ಜನಾರ್ಧನ ರೆಡ್ಡಿ ಹೇಳಿಕೆ ಖಂಡಿಸಿ ಪ್ರತಿಭಟನೆ

0
21

ಕನ್ನಡಮ್ಮ ಸುದ್ದಿ-ಕೊಪ್ಪಳ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ರಾಖೇಶ ಸಾವಿನ ಕುರಿತು ಮಾಜಿ ಸಚಿವ ಜನಾರ್ಧನ ರೆಡ್ಡಿ ನೀಡಿರುವ ಅಮಾನವೀಯ ಹೇಳಿಕೆ ಖಂಡಿಸಿ ಸಿದ್ದರಾಮಯ್ಯ ಅಭಿಮಾನಿಗಳು ನಗರದ ಅಶೋಕ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಜಮಾವಣೆಗೊಂಡ ನೂರಾರು ಅಭಿಮಾನಿಗಳು ಜನಾರ್ಧನ ರೆಡ್ಡಿ ವಿರುದ್ಧ ಘೋಷಣೆ ಕೂಗುತ್ತ ಅಶೋಕ ವೃತ್ತಕ್ಕೆ ಆಗಮಿಸಿದರು. ಅಲ್ಲಿ ರೆಡ್ಡಿ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಿದ್ದರಾಮಯ್ಯ ಅಭಿಮಾನಿಗಳು, ಜನಾರ್ಧನ ರೆಡ್ಡಿ ರಾಖೇಶ ಸಾವಿನ ವಿಚಾರದಲ್ಲಿ ಅವಹೇಳನಕಾರಿ ಹಾಗೂ ಮನಸ್ಸಿಗೆ ನೋವಾಗುವಂತಹ ಹೇಳಿಕೆ ನೀಡುವ ಮೂಲಕ ತಮ್ಮ ವಿಕೃತಿ ಮೆರೆದಿದ್ದಾರೆ. ಗಣಿಲೂಟಿ ಹೊಡೆದು ಜೈಲು ಪಾಲಾಗಿದ್ದ ರೆಡ್ಡಿಗೆ ಮಾನವೀಯತೆಯೇ ಇಲ್ಲ. ಅವರೊಬ್ಬ ಅಮಾನವೀಯ ಹಾಗೂ ಸಂಸ್ಕಾರವಿಲ್ಲದ ವ್ಯಕ್ತಿ. ರಾಜ್ಯದ ಸಂಪತ್ತನ್ನು ಲೂಟಿ ಮಾಡಿ ಹಗರಣದ ಹಣದಲ್ಲಿ ಮೆರೆದ ರೆಡ್ಡಿಗೆ ಭಾವನೆಗಳೇ ಇಲ್ಲ ಎಂದು ಕಿಡಿಕಾರಿದರು.
ರಾಜಕೀಯ ಬೇಳೆ ಬೇಯಿಸಿಕೊಳ್ಳುವುದಕ್ಕಾಗಿ ಇಂತಹ ಹೇಳಿಕೆಗಳನ್ನು ಯಾರೂ ನೀಡಬಾರದು. ಜನಾರ್ಧನ ರೆಡ್ಡಿ ಹೇಳಿಕೆಯಿಂದ ಸಿದ್ದರಾಮಯ್ಯನವರ ಲಕ್ಷಾಂತರ ಅಭಿಮಾನಿಗಳಿಗೆ ತುಂಬಾ ನೋವಾಗಿದೆ. ಕೂಡಲೇ ಜನಾರ್ಧನ ರೆಡ್ಡಿ ಸಿದ್ದರಾಮಯ್ಯನವರ ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ಅವರನ್ನು ಸಿದ್ದರಾಮಯ್ಯ ಅಭಿಮಾನಿಗಳಿಂದ ರಾಜ್ಯದ ಯಾವ ಊರಿಗೂ ಬರದಂತೆ ಘೆರಾವ್‌ ಹಾಕಲಾಗುವುದು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಸಿದ್ದರಾಮಯ್ಯ ಅಭಿಮಾನಿಗಳಾದ ಅಮರೇಶ ಉಪಲಾಪೂರ, ಹನುಮೇಶ ಹೊಸಳ್ಳಿ, ಹನುಮಂತಪ್ಪ ಹಳ್ಳಿಕೇರಿ, ಬಸವರಾಜ ಆಗೋಲಿ, ದ್ಯಾಮಣ್ಣ ಮ್ಯಾದನೇರಿ, ಕುಬೇರ ಮಜ್ಜಿಗಿ, ರವಿ ಪಾಟೀಲ, ಸೀಮಣ್ಣ ಗಬ್ಬೂರ, ಸೋಮಣ್ಣ ಮೇಟಿ, ಬಸವರಾಜ ಭೀಮನೂರ, ಗೋವಿಂದ ಚೌಡ್ಕಿ ಸೇರಿದಂತೆ ನೂರಾರು ಅಭಿಮಾನಿಗಳು ಭಾಗವಹಿಸಿದ್ದರು.

loading...