ಜ್ಞಾನ ದಾಸೋಹಿ ಡಾ. ಮಾತೆ ಮಹಾದೇವಿ

0
99

ಧಾರವಾಡ : ದೇವರ ಆಸ್ತಿತ್ವ, ಸ್ವರೂಪ ಮುಂತಾದವುಗಳ ಕುರಿತು ಮಾಹಿತಿ ನೀಡದಿದ್ದರೆ, ನಾವು ದೇವರನ್ನು ಆರಾಧಿಸುವುದಿಲ್ಲ. ಹಾಗಾಗಿ ಸೃಷ್ಟಿಕರ್ತನ ಸ್ವರೂಪವನ್ನು ತಿಳಿಸಿದವರು ಎಂದರೆ ಗುರು ಬಸವಣ್ಣನವರು. ಪ್ರಪಂಚದಲ್ಲಿ ಸಮಾನತೆಗಾಗಿ ಪ್ರಥಮ ಸಾಮಾಜಿಕ ಕ್ರಾಂತಿ ಆರಂಭ ಆಗಿದ್ದು ಬಸವಣ್ಣನವರ ನೇತೃತ್ವದಲ್ಲಿ ಎಂಬುದು ಜಗತ್ತಿಗೆ ತಿಳಿದಿರುವ ವಿಷಯವಾಗಿದೆ. ಬಸವಣ್ಣ ಎಂದರೆ ಯಾರು? ಅವರ ವಚನದ ಮಹತ್ವ ಏನು? ಎಂದು ಸಮಾಜಕ್ಕೆ ತಿಳಿಸಿದ ಏಕೈಕ ಗುರು ಪ್ರವಚನ ಪಿತಾಮಹ ಶ್ರೀ ಲಿಂಗಾನಂದ ಸ್ವಾಮೀಜಿಯವರು. ಇವರು ಲಿಂಗೈಕ್ಯವಾದ ನಂತರ ಪೂಜ್ಯ ಶ್ರೀ ಮಹಾ ಜಗದ್ಗುರು ಡಾ. ಮಾತೆ ಮಹಾದೇವಿ ತಾಯಿಯವರು ಧಾರ್ಮಿಕ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿ ಜನಮಾನಸರಾಗಿದ್ದಾರೆ.
ಚಿನ್ಮೂಲಾದ್ರಿಯ ಚಿತ್ಕಳೆಯಾಗಿ 1946 ರ ಮಾರ್ಚ 13 ರಂದು ಚಿತ್ರದುರ್ಗ ಜಿಲ್ಲೆಯ ಸಾಸಲಟ್ಟಿ ಎಂಬಲ್ಲಿ ಜನಿಸಿದ ಮಾತಾಜಿಯವರು ವಿಜ್ಞಾನ, ತತ್ವಜ್ಞಾನಗಳ ಸ್ನಾತಕೋತ್ತರ ಪದವಿಧರೆಯಾಗಿ 1966 ರಲ್ಲಿ ಪೂಜ್ಯ ಶ್ರೀ ಸದ್ಗುರು ಲಿಂಗಾನಂದ ಸ್ವಾಮೀಜಿಯವರಿಂದ ಜಂಗಮದೀಕ್ಷೆ ಪಡೆದು ಮಾತೆ ಮಹಾದೇವಿ ಎಂಬ ಅಭಿದಾನ ತಾಳಿ 1970 ರಲ್ಲಿ ವಿಶ್ವವಿನೂತನ ಧಾರವಾಡದ ಅಕ್ಕಮಹಾದೇವಿ ಅನುಭಾವ ಪೀಠದ ಪ್ರಥಮ ಸ್ತ್ರೀ ಜಗದ್ಗುರು ಪೀಠವನ್ನಲಂಕರಿಸಿ ಭಕ್ತಿ-ಜ್ಞಾನ ವಿರಕ್ತಿಗಳ ದಿವ್ಯ ಸಂಗಮವಾಗಿ ಶೋಭಿಸುತ್ತಿದ್ದಾರೆ. ‘ಮಾತಾಜಿ’ ಎಂದು ಆತ್ಮೀಯ ಭಕ್ತರಿಂದ ಕರೆಸಿಕೊಳ್ಳುತ್ತಿರುವ ಇವರು ಕಿರಿದಾದ ವಯಸ್ಸಿನಲ್ಲಿಯೇ ಹಿರಿದಾದ ಜ್ಞಾನ ಗಳಿಸಿ ಜ್ಞಾನ ಸುಧೆಯನ್ನು ಪ್ರವಚನ ಗ್ರಂಥಗಳ ಮೂಲಕ ಜನತೆಗೆ ಧಾರೆಯೆರೆಯುತ್ತಿದ್ದಾರೆ.
