ದರೋಡೆ ಪ್ರಕರಣ:ಇಬ್ಬರು ಆರೋಪಿತರ ಬಂಧನ,42 ಗ್ರ್ಯಾಂ. ಬಂಗಾರ ವಶ

0
28

ವಿಜಾಪುರ,21- ನಗರ ಹೊರವಲಯದ ಸೋಲಾಪುರ ರಸ್ತೆಯ ಪಂಚವಟಿ ಲೇಓಟ್ ನಿವಾಸಿ ವೀರನಗೌಡ ಪಾಟೀಲ ಎಂಬವರ ಮನೆಯಲ್ಲಿ ಕಳೆದ ತಿಂಗಳು ನಡೆದ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿತರನ್ನು ಆದರ್ಶನಗರ ಪೊಲೀಸರು ಗುರುವಾರ ಬಂಧಿಸಿದ್ದಾರೆ.

ಈ ವಿಷಯವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಜಯ್ ಹಿಲೋರಿ ಅವರು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ವಿಜಾಪುರ ಗುರುನಾನಕ ನಗರದ ಮುಖೇಶ ಅ ಮುಕ್ಕಣ್ಣ ದುರ್ಗಪ್ಪ ಕೊಂಚಿಕೊರವಾರ ಹಾಗೂ ಬಾಠ ಕಾಲೋನಿಯ ಜುಗನು ಜಪಾನ ಬಾಗಡೆ ಬಂಧಿತ ಆರೋಪಿತರಾಗಿದ್ದಾರೆ. ಈ ಪ್ರಕರಣದ ಇನ್ನಿಬ್ಬರು ಪ್ರಮುಖ ಆರೋಪಿತರು ಪರಾರಿಯಾಗಿದ್ದು, ಅವರನ್ನೂ ಸಹ ಶೀಘ್ರವೇ ಬಂಧಿಸಲಾಗುವುದು ಎಂದು ಅವರು ಹೇಳಿದರು.

ಕಳೆದ ತಿಂಗಳು 22 ರಂದು ಬೆಳಗಿನ ಜಾವ 2 ಗಂಟೆ ಸುಮಾರಿಗೆ ಪಂಚವಟಿ ಲೇಓಟ್ನ ವೀರನಗೌಡ ಪಾಟೀಲ ಎಂಬವರ ಮನೆಯ ಬಾಗಿಲು ಮುರಿದು ಒಳಗೆ ನುಗ್ಗಿದ ದರೋಡೆಕೋರರು ಮನೆಯವರಿಗೆ ಹೆದರಿಸಿ 110 ಗ್ರ್ಯಾಂ. ಬಂಗಾರವನ್ನು ದರೋಡೆ ಮಾಡಿಕೊಂಡು ಹೋಗಿದ್ದನ್ನು ಇಲ್ಲಿ ಸ್ಮರಿಸಬಹುದು.

ಬಂಧಿತ ಆರೋಪಿತರು ಜಮಖಂಡಿಯಲ್ಲ್ಲಿ ನಡೆದ ಒಂದು ಮನೆ ದರೋಡೆ ಪ್ರಕರಣದಲ್ಲಿಯೂ ಭಾಗಿಯಾಗಿರುವುದು ತನಿಖೆಯಿಂದ ತಿಳಿದುಬಂದಿದೆ. ಬಂಧಿತ ಆರೋಪಿತರಿಂದ ದರೋಡೆ ಕೃತ್ಯಕ್ಕೆ ಬಳಸಿದ ಇಂಡಿಕಾ ಕಾರು, ರಾಡ್, ಚಾಕು, ಮಾರ್ತುಲ್, ಸ್ವೇಟರ್, ಮಂಕಿಕ್ಯಾಪ್ ಸೇರಿದಂತೆ 42 ಗ್ರ್ಯಾಂ. ಬಂಗಾರವನ್ನು ವಶಪಡಿಸಿಕೊಳ್ಳಲಾಗಿದೆ. ಈ ಪ್ರಕರಣದಲ್ಲಿ ಅಂತಾರಾಜ್ಯ ಆರೋಪಿತರ ಕೈವಾಡವಿದ್ದ ಬಗ್ಗೆ ಮಾಹಿತಿ ಬಂದಿದೆ ಎಂದು ಅವರು ತಿಳಿಸಿದರು.

