ದಕ್ಷಿಣ ಕೊರಿಯಾದಲ್ಲಿ ಸಂಭವಿಸಿದ ಭೀಕರ ಬೆಂಕಿ ದುರಂತ 42 ಮಂದಿ ಸಾವು

0
59

ಸಿಯೋಲ್-ದಕ್ಷಿಣ ಕೊರಿಯಾ ಆಸ್ಪತ್ರೆಯೊಂದರಲ್ಲಿ ಇಂದು ಸಂಭವಿಸಿದ ಭೀಕರ ಅಗ್ನಿ ಆಕಸ್ಮಿಕದಲ್ಲಿ 42 ಮಂದಿ ದುರಂತ ಸಾವಿಗೀಡಾಗಿದ್ದು, 70ಕ್ಕೂ ಹೆಚ್ಚು ಜನರು ತೀವ್ರ ಗಾಯಗೊಂಡಿದ್ದಾರೆ.  ಏಷ್ಯಾದ ನಾಲ್ಕನೇ ಬೃಹತ್ ಆರ್ಥಿಕ ಪ್ರಗತಿಯ ದೇಶವಾದ ಕೊರಿಯಾದಲ್ಲಿ ಒಂದು ತಿಂಗಳಲ್ಲಿ ಸಂಭವಿಸಿದ ಎರಡನೇ ಘೋರ ಅಗ್ನಿ ಅನಾಹುತ ಇದಾಗಿದೆ. ದಕ್ಷಿಣ ಕೊರಿಯಾದ ಮಿರ್ಯಾಂಗ್‍ನ ಆರು ಅಂತಸ್ತುಗಳ ಸೆಜೊಂಗ್ ನರ್ಸಿಂಗ್ ಹೋಂ ಮತ್ತು ಆಸ್ಪತ್ರೆಯಲ್ಲಿ ಈ ಭೀಕರ ಬೆಂಕಿ ಅವಘಡ ಸಂಭವಿಸಿದೆ. ಈ ದುರ್ಘಟನೆಯಲ್ಲಿ 42 ಮಂದಿ ಮೃತಪಟ್ಟು, 74 ಜನರಿಗೆ ತೀವ್ರ ಗಾಯಗಳಾಗಿವೆ. ಇವರಲ್ಲಿ 13 ಜನರ ಸ್ಥಿತಿ ಶೋಚನೀಯವಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕವಿದೆ ಎಂದು ರಾಷ್ಟ್ರೀಯ ಅಗ್ನಿ ಶಾಮಕ ಸಂಸ್ಥೆಯ ಉನ್ನತಾಧಿಕಾರಿಯೊಬ್ಬರು ಹೇಳಿದ್ದಾರೆ.

ತುರ್ತು ಚಿಕಿತ್ಸಾ ಕೊಠಡಿಯಲ್ಲಿ ಹಠಾತ್ ಬೆಂಕಿ ಕಾಣಿಸಿಕೊಂಡಿದ್ದನ್ನು ಇಬ್ಬರು ನರ್ಸ್‍ಗಳು ಗಮನಿಸಿದರು. ಅವರು ಸಂಬಂಧಪಟ್ಟವರಿಗೆ ಮಾಹಿತಿ ನೀಡುವಷ್ಟರಲ್ಲೇ ಕಟ್ಟಡದ ಇತರ ಭಾಗಗಳಿಗೂ ಅಗ್ನಿಯ ಕೆನ್ನಾಲಗೆ ತೀವ್ರವಾಗಿ ವ್ಯಾಪಿಸಿತು. ಈ ದುರಂತಕ್ಕೆ ಕಾರಣದ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ. ಬೆಂಕಿ ವ್ಯಾಪಿಸುತ್ತಿದ್ದಂತೆ ತೀವ್ರ ನಿಗಾ ಘಟಕದಲ್ಲಿದ್ದ 15 ರೋಗಿಗಳೂ ಸೇರಿದಂತೆ ಆಸ್ಪತ್ರೆಯಲ್ಲಿದ್ದ ಎಲ್ಲರನ್ನೂ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಯಿತು. ಈ ಅನಾಹುತ ಸಂಭವಿಸಿದಾಗ ಆಸ್ಪತ್ರೆಯಲ್ಲಿ ಸುಮಾರು 200 ಜನರಿದ್ದರು.

ದಕ್ಷಿಣ ಕೊರಿಯಾ ಅಧ್ಯಕ್ಷ ಮೂನ್ ಜಾಯಿ-ಇನ್ ಉನ್ನತಾಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿ ಪರಿಹಾರ ಕುರಿತು ಸಮಾಲೋಚನೆ ನಡೆಸಿದರು. ಕಳೆದ ತಿಂಗಳು ದಕ್ಷಿಣ ಕೊರಿಯಾ ಜೆಸಿಯೊನ್ ನಗರದ ಫಿಟ್ನೆಸ್ ಕ್ಲಬ್‍ನಲ್ಲಿ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ 29 ಮಂದಿ ಮೃತಪಟ್ಟು, ಅನೇಕರಿಗೆ ಸುಟ್ಟ ಗಾಯಗಳಾಗಿದ್ದನ್ನು ಸ್ಮರಿಸಬಹುದು.

loading...