ ಚಂಡಿ ವಾದ್ಯ ಮೇಳ ಮೆರವಣಿಗೆ ನಡೆಸಿರುವುದು ಸಾರ್ವಜನಿಕರ ಪ್ರಶಂಸೆಗೆ ಕಾರಣವಾಗಿದ್ದು, ಪ್ರಜ್ಞಾವಂತರ ಮೆಚ್ಚುಗೆಗೆ ಪಾತ್ರವಾಗಿದೆ. ಸಂಜೆ 6 ಘಂಟೆಗೆ ದೈವಜ್ಞ ಸಭಾ ಭವನದಿಂದ ಪೂಜೆ ದಾರ್ಮಿಕ ವಿಧಿ ವಿಧಾನ ಮುಗಿಸಿಕೊಡು ಹೊರಟ ವಿಸರ್ಜನಾ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳ ಮೂಲಕ ಸುಮಾರು ನಾಲ್ಕು ಘಂಟೆಗಳ ಕಾಲ ಸಂಚರಿಸಿತು. ಈ ಚಂಡಿ ವಾದ್ಯ ಮೆರವಣಿಗೆ ಪಟ್ಟಣದಲ್ಲಿ ಯಾವುದೋ ದೇವರ ಪಲ್ಲಕ್ಕಿ ಉತ್ಸವ ಸಂಚರಿಸುತ್ತಿದೆ ಎಂಬಂತೆ ಬಾಸವಾಗುತ್ತಿತ್ತು. ಮೆರವಣಿಗೆ ಸಂಚರಿಸಿದ ಪ್ರತಿಯೊಂದು ಬಡಾವಣೆಯ ರಸ್ತೆಯುದ್ದಕ್ಕೂ ಭಕ್ತಿ ಭಾವನೆ ಮೂಡಿಸಿತು. ಗಣಪತಿ ವಿಸರ್ಜನೆ ಮೆರವಣಿಗೆ ಎಂದರೆ ರಿಮೇಕ್ ಮನೋರಂಜನಾ ಗೀತೆ ಹಾಕಿ ಕುಣಿದು ಕುಪ್ಪಳಿಸುವುದಕ್ಕೆ ಮಾತ್ರ ಸೀಮಿತ ಎಂಬಂತಾಗಿರುವ ಈ ದಿನಗಳಲ್ಲಿ ಈ ಗಣಪತಿ ವಿಸರ್ಜನೆ ಆಕರ್ಷಣಿಯವಾಗಿತ್ತು. ವಿಶೇಷವಾದ ಮೆರವಣಿಗೆ ವೀಕ್ಷಿಸಲು ಜನರ ದಂಡೇ ನೆರೆದಿತ್ತು. ಆಕರ್ಷಣೀಯ ಗಣಪ: ರಜತ ಮಹೋತ್ಸವದ ಅಂಗವಾಗಿ ಈ ಬಾರಿ ದೈವಜ್ಞ ಬ್ರಾಹ್ಮಣರ ಕುಲಕಸುಬು ಸುವರ್ಣಕಾರ ಚಿನ್ನಬೆಳ್ಳಿ ಕೆಲಸ ಮಾಡುವ ಕಲಾಕೃತಿಯ ದಗಡು ಶೇಟ್ ಗಣಪತಿ ಮೂರ್ತಿಯನ್ನು ಈ ಬಾರಿ ಪ್ರತಿಷ್ಠಾಪಿಸಲಾಗಿತ್ತು. ಇದು ಕೂಡ ನೋಡುಗರ ಗಮನ ಸೆಳೆಯಿತು.
ಸಂಪ್ರದಾಯದ ಮೆರವಣಿಗೆ: ಗಣಪತಿ ವಿಸರ್ಜನೆ ಮೆರವಣಿಗೆ ಎಂದರೆ ಸಾಮಾನ್ಯವಾಗಿ ಕುಣಿದು ಕುಪ್ಪಳಿಸುವುದು ಎಂಬ ಭಾವನೆ ಕೆಲವರಲ್ಲಿ ಇದೆ. ಅಂತಹದರಲ್ಲಿ ಮೆರವಣಿಗೆಯಲ್ಲಿ ನೂರಕ್ಕೂ ಅಧಿಕ ಮಹಿಳೆಯರು ಹಾಗೂ ವೃದ್ದರು ಪಾಲ್ಗೊಂಡಿದ್ದು, ವಿಶೇಷವಾಗಿದ್ದು, ಇದೇ ವಾತಾವರಣ ಸೃಷ್ಟಿಯಾದರೆ ಮುಂದೆ ನಾವು ಕೂಡ ಮೆರವಣಿಗೆಯಲ್ಲಿ ಭಾಗವಹಿಸಬಹುದೆಂಬ ಭಾವನೆ ಇತರೇ ಮಹಿಳೆಯರಲ್ಲಿ ಕೂಡ ಮೂಡಿಸಿತು ಈ ಮೆರವಣಿಗೆ.