ಆದರ್ಶನಗರ ಪೊಲೀಸ್ ಠಾಣೆ ವ್ಯಾಪ್ತಿಯ ಕಾಳಿಕಾ ನಗರದಲ್ಲಿ ಮಂಗಳವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ  ಆದರ್ಶನಗರ ಪಿಎಸ್ಐ ಶಕೀಲಅಹ್ಮದ ಅಂಗಡಿ ಹಾಗೂ ಸಿಬ್ಬಂದಿಗಳಾದ ಮಾಳೇಗಾಂವ್, ಸೊನ್ನದ, ಬೆಳಗಲಿ ಅವರು ಗಸ್ತು ಕರ್ತವ್ಯದಲ್ಲಿದ್ದಾಗ ಕಾಳಿಕಾನಗರ ಬಡಾವಣೆಯ ರಸ್ತೆಯಲ್ಲಿ ಇಂಡಿಕಾ ಕಾರು ನಿಂತಿತ್ತು. ಆ ಕಾರಿನತ್ತ ಹೋಗುವಷ್ಟರಲ್ಲಿ ನಾಲ್ಕು ಜನ ಕಾರಿನಿಂದ ಇಳಿದು ಹೋದರು. ಇಬ್ಬರು ಕಾರಿನಲ್ಲಿ ಕುಳಿತಿದ್ದು ಕಂಡು ಸಂಶಯ ಬಂದು ವಾಹನದಲ್ಲಿದ್ದವರಿಗೆ ವಾಹನದ ದಾಖಲಾತಿಗಳ ಬಗ್ಗೆ ವಿಚಾರಿಸಿದಾಗ ಅವರ ಬಳಿ ಯಾವುದೇ ದಾಖಲಾತಿಗಳು ಇರದೇ ಇರುವ ಕಾರಣ ಅವರನ್ನು ಠಾಣೆಗೆ ಕರೆದುಕೊಂಡು ಹೋಗಿ ವಿವರವಾಗಿ ವಿಚಾರಿಸಿದಾಗ ಅವರು ತಮ್ಮ ಹೆಸರು ಮುಖೇಶ ಕೊಂಚಿಕೊರವಾರ ಹಾಗೂ ಜುಗನು ಬಾಗಡೆ ಎಂದು ಹೇಳಿಕೊಂಡರಲ್ಲದೇ ಆದರ್ಶನಗರ ಠಾಣೆ ವ್ಯಾಪ್ತಿಯ ಪಂಚವಟಿ ಲೇ-ಓಟ್ನಲ್ಲಿ ಒಂದು ಮನೆ ಹಾಗೂ ಜಮಖಂಡಿಯಲ್ಲಿ ಒಂದು ಮನೆ ದರೋಡೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾರೆ ಎಂದು ಎಸ್ಪಿ ಹಿಲೋರಿ ವಿವರಿಸಿದರು.

ಈ ಪ್ರಕರಣಕ್ಕೆ ಸಂಬಂಧಿಸಿದ ಇನ್ನುಳಿದ ಆರೋಪಿತರನ್ನು ಬಂಧಿಸಲು ಎಎಸ್ಪಿ ಆರ್. ಚೇತನ್ ಅವರ ನೇತೃತ್ವದಲ್ಲಿ ನಾಲ್ಕು ತಂಡಗಳನ್ನು ರಚಿಸಲಾಗಿದ್ದು, ತಪಾಸಣಾ ಕಾರ್ಯ ಮುಂದುವರೆದಿದೆ ಎಂದು ಅವರು ತಿಳಿಸಿದರು.

ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಫ್.ಎ.ಟ್ರಾಸ್ಗರ್, ಎಎಸ್ಪಿ ಆರ್. ಚೇತನ ಹಾಗೂ ಇನ್ನಿತರ ಪೊಲೀಸ್ ಅಧಿಕಾರಿಗಳು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

 

loading...

LEAVE A REPLY

Please enter your comment!
Please enter your name here