ಡಯಾಲಿಸಿಸ್‌ ಘಟಕಕ್ಕೆ ಚಾಲನೆ ನೀಡಿದ ಅಧ್ಯಕ್ಷೆ ಶಾರದಾ

0
71

ಕನ್ನಡಮ್ಮ ಸುದ್ದಿ-ಕುಮಟಾ: ಖಾಸಗಿ ಆಸ್ಪತ್ರೆಗಳಲ್ಲಿ ಡಯಾಲಿಸಿಸ್‌ ಪ್ರಕ್ರಿಯೆ ತುಂಬಾ ದುಬಾರಿಯಾಗಿದ್ದು, ಇದನ್ನು ಮನಗಂಡಿರುವ ರಾಜ್ಯ ಸರಕಾರ ಜನರಿಗೆ ಉಚಿತ ಆರೋಗ್ಯ ಸೌಲಭ್ಯ ದೊರಕಿಸಿಕೊಡಲು ಸರಕಾರಿ ಆಸ್ಪತ್ರೆಗಳಲ್ಲಿ ಡಯಾಲಿಸಿಸ್‌ ಘಟಕಗಳನ್ನು ಪ್ರಾರಂಭಿಸುತ್ತಿರುವುದು ಬಡವರಿಗೆ ಅತ್ಯಂತ ಪ್ರಯೋಜನಕಾರಿಯಾಗಿದೆ ಎಂದು ಶಾಸಕಿ ಹಾಗೂ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷೆ ಶಾರದಾ ಮೋಹನ ಶೆಟ್ಟಿ ಹೇಳಿದರು.
ಅವರು ಸೋಮವಾರ ಪಟ್ಟಣದ ಸರಕಾರಿ ಆಸ್ಪತ್ರೆಯಲ್ಲಿ ಡಯಾಲಿಸಿಸ್‌ ಘಟಕಕ್ಕೆ ಚಾಲನೆ ನೀಡಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಬಡವರನ್ನು ಹೆಚ್ಚಾಗಿಕಾಡಿಸುತ್ತಿರುವ ಕಿಡ್ನಿ ಸಮಸ್ಯೆ ಕಳವಳಕಾರಿ ಸಂಗತಿಯಾಗಿದ್ದು, ಜೀವನ ಕಳೆದುಕೊಳ್ಳುವ ಆತಂಕದಲ್ಲಿರುವ ಕಿಡ್ನಿ ಕಾಯಿಲೆ ಪೀಡಿತರಿಗೆ ಡಯಾಲಿಸಿಸ್‌ ಬದುಕಿನ ಆಶಾಕಿರಣ ಮೂಡಿಸುತ್ತಿದೆ.
ಡಾ ಪಾಂಡುರಂಗ ದೇವಾಡಿಗ ಪ್ರಸ್ತಾವಿಕ ಮಾತನಾಡಿ, ಮನುಷ್ಯನನ್ನು ಜೀವನ ಪರ್ಯಂತ ಕಾಡುವ ಸಕ್ಕರೆ ಕಾಯಿಲೆ, ರಕ್ತದೊತ್ತಡ ಕಾಯಿಲೆಗಳಿಂದ ಕೆಲವೊಮ್ಮೆ ಕಿಡ್ನಿಯ ಮೇಲೆ ವ್ಯತರಿಕ್ತ ಪರಿಣಾಮ ಉಂಟಾಗಿ ಕಿಡ್ನಿಯ ಸಹಜ ಪ್ರಕ್ರಿಯೆಯಲ್ಲಿ ಹಿನ್ನಡೆ ಉಂಟಾಗಿ ಅದರ ಕಾರ್ಯ ಸ್ಥಗಿತಗೊಳ್ಳುತ್ತದೆ. ಅಂತಹವರು ಡಯಾಲಿಸಿಸ್‌ ಮಾಡಿಕೊಳ್ಳುವುದು ಅನಿವಾರ್ಯವಾಗುತ್ತದೆ ಎಂದರು.
ತಾಲೂಕಾ ಆರೋಗ್ಯಾಧಿಕಾರಿ ಡಾ ಆಜ್ಞಾ ನಾಯಕ ಸ್ವಾಗತಿಸಿದರು. ಡಾ ಕೃಷ್ಣಾನಂದ ಟಿ ಎಸ್‌, ಆಸ್ಪತ್ರೆಯ ರಕ್ಷಾ ಸಮಿತಿಯ ಸದಸ್ಯರಾದ ಅನಿತಾ ಮಾಪಾರಿ, ಸಚಿನ್‌ ನಾಯ್ಕ, ಮನೋಜ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ವಿ ಎಲ್‌ ನಾಯ್ಕ, ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ತಾರಾ ಗೌಡ, ಡಯಾಲಿಸಿಸ್‌ ಘಟಕದ ಅಶೋಕ ನಾಯ್ಕ ಹಾಗೂ ಆಸ್ಪತ್ರೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

loading...