ಚಂಡಿ ವಾದ್ಯ ವಿಶೇಷ: ಭಟ್ಕಳದ ಸುಮಾರು 15 ಜನರನ್ನು ಒಳಗೊಂಡಿರುವ ಚಂಡಿ ವಾದ್ಯ ತಂಡದಲ್ಲಿ ಪ್ರತಿಯೊಬ್ಬರು ಬಿಳಿ ಪಂಚೆ, ಕೆಂಪು ದಸೋರಿ, ಕೇಸರಿ ಶಲ್ಯ ಸೇರಿದಂತೆ ವಿವಿದ ಧಾರ್ಮಿಕ ಭಾವನೆ ಮೂಡಿಸುವ ವಸ್ತ್ರ ದರಿಸಿ ಮೆರವಣಿಗೆಯಲ್ಲಿ ಮಾರ್ಗದುದ್ದಕ್ಕೂ ನಿರಂತರ ಡೊಳ್ಳು, ತಮಟೆ, ಶಹನಾಯ ಸೇರಿದಂತೆ ವಿವಿದ ವಾದ್ಯ ನುಡಿಸಿದರು. ಇದರಿಂದ ಚಂಡಿ ವಾದ್ಯದ ಬಗ್ಗೆ ಪಟ್ಟಣದಲ್ಲಿ ಪರಿಚಯ ಮಾಡಿಕೊಟ್ಟಂತಾಗಿದ್ದು, ಸುಮ್ಮನೆ ಲಕ್ಷಾಂತರ ರೂಪಾಯಿ ವ್ಯಯಿಸಿ ಡಿ.ಜೆ ತರುವುದಕ್ಕಿಂತ ಮುಂದಿನ ದಿನಗಳಲ್ಲಿ ಚಂಡಿ ವಾದ್ಯ ತಂಡವನ್ನು ನಾವು ಕರೆಸಬೇಕೆಂಬ ಮಾತು ಹಲವರಿಂದ ಕೇಳಿಬರುತ್ತಿದೆ. ಒಟ್ಟಾರೆ ಪಾಶ್ಚಿಮಾತ್ಯದ ಕಡೆಗೆ ವಾಲುತ್ತಿರುವ ಯುವ ಸಮೂಹಕ್ಕೆ ಇದು ಮಾದರಿಯಾದರೆ ಸಾಕು ಎನ್ನುತ್ತಿದ್ದಾರೆ ಪ್ರಜ್ಞಾವಂತ ನಾಗರೀಕರು.
——

ಹೇಳಿಕೆ: ಗಜಾನನೋತ್ಸವ ಮೆರವಣಿಗೆ ಕುಣಿದು ಕುಪ್ಪಳಿಸುವವರಿಗೆ ಮಾತ್ರ ಎಂಬ ಭಾವನೆ ಬರಬಾರದು. ಹೊರತಾಗಿ ಪುರುಷರು, ವೃದ್ದರು ಮಹಿಳೆಯರು ಸೇರಿದಂತೆ ಪ್ರತಿಯೊಬ್ಬರು ಸಮಾನಭಾವ ಭಕ್ತಿಯಿಂದ ಮೆರವಣಿಗೆಯಲ್ಲಿ ಪಾಲ್ಗೊಳ್ಳಬೇಕೆಂಬ ಉದ್ದೇಶದಿಂದ ಸಂಪ್ರದಾಯವಾದ ಚಂಡಿ ವಾದ್ಯ ಮೇಳವನ್ನು ಕರೆಸಲಾಗಿತ್ತು. ಇದರಿಂದ ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡಬಹುದು. —
ಶ್ರೀನಿವಾಸ ಅರ್ಜುನ ದೈವಜ್ಞ, ದೈವಜ್ಞ ಯುವಕ ಮಂಡಳ ಅಧ್ಯಕ್ಷರು

loading...