ಟ್ಯಾಂಕರ್ ಬಿಲ್ ಪಾವತಿಸಲು ಆಗ್ರಹಿಸಿ ಪ್ರತಿಭಟನೆ

0
44

ಕನ್ನಡಮ್ಮ ಸುದ್ದಿ-ಗಜೇಂದ್ರಗಡ: ಕಳೆದ ಒಂಬತ್ತು ತಿಂಗಳಿಂದ ಪುರಸಭೆ ಕುಡಿಯುವ ನೀರು ಪೂರೈಕೆಗೊಳಿಸುವ ಟ್ಯಾಂಕರ್‍ಗಳ ಬಿಲ್ ಪಾವತಿಸಿಲ್ಲ. ಅಧಿಕಾರಿಗಳು ಬಿಲ್ ಪಾವತಿಸಲು ಮುತುವರ್ಜಿ ವಹಿಸುತ್ತಿಲ್ಲ. ಈ ಹಿನ್ನಲೆಯಲ್ಲಿ ಟ್ಯಾಂಕರ್ ಮಾಲಿಕರು ಸಂಕಷ್ಟದ ಸ್ಥಿತಿಯಲ್ಲಿದ್ದೇವೆ. ಕೂಡಲೇ ಟ್ಯಾಂಕರ್‍ಗಳ ಬಿಲ್ ಪಾವತಿಸಬೇಕು ಎಂದು ಒತ್ತಾಯಿಸಿ ಮಂಗಳವಾರ ಟ್ಯಾಂಕರ್ ಮಾಲಿಕರು ವಾಹನಗಳ ಸಮೇತ ಪುರಸಭೆ ಕಾರ್ಯಾಲಯದ ಎದರು ಅನಿರ್ಧಿಷ್ಟಾವಧಿ ಪ್ರತಿಭಟನೆ ನಡೆಯಿಸಿದರು.

ಪ್ರತಿಭಟನಾಕಾರರು ಕಚೇರಿ ಎದುರಲ್ಲೇ ಅಡುಗೆ ತಯಾರಿಸಿ, ಊಟ ಮಾಡುವ ಮೂಲಕ ವಿನೂತನವಾಗಿ ಪ್ರತಿಭಟನೆಯನ್ನು ನಡೆಯಿಸಿದರು.
ಈ ಸಂದರ್ಭದಲ್ಲಿ ಮುಖಂಡ ಬಸವರಾಜ ಬಂಕದ ಮಾತನಾಡಿ, ಸತತ ಬರದಿಂದ ಪುರಸಭೆಯ ಬಹುತೇಕ ಕೊಳವೆಬಾಯಿಳಲ್ಲಿ ನೀರು ಪಾತಾಳಕಂಡಿತು. ಪರಿಣಾಮ ಬಹುತೇಕ ಕೊಳವೆಬಾವಿ ಸ್ಥಗಿತಗೊಂಡಿದ್ದವು. ಆಗ ಪಟ್ಟಣದಲ್ಲಿ ಎಲ್ಲೆಂದರಲ್ಲಿ ಆಹಾಕಾರ ಉಂಟಾಗಿದ್ದಾಗ ಅಂದಿನ ಜಿಲ್ಲಾಧಿಕಾರಿ ಎನ್.ಎಸ್. ಪ್ರಸನ್ನಕುಮಾರ ಅವರು, ಟ್ಯಾಂಕರ್ ನೀರು ಬಿಡಲು ಸೂಚಿಸಿದ್ದರು. ಅದರಂತೆ ಮುಖ್ಯಾಧಿಕಾರಿ ಫೆಬ್ರುವರಿ 2017ರಿಂದ 23 ವಾರ್ಡಗಳಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡುವಂತೆ ಮನವಿ ಮಾಡಿದ್ದರು. 1 ಟ್ಯಾಂಕರ್ ನೀರಿಗೆ 450 ರೂ ಯಂತೆ ನಿಗದಿ ಮಾಡಿದ್ದರು. 10 ಟ್ಯಾಂಕರ್‍ಗಳ ಮಾಲಿಕರು ನಿತ್ಯ ನೀರು ಪೂರೈಕೆಗೆ ಮುಂದಾಗಿದ್ದೇವೆ. ಪ್ರಾರಂಭದಲ್ಲಿ ಕೆಲ ತಿಂಗಳು ಹಣ ನೀಡಿತು. ಆದರೆ, ಅಕ್ಟೋಬರ್ 2017 ರಿಂದ ಪುರಸಭೆ ಬಿಡಿಕಾಸು ಸಹ ಬಿಲ್ ಕೊಟ್ಟಿಲ್ಲ ಎಂದು ಅಳಲು ತೋಡಿಕೊಂಡರು.

