ಚೆನ್ನೈ ಸತತ ಗೆಲುವಿಗೆ ಬ್ರೇಕ್‌ ಹಾಕಲಿದೆಯೇ ಕೊಲ್ಕತಾ ನೈಟ್‌ ರೈಡರ್ಸ್‌

0
5

ಕೊಲ್ಕತಾ:- ಪ್ರಸಕ್ತ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಅಂಕಪಟ್ಟಿಯಲ್ಲಿ ಕ್ರಮವಾಗಿ ಮೊದಲು ಹಾಗೂ ಎರಡನೇ ಸ್ಥಾನದಲ್ಲಿರುವ ಚೆನ್ನೈ ಸೂಪರ್‌ ಕಿಂಗ್ಸ್‌ ಹಾಗೂ ಕೊಲ್ಕತಾ ನೈಟ್‌ ರೈಡರ್ಸ್‌ ತಂಡಗಳು ಎರಡನೇ ಬಾರಿ ನಾಳೆ ಈಡೆನ್‌ ಗಾರ್ಡನ್ಸ್‌ ಮೈದಾನದಲ್ಲಿ ಮುಖಾಮುಖಿಯಾಗುತ್ತಿವೆ.
ಅದ್ಭುತ ಲಯದಲ್ಲಿರುವ ಸಿಎಸ್‌ಕೆ, ಆಡಿರುವ 7 ಪಂದ್ಯಗಳಲ್ಲಿ 6 ರಲ್ಲಿ ಜಯ ಸಾಧಿಸಿದ್ದು, ಗುಂಪು ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದೆ. ಕೆಕೆಆರ್‌ 7ರಲ್ಲಿ 4 ಪಂದ್ಯಗಳನ್ನು ಗೆದ್ದು ಎರಡನೇ ಸ್ಥಾನದಲ್ಲಿದೆ. ಉಭಯ ತಂಡಗಳು ಏ.9 ರಂದು ಚೆನ್ನೈ ಎಂ.ಎ ಚಿದಂಬರಂ ಕ್ರೀಡಾಂಗಣದಲ್ಲಿ ಮೊದಲ ಬಾರಿ ಕಾದಾಟ ನಡೆಸಿದ್ದವು. ಈ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತವರು ಅಂಗಳದ ಲಾಭದೊಂದಿಗೆ 7 ವಿಕೆಟ್‌ಗಳಿಂದ ಗೆಲುವು ಪಡೆದಿತ್ತು.
ರಾಜಸ್ಥಾನ್‌ ರಾಯಲ್ಸ್‌ ವಿರುದ್ಧ ಕಳೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌, 4 ವಿಕೆಟ್‌ಗಳಿಂದ ಗೆಲುವು ಪಡೆದಿತ್ತು. ಕ್ರಿಕೆಟ್‌ ವೃತ್ತಿ ಜೀವನದಲ್ಲೇ ತಾಳ್ಮೆ ಹಾಗೂ ಶಾಂತ ಚಿತ್ತತೆಯ ನಾಯಕನಾಗಿ ಸೇವೆ ಸಲ್ಲಿಸಿದ್ದ ಎಂ.ಎಸ್. ಧೋನಿ ಮೊದಲ ಬಾರಿ ಕೊನೆಯ ಪಂದ್ಯದಲ್ಲಿ ತೀರ್ಪುಗಾರರ ವಿರುದ್ಧ ಹರಿಹಾಯ್ದಿದ್ದರು. ಅವರ ನಡೆಯನ್ನು ಖಂಡಿಸಿದ ಐಪಿಎಲ್‌ ಪಂದ್ಯದ ಸಂಭಾವನೆಯ ಶೇ. 50 ರಷ್ಟು ದಂಡವನ್ನು ವಿಧಿಸಿತ್ತು.
ಕೊಲ್ಕತಾ ನೈಟ್‌ ರೈಡರ್ಸ್ ತಂಡ ಶುಕ್ರವಾರ ರಾತ್ರಿ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ 7 ವಿಕೆಟ್‌ಗಳಿಂದ ಸೋಲು ಅನುಭವಿಸಿದೆ. ಸತತ ಎರಡು ಪಂದ್ಯಗಳಲ್ಲಿ ಸೋಲು ಅನುಭವಿಸಿರುವ ಕೆಕೆಆರ್‌ಗೆ ನಾಳೆ ನಡೆಯುವ ಚೆನ್ನೈ ವಿರುದ್ಧದ ಪಂದ್ಯದಲ್ಲಿ ಗೆಲುವಿನ ಲಯಕ್ಕೆ ಮರಳುವ ತುಡಿತದಲ್ಲಿದೆ. ಕೇವಲ ಒಂದು ಪಂದ್ಯದಲ್ಲಿ ಮಾತ್ರ ಸೋತು ಇನ್ನುಳಿದ ಎಲ್ಲ ಕಾದಾಟದಲ್ಲಿ ಯಶಸ್ವಿಯಾಗಿರುವ ಸಿಎಸ್‌ಕೆ ನಾಳಿನ ಪಂದ್ಯಕ್ಕೆ ಆತ್ಮವಿಶ್ವಾಸದಿಂದ ಕಣಕ್ಕೆ ಇಳಿಯಲಿದೆ.
ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಎಲ್ಲ ವಿಭಾಗದಲ್ಲೂ ಆಟಗಾರರು ಸಂಘಟಿತ ಪ್ರದರ್ಶನ ತೋರುವಲ್ಲಿ

