ಚಿಕ್ಕೋಡಿಗೆ ವಕ್ಫ ಕಚೇರಿ ಮಂಜೂರಿ: ಸಂಸದ ಪ್ರಕಾಶ ಹುಕ್ಕೇರಿ

0
67

ಚಿಕ್ಕೋಡಿ 15: ಚಿಕ್ಕೋಡಿಗೆ ವಕ್ಫ ಬೋರ್ಡ್ ಕಚೇರಿ ಮಂಜೂರಾಗಿದ್ದು, ಶೀಘ್ರ ಕಾರ್ಯಾರಂಭ ಮಾಡಲಿದೆ ಎಂದು ಸಂಸದ ಪ್ರಕಾಶ ಹುಕ್ಕೇರಿ ತಿಳಿಸಿದರು.
ತಾಲೂಕಿನ ಕರೋಶಿ ಗ್ರಾಮ ವ್ಯಾಪ್ತಿಯಲ್ಲಿ ಗುರುವಾರ ಅಂಜುಮನ್ ಇಸ್ಲಾಂ ಕಮಿಟಿ ಪ್ರಾರಂಭಿಸುತ್ತಿರುವ ಸ್ವತಂತ್ರ ಪದವಿ ಪೂರ್ವ ಕಾಲೇಜು ಕಟ್ಟಡದ ಅಡಿಗಲ್ಲು ಪೂಜೆ ನೆರವೇರಿಸಿ ಅವರು ಮಾತನಾಡಿದರು. ಅಲ್ಪ ಸಂಖ್ಯಾತರಿಗಾಗಿ ಚಿಕ್ಕೋಡಿಗೆ ಶೀಘ್ರ ಡಾ. ಎ.ಪಿ.ಜೆ ಅಬ್ದುಲಕಲಾಂ ವಸತಿ ಶಾಲೆಯನ್ನು ಮಂಜೂರು ಮಾಡಿಸಲಾಗುತ್ತಿದೆ. ಜತೆಗೆ ಚಿಕ್ಕೋಡಿಗೆ ಮತ್ತೊಂದು ಕೇಂದ್ರೀಯ ವಿದ್ಯಾಲಯ ಮಂಜೂರು ಮಾಡಿಸಲಾಗುತ್ತಿದೆ. ಅಲ್ಪ ಸಂಖ್ಯಾತರ ಮಕ್ಕಳಿಗಾಗಿ ಮಂಜೂರು ಮಾಡಿಸಿರುವ ಮುರಾರ್ಜಿ ವಸತಿ ಶಾಲೆಯ ಕಟ್ಟಡ ಹಿರೇಕೂಡಿ ಗ್ರಾಮದಲ್ಲಿ 28 ಕೋಟಿ ವೆಚ್ಚದಲ್ಲಿ ಕಾಮಗಾರಿ ನಡೆಯುತ್ತಿದೆ ಎಂದರು.
ಬೆಳಗಾವಿಯಲ್ಲಿ ಆರಂಭಗೊಂಡಿರುವ ಪಾಸಪೋರ್ಟ್ ಕಚೇರಿಯಲ್ಲಿ ವಾರದಲ್ಲಿ ಒಂದು ದಿನ ಕೇವಲ ಅಲ್ಪಸಂಖ್ಯಾತರಿಗೆ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಲಾಗಿದ್ದು, ಅರ್ಜಿ ಸಲ್ಲಿಕೆಗೆ ಒಂದು ದಿನದ ಅವಕಾಶ ಮಾಡಿಕೊಡಲಾಗುವುದು ಎಂದು ಹೇಳಿದರು.
ಕರ್ನಾಟಕ ರಾಜ್ಯ ಸೌಹಾರ್ದ ಸಹಕಾರಿ ಮಂಡಳದ ಉಪಾಧ್ಯಕ್ಷ ಜಗದೀಶ ಕವಟಗಿಮಠ ಮಾತನಾಡಿ, ಶಿಕ್ಷಣದಿಂದ ಮಾತ್ರ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯ. ಮುಂದಿನ ದಿನಮಾನದಲ್ಲಿ ಶಿಕ್ಷಣ ಪಡೆದವನೇ ಶ್ರೀಮಂತ, ಶಿಕ್ಷಣ ಪಡೆಯದವನೇ ಬಡವ ಎಂಬ ಪರಿಸ್ಥಿತಿ ಬರಲಿದ್ದು, ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಆಧ್ಯತೆ ನೀಡಬೇಕು. ಇಂದಿನ ದಿನಮಾನದಲ್ಲಿ ಮಕ್ಕಳು ಆಧುನಿಕ ಜಗತ್ತಿನಲ್ಲಿ ಬಾಳಿ ಬದುಕಬೇಕಾದರೇ ಮಾತೃ ಭಾಷೆ ಪ್ರೀತಿಸುವ ಜತೆಗೆ ಮಕ್ಕಳಿಗೆ ಇಂಗ್ಲೀಷ ಭಾಷಾ ಶಿಕ್ಷಣ ಕೊಡಿಸಬೇಕಾದ ಅನಿವಾರ್ಯತೆ ಇದೆ ಎಂದು ಹೇಳಿದರು.
ಜೊಲ್ಲೆ ಉದ್ಯೋಗ ಸಮೂಹದ ಸಂಸ್ಥಾಪಕ ಅಣ್ಣಾಸಾಹೇಬ ಜೊಲ್ಲೆ ಮಾತನಾಡಿ, ದೇಶದ ಬೆಳವಣಿಗೆಯಲ್ಲಿ ಶಿಕ್ಷಣದ ಪಾತ್ರ ಮಹತ್ತರವಾಗಿದೆ. ಆದ್ದರಿಂದ ಎಲ್ಲರೂ ತಮ್ಮ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸುವ ಕೆಲಸ ಮಾಡಬೇಕು. ಪಾಲಕರು ಕೇವಲ ಎಸ್‍ಎಸ್‍ಎಲ್‍ಸಿವರೆಗೆ ಮಾತ್ರ ಮಕ್ಕಳ ಕಲಿಕೆಯತ್ತ ಗಮನ ಹರಿಸುತ್ತಿದ್ದು, ಮಕ್ಕಳು ಪಿಯುಸಿ ಓದುತ್ತಿದ್ದಾಗ ಅವರತ್ತ ಗಮನ ಹರಿಸಬೇಕಾದ ಅವಶ್ಯಕತೆ ಇದೆ ಎಂದು ಹೇಳಿದರು.
ಶಾಸಕ ದುರ್ಯೋಧನ ಐಹೊಳೆ, ಜಿ.ಪಂ.ಸದಸ್ಯ ಪವನ ರಮೇಶ ಕತ್ತಿ ಮಾತನಾಡಿದರು. ಇಸಾ ನಾಯಿಕವಾಡಿ, ರಾಮಾ ಮಾನೆ, ಶಾಮ ರೇವಡೆ, ಮಹೇಶ ಭಾತೆ, ನಿಂಗಪ್ಪ ಕುರುಬರ, ಸಂಜು ಕಾಂಬಳೆ, ಗುಲಾಬ ಬಾಗವಾನ, ರವಿ ಪಾಟೀಲ, ಗುಲಾಬ ಜಮಾದಾರ, ಮುದ್ದುಸಾರ ಜಮಾದಾರ, ಲಿಯಾಕತ ಡೊಂಗರಕೆ, ಅಕ್ರಮ ಅರ್ಕಾಟೆ ಮುಂತಾದವರು ಉಪಸ್ಥಿತರಿದ್ದರು.

loading...