ವಿಶ್ವಧರ್ಮದ ಮಣಿಹ ಹೊತ್ತು ಬಸವ ಸಂದೇಶವನ್ನು ಯಶಸ್ವಿಯಾಗಿ ಸಾರುತ್ತಿದ್ದಾರೆ. ಧಾರ್ಮಿಕ ಹಾಗೂ ಅಧ್ಯಾತ್ಮಿಕ ರಂಗದಲ್ಲಿ ಅಪಾರ ಒಲವು ತೋರಿಸಿ, ವಚನ ಸಾಹಿತ್ಯದಲ್ಲಿ ಅಗಾಧ ಜ್ಞಾನ ಹೊಂದಿರುವ ಇವರು ರಚಿಸಿದ ನೂರಾರು ಪುಸ್ತಕಗಳು ಜನರ ಮನಃಪರಿವರ್ತನೆ ಮಾಡಿವೆ. ಇವರ ಮೊದಲ ಕಾದಂಬರಿ ‘ಹೆಪ್ಪಿಟ್ಟ ಹಾಲು’ ರಾಜ್ಯ ಸಾಹಿತ್ಯ ಅಕಾಡೆಮಿಯ ಬಹುಮಾನವನ್ನು ಪಡೆದಿದೆ. ಅಕ್ಕಮಹಾದೇವಿಯವರ ಜೀವನವನ್ನು ಕುರಿತಾದ ‘ತರಂಗಿಣಿ’ ಮಾತೆಯವರ ಸಿದ್ದ ಹಸ್ತದಲ್ಲಿ ರೂಪುಗೊಂಡ ದ್ವಿತೀಯ ಕಾದಂಬರಿ. ಬಸವ ತತ್ವ ದರ್ಶನ, ಹಿಂದೂ ಯಾರು?, ಲಿಂಗಾಯತ ಧರ್ಮ ಕೈಪಿಡಿ, ಶರಣ ರತ್ನಗಳು, ಬಸವ ವಚನ ದೀಪ್ತಿ, ಬಸವ ಧರ್ಮದ ಸಂಸ್ಕಾರಗಳು, ಬಸವ ವಚನಾಮೃತ ಸೇರಿದಂತೆ ಸಾಕಷ್ಟು ಧರ್ಮಗ್ರಂಥಗಳನ್ನು ಬರೆದಿರುವ ಇವರು 160 ಕ್ಕೂ ಅಧಿಕ ಗ್ರಂಥಗಳನ್ನು ರಚಿಸಿ, ನೂರಾರು ವಚನ ಸಂಗೀತದ ಮತ್ತು ಪ್ರವಚನದ ಸಿ.ಡಿ ಗಳನ್ನು ರಚಿಸಿದ್ದಾರೆ.
ಬಡಮಕ್ಕಳಿಗಾಗಿ ಅನಾಥಾಲಯ, ವೃದ್ಧಾಶ್ರಮ, ನಿರ್ಗತಿಕ ಮಕ್ಕಳಿಗಾಗಿ ಬಾಲಕ-ಬಾಲಕಿಯರ ವಸತಿ ನಿಲಯಗಳನ್ನು ತೆರೆದಿರುವ ಇವರು ಈ ಧರ್ಮವನ್ನು ಎತ್ತರಕ್ಕೆ ಒಯ್ಯುವ ಮಹದಾಸೆ ಹೊಂದಿದ್ದಾರೆ. ಇವರ ಅವಿರತ ಸಾಧನೆಗಳನ್ನು ಮೆಚ್ಚಿ ಚೆನ್ನೈನ “ಡಿವೈನ್ ಹ್ಯಾಂಡ್ಸ್ ಇಂಟರನ್ಯಾಷನಲ್ ಯುನಿವರ್ಸಿಟಿ” “ಡಾಕ್ಟರೇಟ್” ಪದವಿ ನೀಡಿ ಗೌರವಿಸಿದೆ. 2010 ನೇ ಇಸ್ವಿಯಲ್ಲಿ ಧಾರವಾಡದಲ್ಲಿ ಶರಣೋತ್ಸವ ಪ್ರಾರಂಭಿಸಿ ಸಾಮೂಹಿಕ ಪ್ರಾರ್ಥನೆ, ಧರ್ಮ ಚಿಂತನ ಗೋಷ್ಠಿ, ಧಾರ್ಮಿಕ ರಸಪ್ರಶ್ನೆ ಹೀಗೆ ವಿವಿಧ ಕಾರ್ಯಕ್ರಮ ರೂಪಿಸಿ ಭಕ್ತರಿಗೆ ಜ್ಞಾನ ದಾಸೋಹದ ಜೊತೆಗೆ ಅನ್ನ ದಾಸೋಹ ಒದಗಿಸುತ್ತಿದ್ದಾರೆ. ಇದೀಗ ಧಾರವಾಡದಲ್ಲಿ ಮೇ, 21, 22, 23 ರಂದು ಶರಣೋತ್ಸವ ಕಾರ್ಯಕ್ರಮ ನಡೆಯುತ್ತಿದೆ. ಪೂಜ್ಯ ಮಾತಾಜಿಯವರ ಕಾರ್ಯಕ್ಕೆ ಸದಾ ಬೆನ್ನೆಲುಬಾಗಿ ಶ್ರೀ ಮಾತೆ ಗಂಗಾಮಾತೆ, ಶ್ರೀ ಚನ್ನಬಸವಾನಂದ ಸ್ವಾಮಿಜಿ, ಮಾತೆ ಸತ್ಯಾದೇವಿ, ಶ್ರೀ ಪ್ರಭುಲಿಂಗ ಸ್ವಾಮಿಜಿ, ಶ್ರೀ ಬಸವಕುಮಾರ ಸ್ವಾಮಿಜಿಯವರು ಮಾತಾಜಿಯವರೊಂದಿಗೆ ಕೈಜೋಡಿಸಿ ಬೆಂಬಲಿಸುತ್ತಾ ಬಂದಿದ್ದಾರೆ. ಇವರ ಕಾರ್ಯ ಇನ್ನೂ ಹೆಚ್ಚಾಗಲಿ ಎಂದು ಶರಣೋತ್ಸವದಲ್ಲಿ ಪಾಲ್ಗೋಳ್ಳೋಣ.

loading...

LEAVE A REPLY

Please enter your comment!
Please enter your name here