ಚತುಷ್ಪದ ರಸ್ತೆ ಕಾಮಗಾರಿಗೆ ಶಾಲಾ ಕಂಪೌಂಡ ಬಲಿ

0
31

ಕನ್ನಡಮ್ಮ ಸುದ್ದಿ-ಕುಮಟಾ: ಚತುಷ್ಪದ ರಸ್ತೆ ಕಾಮಗಾರಿ ನಡೆಸುವ ಸಂದರ್ಭದಲ್ಲಿ ಐ ಆರ್‌ ಬಿ ಕಂಪನಿಯವರು ತಾಲೂಕಿನ ಮಿರ್ಜಾನ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಾಧ್ಯಾಪಕ ಹಾಗೂ ಶಿಕ್ಷಣಾಧಿಕಾರಿಗಳ ಗಮನಕ್ಕೆ ತಾರದೆ ಏಕಾಏಕಿ ಶಾಲೆಯ ಕಂಪೌಂಡ ಕೆಡವಿ ರಸ್ತೆ ಕಾಮಗಾರಿಗೆ ಆರಂಭಿಸಿ 4 ತಿಂಗಳು ಉರುಳಿದರೂ ಐ ಆರ್‌ ಬಿ ಕಂಪನಿಯವರು ಶಾಲೆಗೆ ಇನ್ನೂ ಕಂಪೌಂಡ ನಿರ್ಮಿಸದೇ ಇರುವುದರಿಂದ ಐ ಆರ್‌ ಬಿ ಕಂಪನಿ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಲ್ಲಿನ ರಾಷ್ಟ್ರೀಯ ಹೆದ್ದಾರಿ 66ರ ಪಕ್ಕದಲ್ಲೇ ಹಿರಿಯ ಪ್ರಾಥಮಿಕ ಶಾಲೆಯಿದೆ. ಶಾಲೆಯ ಕಂಪೌಂಡ ಕೆಡವುವ ಮುನ್ನ ಐಆರ್‌ಬಿ ಕಂಪನಿಯವರು ಒಂದೇ ತಿಂಗಳಲ್ಲಿ ನೂತನ ಕಂಪೌಂಡ, ಗೇಟ್‌ ಹಾಗೂ ಶಾಲಾ ನಾಮಪಲಕವನ್ನು ನಿರ್ಮಿಸಿಕೊಡುವ ಭರವಸೆ ನೀಡಿದ್ದರು. ಒಂದೂ ತಿಂಗಳಾದರೂ ಭರವಸೆ ಈಡೇರದಾಗ, ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷರು ಹಾಗೂ ಸದಸ್ಯರು ಹಿಂದಿನ ಉಪವಿಭಾಗಾಧಿಕಾರಿ ಲಕ್ಷ್ಮೀಪ್ರಿಯಾರಿಗೆ ಅರ್ಜಿ ಸಲ್ಲಿಸಿ ಮನವಿ ಮಾಡಿಕೊಂಡಿದ್ದರು. ಆದರೂ ಅದು ಕಾರ್ಯರೂಪಕ್ಕೆ ಬಂದಿಲ್ಲ ಎನ್ನಲಾಗಿದೆ.
ಈಗ ಕೆಡವಿದ್ದ ಕಂಪೌಂಡನ ಕಲ್ಲುಗಳನ್ನೆ ಒಂದೊರಮೇಲೊಂದಿಟ್ಟು ಸಾಲಾಗಿ ಜೋಡಿಸಿಡಲಾಗಿದೆ. ಆದಾಗ್ಯೂ ದನಕರುಗಳು ಶಾಲಾ ಆವರಣದೊಳಗೆ ನುಗ್ಗಿ, ಹೂ ಹಣ್ಣುಗಳ ಗಿಡಗಳನ್ನು ಕೆಡವಿ ಹಾಕುತ್ತಿವೆ. ದಾರಿ ಹೋಕರಿಗೂ ಶಾಲೆ ಆಶ್ರಯ ತಾಣವಾಗಿ ಮಾರ್ಪಟ್ಟಿದೆ. ಶಾಲೆಗೆ ಕಂಪೌಂಡ ಇಲ್ಲದಿರುವುದರಿಂದ ಶಾಲೆಯ ಅಂದ ಕೆಟ್ಟು ಹೋಗಿದೆ. ಈ ಕುರಿತಂತೆ ಶಾಲೆಗೆ ನೂತನ ಕಂಪೌಂಡ ಸುಂದರ ಗೇಟ್‌ ಜೊತೆಗೆ ಶಾಲಾ ನಾಮಫಲಕ ಶೀಘ್ರದಲ್ಲೇ ನಿರ್ಮಿಸಿ ಕೊಡುವಂತೆ ಕಳೆದ ವಾರದ ಹಿಂದೆ ನೂತನ ಉಪವಿಭಾಗಾಧಿಕಾರಿ ಪ್ರೀತಿ ಗೆಹ್ಲೋಟ್‌ ರವರಿಗೆ ಶಾಲಾ ಸಮಿತಿ ಪುನಃ ಅರ್ಜಿ ಸಲ್ಲಿಸಿ ಮನವಿ ಮಾಡಿಕೊಂಡಿದೆ.
ಶಾಲಾ ಸಮಿತಿಯ ಮನವಿಗೆ ಸ್ಪಂಧಿಸಿ ತಕ್ಷಣ ಕಂಪೌಂಡ ಗೇಟ್‌ ನಾಮಪಲಕ ನಿರ್ಮಿಸಿಕೊಡಲು ಐಆರ್‌ಬಿ ಕಂಪನಿಯವರಿಗೆ ಆದೇಶಿಸಬೇಕಿದೆ. ಇಲ್ಲದಿದ್ದರೆ ಚತುಷ್ಪದ ರಸ್ತೆ ಕಾಮಗಾರಿ ಮುಗಿದ ಮೇಲೆ ಶಾಲಾ ಕಂಪೌಂಡ ಕಾಮಗಾರಿ ಮರಿಚೀಕೆಯಾದೀತು ಎಂಬುತು ಪ್ರಜ್ಞಾವಂತರ ಆಡಿಕೊಳ್ಳುತ್ತಿದ್ದಾರೆ.

loading...