ಜಾತಿ ಕಾರಣದಿಂದ ರಾಜಕೀಯ ಕಲುಷಿತಗೊಂಡಿದೆ: ಶ್ರೀನಾಥ

0
28

ಗಂಗಾವತಿ: ಇಂದಿನ ದಿನಗಳಲ್ಲಿ ಜಾತಿ ಧರ್ಮಗಳ ನೆಪದಲ್ಲಿ ರಾಜಕಾರಣ ಕಲುಷಿತಗೊಂಡಿದೆ ಎಂದು ವಿಧಾನಪರಿಷತ್‌ ಮಾಜಿ ಸದಸ್ಯ, ಜೆಡಿಎಸ್‌ ರಾಜ್ಯ ಉಪಾಧ್ಯಕ್ಷ ಎಚ್‌.ಆರ್‌.ಶ್ರೀನಾಥ ತಿಳಿಸಿದರು.
ಎಚ್‌.ಆರ್‌.ಸರೋಜಮ್ಮ ಕಲ್ಯಾಣ ಮಂಟಪದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಆರ್ಯ ಈಡಗೇರ ಸಮಾಜದ ರಾಜ್ಯಮಟ್ಟದ ವಧು,ವರರ ಬೃಹತ್‌ ಸಮಾವೇಶದ ಉದ್ಘಾಟನೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಹಲವು ದಶಕಗಳ ಹಿಂದೆ ಇದ್ದ ರಾಜಕಾರಣ ಈಗಿಲ್ಲ. ಹಳೆ ತಲೆಮಾರಿನ ರಾಜಕಾರಣಿಗಳು ಮುತ್ಸದ್ದಿಗಳಾಗಿದ್ದರು. ಹೆಚ್ಚಿನ ಹಣದ ವೆಚ್ಚ ಇಲ್ಲದೆ ಚುನಾವಣೆಯಲ್ಲಿ ಆಯ್ಕೆಗೊಂಡಿದ್ದರು ಎಂದು ತಿಳಿಸಿದರು. ಕೊಪ್ಪಳ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ತಮ್ಮ ಸಮಾಜದವರ ಜನಸಂಖ್ಯೆ ಕಡಿಮೆ ಪ್ರಮಾಣದಲ್ಲಿದೆ. ತಮ್ಮ ತಂದೆ ಎಚ್‌.ಜಿ.ರಾಮುಲು ಅವರು ಸತತವಾಗಿ 4 ಅವಧಿ ಸಂಸದರಾಗಿ ಆಯ್ಕೆಗೊಂಡಿದ್ದರು. ಅಂದಿನ ದಿನಗಳಲ್ಲಿ ಜಾತಿ ರಾಜಕಾರಣ ಇರಲಿಲ್ಲ ಎಂದು ಹೇಳಿದರು.
ನಮ್ಮ ಸಮಾಜ ಹಮ್ಮಿಕೊಂಡಿರುವ ರಾಜ್ಯಮಟ್ಟದ ವಧು, ವರರ ಸಮಾವೇಶ ಉತ್ತಮ ಬೆಳವಣಿಗೆಯಾಗಿದೆ. ಇದರಿಂದ ಪೋಷಕರಿಗೆ ಅನುಕೂಲವಾಗುತ್ತದೆ. ಅಲೆದಾಟ ತಪ್ಪುತ್ತದೆ. ಸ್ಥಳದಲ್ಲಿಯೇ ತಮ್ಮ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳಲು ವಧು ಮತ್ತು ವರನಿಗೆ ಮುಕ್ತ ಅವಕಾಶ ಇದೆ ಎಂದು ಹೇಳಿದರು. ಈಡಿಗ ಸಮಾಜದವರು ಕಾಯಕ ಜೀವಿಗಳು. 12ನೇ ಶತಮಾನದಲ್ಲಿ ಸಾಮಾಜಿಕ ಕ್ರಾಂತಿ ಮಾಡಿರುವ ಬಸವಣ್ಣನವರ ಕಾಯಕವೇ ಕೈಲಾಸ ಸಿದ್ದಾಂತ ಅಳವಡಿಸಿಕೊಂಡವರು. ಶ್ರಮಜೀವಿಗಳು ಆಗಿದ್ದಾರೆ. ಬಸವಣ್ಣನವರು ಆಸ್ಪೃಶ್ಯತೆ ಆಚರಣೆಯನ್ನು ವಿರೋಧಿಸಿದ್ದರು. ನಾರಾಯಣ ಗುರುಗಳು ಸಹ ಮೂಢ ನಂಬಿಕೆ ಮತ್ತು ಗೊಡ್ಡು ಸಂಪ್ರದಾಯಗಳನ್ನು ವಿರೋಧಿಸಿದ್ದರು ಎಂದು ತಿಳಿಸಿದರು.
ಶಿಕ್ಷಣಕ್ಕೆ ಒತ್ತು:ನನ್ನ ಸಮಾಜದವರು ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಡಬೇಕು ಎಂದು ಶ್ರೀನಾಥ ತಿಳಿಸಿದರು. ಇಂದಿನ ದಿನಗಳಲ್ಲಿ ಶಿಕ್ಷಣಕ್ಕೆ ಹೆಚ್ಚು ಮಾನ್ಯತೆ ಇದೆ. ಪೋಷಕರು ತಮ್ಮ ಮಕ್ಕಳನ್ನು ಕಡ್ಡಾಯವಾಗಿ ಶಾಲೆಗೆ ಕಳಿಸಬೇಕು ಎಂದು ಹೇಳಿದರು. ಶಾಸಕ ಪರಣ್ಣ ಮುನವಳ್ಳಿ ಮಾತನಾಡಿದರು.
ನಾರಾಯಣ ಗುರು ಮಹಾಸಂಸ್ಥಾನ ಗರ್ತಿಕೆರೆ ತೀರ್ಥಹಳ್ಳಿಯ ಆರ್ಯಶ್ರೀ ರೇಣುಕಾನಂದ ಸ್ವಾಮಿಗಳು ಸಾನಿಧ್ಯವಹಿಸಿಕೊಂಡಿದ್ದರು. ಜಿಲ್ಲಾ ಈಡಿಗ ಸಮಾಜದ ಅಧ್ಯಕ್ಷ ಎ.ಇ.ಸೂರಿಬಾಬು, ಕೊಪ್ಪಳ ತಾಲೂಕು ಅಧ್ಯಕ್ಷ ಈರಣ್ಣ ಹುಲಗಿ, ಕನಕಗಿರಿ ಕಾರಟಗಿ ಅಧ್ಯಕ್ಷ ಕಾಶಿ ವಿಶ್ವನಾಥ, ಗಂಗಾವತಿ ಘಟಕದ ಅಧ್ಯಕ್ಷ ಈ.ನಾಗರಾಜ, ಯಲಬುರ್ಗಾ ಅಧ್ಯಕ್ಷ ರವೀಂದ್ರ ಕುದುರಿಮೋತಿ, ಕುಷ್ಟಗಿ ಅಧ್ಯಕ್ಷ ಶುಕಮುನಿ ದೋಟಿಹಾಳ ಪಾಲ್ಗೊಂಡಿದ್ದರು.

loading...