ಇದೇ ಜೂ.11 ರಂದು ಪುರಸಭೆಯಲ್ಲಿ ನಡೆದ ಪ್ರಗತಿ ಪರಶೀಲನಾ ಸಭೆಯಲ್ಲಿ ಟ್ಯಾಂಕರ್ ಮಾಲಿಕರೆಲ್ಲರೂ ಸೇರಿ ಬಿಲ್ ಪಾವತಿಸಲು ಜಿಲ್ಲಾ ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕ ಎನ್. ರುದ್ರೇಶ ಅವರಿಗೆ ಮನವಿ ಮಾಡಿದೇವು. ಟ್ಯಾಂಕರ್ ನೀರು ಪೂರೈಸುವ ಕುರಿತು ನಮಗೆ ಯಾವುದೇ ಮಾಹಿತಿ ಇಲ್ಲ. ಬಿಲ್ ಪಾವತಿಸಲು ಆಗುವುದಿಲ್ಲ ಎಂದು ಹೇಳಿದರು. ನಾವು ಈ ಹಿಂದಿನ ಜಿಲ್ಲಾಧಿಕಾರಿಗಳು ಸೂಚಿಸಿದ್ದರು ಎಂದು ತಿಳಿಸಿದಾಗ, ಅವರಿಂದಲೇ ಹಣ ಪಾವತಿಸಿಕೊಳ್ಳಿ ಎಂದು ಉಡಾಫೆಯ ಮಾತುಗಳನ್ನು ಆಡಿದರು. ಮುಖ್ಯಾಧಿಕಾರಿ ಹನಮಂತಮ್ಮ ನಾಯಕ ಅವರು ಸಹ ಬಿಲ್ ಪಾವತಿಸಲು ಮುತುವರ್ಜಿ ವಹಿಸುತ್ತಿಲ್ಲ. ಮತ್ತು ಯಾವುದೇ ಭರವಸೆಯನ್ನೂ ನೀಡುತ್ತಿಲ್ಲ. ಈ ಹಿನ್ನಲೆಯಲ್ಲಿ ಅನಿವಾರ್ಯವಾಗಿ ಅನಿರ್ಧಿಷ್ಟಾವಧಿ ಪ್ರತಿಭಟನೆ ಹಾದಿ ತುಳಿದಿದ್ದೇವೆ ಎಂದು ಹೇಳಿದರು.
ರಾಜಶೇಖರ ಹಿರೇಮಠ ಮಾತನಾಡಿ, ಪುರಸಭೆ 9 ತಿಂಗಳಿಂದ ಇಲ್ಲಿಯವರೆಗೆ ಒಬ್ಬ ಟ್ಯಾಂಕರ್ ಮಾಲಿಕರಿಗೆ ಪುರಸಭೆ ಸುಮಾರು 5 ಲಕ್ಷದಷ್ಟು ಅಂದರೆ ಒಟ್ಟು 50 ಲಕ್ಷಕ್ಕೂ ಅಧಿಕ ಹಣ ಟ್ಯಾಂಕರ್ ಮಾಲಿಕರಿಗೆ ಪಾವತಿಸಬೇಕಾಗಿದೆ. ಡಿಸೆಲ್, ಡ್ರೈವರ್ ವೇತನ ಮತ್ತು ನೀರಿನ ಬಿಲ್ ಸೇರಿ ಇಲ್ಲಿಯವರಿಗೆ ಲಕ್ಷಾಂತರ ರೂಪಾಯಿ ಮುಂಗಡ ಹಾಕಿದ್ದೇವೆ. ಬಿಡಿಕಾಸು ನೀಡದಿರುವದರಿಂದ ನಾವೇಲ್ಲರೂ ಆರ್ಥಿಕ ಮುಗ್ಗಟ್ಟಿನಲಿದ್ದು, ಸಾಯುವ ಹಂತಕ್ಕೆ ತಲುಪಿದ್ದೇವೆ. ಟ್ರ್ಯಾಕ್ಟರ್‍ಗಳ ಬ್ಯಾಂಕ್ ಕಂತುಗಳನ್ನು ತುಂಬಿಲ್ಲ. ಯಾವಾಗ ಜಪ್ತಿಯಾಗುತ್ತದೆ ಎನ್ನುವ ಆತಂಕದಲ್ಲೇ ಕಾಲ ಕಳೆಯುತ್ತಿದ್ದೇವೆ. ಒಂದು ವೇಳೆ ಆದಷ್ಟು ಬೇಗನೇ ಬಿಲ್ ಪಾವತಿಸಲು ಪುರಸಭೆ ಮುಂದಾಗದಿದ್ದರೆ ಸಾಮೂಹಿಕ ಆತ್ಮಹತ್ಯೆಗೆ ಶರಣಾಗುತ್ತೇವೆ ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಶರಣಪ್ಪ ಚಳಗೇರಿ, ಭೀಮಣ್ಣ ತಳವಾರ, ಹನಮಂತಪ್ಪ ಬೋಟೆ, ಶಿವನಗೌಡ ಪಾಟೀಲ, ಶಿವಪುತ್ರಪ್ಪ ಬಳೋಟಗಿ, ವೇಂಕಟೇಶ ಬಂಕದ, ಕಲ್ಲಪ್ಪ ರಾಮಜೀ, ಹುಸೇನಸಾಬ ನಿಶಾನದಾರ ಸೇರಿದಂತೆ ಇತರರು ಇದ್ದರು.

loading...