ಚಾಂಪಿಯನ್ಸ್‌ ಲೀಗ್‌: ನಾಲ್ಕು ವರ್ಷಗಳ ಬಳಿಕ ಸೆಮಿಫೈನಲ್ ತಲುಪಿದ ಬಾರ್ಸಿಲೋನಾ

0
5

ಬಾರ್ಸಿಲೋನಾ:- ವಿಶ್ವ ಸ್ಟಾರ್‌ ಆಟಗಾರ ಲಿಯೊನೆಲ್‌ ಮೆಸ್ಸಿ ಗಳಿಸಿದ ಎರಡು ಗೋಲುಗಳ ನೆರವಿನಿಂದ ಬಾರ್ಸಿಲೋನಾ ತಂಡ, ಚಾಂಪಿಯನ್ಸ್‌ ಲೀಗ್‌ ಕ್ವಾರ್ಟರ್‌ ಫೈನಲ್‌ನಲ್ಲಿ ಮ್ಯಾಂಚೆಸ್ಟರ್‌ ಯುನೈಟೆಡ್‌ ವಿರುದ್ಧ ಜಯ ಸಾಧಿಸಿ ಸೆಮಿಫೈನಲ್‌ ತಲುಪಿತು. ಇದರೊಂದಿಗೆ ಬಾರ್ಸಿಲೋನಾ ಕಳೆದ ನಾಲ್ಕು ವರ್ಷಗಳಲ್ಲಿ ಮೊದಲ ಬಾರಿ ಚಾಂಪಿಯನ್ಸ್‌ ಲೀಗ್‌ನಲ್ಲಿ ಅಂತಿಮ ನಾಲ್ಕರ ಘಟಕ್ಕೆ ಪ್ರವೇಶಿಸಿದೆ.

ಇಲ್ಲಿನ ಕ್ಯಾಂಪ್‌ ನೌ ಅಂಗಳದಲ್ಲಿ ನಡೆದ ಪಂದ್ಯದಲ್ಲಿ 16ನೇ ಹಾಗೂ 20ನೇ ನಿಮಿಷದಲ್ಲಿ ಲಿಯೊನೆಲ್‌ ಮೆಸ್ಸಿ ಹಾಗೂ 61ನೇ ನಿಮಿಷದಲ್ಲಿ ಫಿಲಿಪ್‌ ಕೌಂಟಿನ್ಹೊ ಗಳಿಸಿದ ಗೋಲುಗಳ ಸಹಾಯದಿಂದ ಬಾರ್ಸಿಲೋನಾ 3-0 ಅಂತರದಲ್ಲಿ ಮ್ಯಾಂಚೆಸ್ಟರ್‌ ಯುನೈಟೆಡ್‌ ವಿರುದ್ಧ ಗೆಲುವಿನ ತೋರಣ ಕಟ್ಟಿತು.

ಪಂದ್ಯದ ಆರಂಭದಿಂದಲೂ ಚೆಂಡಿನ ಮೇಲೆ ಉತ್ತಮ ಕಾಲ್ಚಳಕ ತೋರಿದ ಮೆಸ್ಸಿ, ಆರಂಭದಲ್ಲೇ ಬಾರ್ಸಿಲೋನಾಗೆ ಮುನ್ನಡೆ ತಂದುಕೊಟ್ಟರು. 16ನೇ ನಿಮಿಷದಲ್ಲಿ ಮೆಸ್ಸಿ ತಂಡಕ್ಕೆ ಗೋಲಿನ ಖಾತೆ ತೆರೆದರು. ಇದಾದ ಕೇವಲ ನಾಲ್ಕು ನಿಮಿಷಗಳ ಅಂತರದಲ್ಲಿ ಅರ್ಜೆಂಟೀನಾ ಆಟಗಾರ ಬಾರ್ಸಿಗೆ ಎರಡನೇ ಗೋಲು ಕೊಡುಗೆಯಾಗಿ ನೀಡಿದರು. ಇದರೊಂದಿಗೆ ಬಾರ್ಸಿಲೋನಾ ಮೊದಲ ಅವಧಿ ಮುಕ್ತಾಯಕ್ಕೆ 2-0 ಮುನ್ನಡೆ ಪಡೆಯಿತು.

ತೀವ್ರ ಒತ್ತಡದಲ್ಲಿದ್ದ ಎದುರಾಳಿ ಮ್ಯಾಂಚೆಸ್ಟರ್‌ ಯುನೈಟೆಡ್‌ ತಂಡ ಎರಡನೇ ಅವಧಿಗೆ ಗೋಲು ಗಳಿಸಲು ಸನ್ನದ್ದರಾದರು. ಆದರೆ, ಬಾರ್ಸಿಲೋನಾ ತಂಡದ ರಕ್ಷಣಾ ಕೋಟೆ ಗೋಲು ಗಳಿಸಲು ಅವಕಾಶ ನೀಡಲಿಲ್ಲ. ಚೆಂಡಿನ ಮೇಲೆ ಹಿಡಿತ ಮುಂದುವರಿಸಿದ ಬಾರ್ಸಿಲೋನಾ 61ನೇ ನಿಮಿಷದಲ್ಲಿ ಮತ್ತೊಂದು ಗೋಲು ತನ್ನ ಖಾತೆಗೆ ಸೇರಿಸಿಕೊಂಡಿತು. ಫಿಲಿಪ್‌ ಕೌಂಟನ್ಹೊ ಗಳಿಸಿದ ಗೋಲಿನ ನೆರವಿನಿಂದ ಬಾರ್ಸಿ 3-0 ಮುನ್ನಡೆ ಪಡೆಯಿತು.

ಅಂತಿಮವಾಗಿ ಬಾರ್ಸಿಲೋನಾ 3-0 ಅಂತರದಲ್ಲಿ ಜಯ ಸಾಧಿಸಿತು. ಆ ಮೂಲಕ ಕಳೆದ ನಾಲ್ಕು ವರ್ಷಗಳ ಬಳಿಕ ಬಾರ್ಸಿಲೋನಾ ಚಾಂಪಿಯನ್ಸ್‌ ಲೀಗ್‌ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿತು. ಸೋಲಿನೊಂದಿಗೆ ಮ್ಯಾಂಚೆಸ್ಟರ್‌ ಯುನೈಟೆಡ್‌ ಟೂರ್ನಿಯಿಂದ ಹೊರ ನಡೆಯಿತು.

loading...