ಯಶಸ್ವಿಯಾಗಿದ್ದಾರೆ. ಅದರಲ್ಲೂ ಮುಖ್ಯವಾಗಿ ದೀಪಕ್‌ ಚಾಹರ್‌ ಉತ್ತಮ ಬೌಲಿಂಗ್‌ ಮಾಡುತ್ತಿದ್ದು, ಇದುವರೆಗೂ ಅವರು 10 ವಿಕೆಟ್‌ ಕಬಳಿಸಿದ್ದಾರೆ. ಜತೆಗೆ ಸ್ಪಿನ್‌ ವಿಭಾಗದಲ್ಲಿ ಹರಭಜನ್‌ ಸಿಂಗ್‌, ಇಮ್ರಾನ್‌ ತಾಹೀರ್‌ ಹಾಗೂ ರವೀಂದ್ರ ಜಡೇಜಾ ಯಾವುದೇ ಸಂದರ್ಭದಲ್ಲಾದರೂ ಪಂದ್ಯವನ್ನು ನಿಯಂತ್ರಿಸುವ ಸಾಮರ್ಥ್ಯ ಇವರಲ್ಲಿದೆ.
ಜತೆಗೆ, ಬ್ಯಾಟಿಂಗ್‌ ವಿಭಾಗದಲ್ಲೂ ಕೂಡ ಒಬ್ಬರು ವಿಫಲರಾದರೆ ಮತ್ತೊಬ್ಬರು ಉತ್ತಮ ಬ್ಯಾಟಿಂಗ್‌ನಲ್ಲಿ ಯಶಸ್ವಿಯಾಗುತ್ತಿದ್ದಾರೆ. ಫಾಫ್‌ ಡುಪ್ಲೇಸಿಸ್‌, ಸುರೇಶ್‌ ರೈನಾ ಹಾಗೂ ಅಂಬಾಟಿ ರಾಯುಡು ಉತ್ತಮ ಲಯದಲ್ಲಿದ್ದಾರೆ. ಜತೆಗೆ, ಮಧ್ಯಮ ಕ್ರಮಾಂಕದಲ್ಲಿ ನಾಯಕ ಮಹೇಂದ್ರ ಸಿಂಗ್‌ ಧೋನಿ ಅಗತ್ಯವಿದ್ದಾಗ ಏಕಾಂಗಿಯಾಗಿ ತಂಡವನ್ನು ಮೇಲೆತ್ತುವ ಸಾಮರ್ಥ್ಯ ಅವರಲ್ಲಿ ಕರಗತವಾಗಿದೆ.
ಕೊಲ್ಕತಾ ನೈಟ್‌ ರೈಡರ್ಸ್‌ ತಂಡದಲ್ಲಿ ಆ್ಯಂಡ್ರೆ ರಸೆಲ್‌ ಅದ್ಭುತ ಪ್ರದರ್ಶನ ತೋರುವಲ್ಲಿ ಸಫಲರಾಗುತ್ತಿದ್ದಾರೆ. ಶುಕ್ರವಾರ ರಾತ್ರಿ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಅವರು 21 ಎಸೆತಗಳಲ್ಲಿ 4 ಸಿಕ್ಸರ್‌ ಹಾಗೂ ಮೂರು ಬೌಂಡರಿಯೊಂದಿಗೆ 45 ರನ್‌ ಗಳಿಸಿದ್ದರು. ಅಲ್ಲದೇ, ಚೆನ್ನೈ ವಿರುದ್ಧದ ಪಂದ್ಯದಲ್ಲಿ 44 ಎಸೆತಗಳಲ್ಲಿ ಅಜೇಯ 50 ರನ್‌ ಗಳಿಸಿದ್ದರು. ಹಾಗಾಗಿ, ಕೆಕೆಆರ್‌ ತಂಡದ ಪ್ರಮುಖ ಶಕ್ತಿ ರಸೆಲ್‌ ಆಗಿದ್ದಾರೆ.
ಕಳೆದ ಪಂದ್ಯದಲ್ಲಿ 62 ರನ್‌ ಗಳಿಸಿದ್ದ ಯುವ ಆಟಗಾರ ಶುಭಮನ್‌, ರಾಬಿನ್‌ ಉತ್ತಪ್ಪ ಅವರ ಮೇಲೆ ಹೆಚ್ಚಿನ ನಿರೀಕ್ಷೆ ಇಡಲಾಗಿದೆ. ಇನ್ನೂ ಬೌಲಿಂಗ್‌ ವಿಭಾಗದಲ್ಲಿ ಪ್ರಸಿದ್ಧ್‌ ಕೃಷ್ಣ ಸ್ಥಿರ ಪ್ರದರ್ಶನ ತೋರುವಲ್ಲಿ ಯಶಸ್ವಿಯಾಗಿದ್ದಾರೆ. ಬ್ಯಾಟಿಂಗ್‌ ಜತೆಗೆ ಬೌಲಿಂಗ್‌ನಲ್ಲೂ ಸಂದರ್ಭಕ್ಕೆ ಅನುಗುಣವಾಗಿ ಜವಾಭ್ದಾರಿ ನಿರ್ವಹಿಸುತ್ತಿದ್ದಾರೆ. ಇನ್ನೂ ಸ್ಪಿನ್‌ ವಿಭಾಗದಲ್ಲಿ ಪಿಯೂಷ್‌ ಚಾವ್ಲಾ, ಕುಲ್ದೀಪ್‌ ಯಾದವ್‌ ಇದ್ದು, ವಿಂಡೀಸ್ ಕಾರ್ಲೋಸ್‌ ಬ್ರಾಥ್‌ವೇಟ್‌ ಬೌಲಿಂಗ್‌ ವಿಭಾಗಕ್ಕೆ ಬಲ ತುಂಬಲಿದ್ದಾರೆ.
ಸಮಯ: ನಾಳೆ ಸಂಜೆ 04:00
ಸ್ಥಳ: ಈಡೆನ್‌ ಗಾರ್ಡನ್ಸ್‌, ಕೊಲ್ಕತಾ

loading...