ದ್ವಿಪಥ ರಸ್ತೆ ಕಾಮಗಾರಿಗೆ ಗ್ರಹಣ: ವಿದ್ಯಾರ್ಥಿಗಳಿಗೆ ತೊಂದರೆ

0
4

ಕನ್ನಡಮ್ಮ ಸುದ್ದಿ-ನರೇಗಲ್ಲ: ಪಟ್ಟಣದ ಬಸ್ ನಿಲ್ದಾಣದಿಂದ ಅಬ್ಬಿಗೇರಿ ರಸ್ತೆಯ ಅನ್ನದಾನೇಶ್ವರ ಶಿಕ್ಷಣ ಸಂಸ್ಥೆಯ ವರೆಗಿನ ದ್ವಿಪಥ ರಸ್ತೆ ಕಾಮಗಾರಿಗೆ ಗ್ರಹಣ ಹಿಡಿದಿದ್ದು, ಈ ಮಾರ್ಗವಾಗಿ ದಿನನಿತ್ಯ ಸಂಚರಿಸುವ ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುತ್ತಿದೆ.
ನರೇಗಲ್ಲ ಪಟ್ಟಣದ ಹೊಸ ಬಸ್ ನಿಲ್ದಾಣದಿಂದ ಅನ್ನದಾನೇಶ್ವರ ಶಿಕ್ಷಣ ಸಂಸ್ಥೆಯ ವರೆಗಿನ 1.425 ಕಿ.ಮೀ ಉದ್ದದ ದ್ವಿಪಥ ರಸ್ತೆ ನಿರ್ಮಾಣಕ್ಕೆ ಲೋಕೋಪಯೋಗಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಉಪ ವಿಭಾಗದ ವತಿಯಿಂದ ಸುಮಾರು 2 ಕೋಟಿ ವೆಚ್ಚದಲ್ಲಿ ದ್ವಿಪಥ ರಸ್ತೆ ಕಾಮಗಾರಿಗೆ ಅಂದಿನ ಶಾಸಕ ಜಿ.ಎಸ್. ಪಾಟೀಲ ಫೆ.2 ರಂದು ಭೂಮಿ ಪೂಜೆ ಮಾಡಿದ್ದರು. ಕಳೆದ 8 ತಿಂಗಳ ಹಿಂದೆ ರಸ್ತೆ ಕಾಮಗಾರಿಗೆ ಭೂಮಿ ಪೂಜೆಯಾದರೂ ಸಹ ಶೇ.20 ರಷ್ಟು ಕಾಮಗಾರಿಯಾಗದೇ ನೆನೆಗುದಿಗೆ ಬಿದ್ದಿದ್ದು, ಕಾಮಗಾರಿಗೆ ಗ್ರಹಣ ಹಿಡಿದಂತಾಗಿದೆ. ಕಾಮಗಾರಿಗಾಗಿ ರಸ್ತೆ ಅಗೆದು 8ತಿಂಗಳು ಕಳೆದಿದೆ. ರಸ್ತೆ ಅಗೆಯುವ ಸಂದರ್ಭದಲ್ಲಿ ಹಲವು ಮರಗಳು ಹಾಗೂ ವಿದ್ಯುತ್ ಕಂಬಗಳನ್ನು ತೆರವುಗೊಳಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಕಂಬಗಳನ್ನು ಸ್ಥಳಾಂತರಿಸಲು ಹೆಸ್ಕಾಂ ಸ್ಪಂದಿಸುತ್ತಿಲ್ಲ. ಕಂಬಗಳ ಸ್ಥಳಾಂತರಕ್ಕೆ ಲೋಕಪಯೋಗಿ ಇಲಾಖೆಯಿಂದ ಈಗಾಗಲೇ ಹಣ ಪಾವತಿಸಲಾಗಿದ್ದು, ಕಂಬಗಳ ಸ್ಥಳಾಂತರವಾಗಿಲ್ಲ. ಅಲ್ಲದೆ, ಮರಗಳ ತೆರವಿಗೆ ಪರಿಸರವಾದಿಗಳ ತಕರಾರು ತೆಗೆದಿದ್ದರಿಂದ ಅರಣ್ಯ ಇಲಾಖೆ ಮರ ಕಡಿಯಲು ಅನುಮತಿ ನೀಡುತ್ತಿಲ್ಲ ಇದರಿಂದಾಗಿ ರಸ್ತೆ ಕಾಮಗಾರಿ ನೆನೆಗುದಿಗೆ ಬಿದ್ದಿದೆ. ಈ ರಸ್ತೆ ಮಾರ್ಗವಾಗಿ ದಿನಿತ್ಯ ಸಾವಿರಾರು ವಿದ್ಯಾರ್ಥಿಗಳು ಸಾರ್ವಜನಿಕರು ಸಂಚರಿಸುತ್ತಿದ್ದು ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದೆ.
ದ್ವಿಪಥ ರಸ್ತೆ ಕಾಮಗಾರಿಗಾಗಿ ರಸ್ತೆಯನ್ನು ಅಗೆದು ಕೈಬಿಡಲಾಗಿದ್ದು, ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದೆ. ಕೇಲವಡೆ ಕಡಿ ಹಾಕಿ ಬಿಡಲಾಗಿದ್ದು, ಪಾದಚಾರಿಗಳು ನಡೆದುಕೊಂಡು ಹೋಗದ ಪರಿಸ್ಥಿತಿ ನಿರ್ಮಾಣವಾಗಿದೆ. ದ್ವಿಚಕ್ರ, ತ್ರಿಚಕ್ರ ವಾಹನಗಳ ಓಡಾಟ ಹೆಚ್ಚಾಗಿದ್ದು, ರಸ್ತೆ ಕಾಮಗಾರಿಗೆ ಹಾಕಲಾಗಿರುವ ಕಡಿಗಳು ವಾಹನಗಳ ಚಕ್ರಕ್ಕೆ ಸಿಲುಕಿ ಸಿಡುದು ಬಡೆಯುವ ಭಿತಿಯಲ್ಲಿ ಸಂಚರಿಸಬೇಕಾಗಿದೆ. ಅನೇಕ ದ್ವಿಚಕ್ರ ವಾಹನ ಸವಾರರು ಬೈಕ್ ಸ್ಕಿಡ್ ಆಗಿ ಬಿದ್ದು ಗಾಯಗೊಂಡ ಘಟನೆಗಳು ಜರುಗಿವೆ. ಆದ್ದರಿಂದ ಕಾಮಗಾರಿಯನ್ನು ಆದಷ್ಟು ಬೇಗನೆ ಪೂರ್ಣಗೊಳಿಸಿ ಸಂಚಾರ ಸುಗಮಗೊಳಿಸಬೇಕು ಎಂದು ಸಾರ್ವಜನಿಕರು ಆಗ್ರಸಿದ್ದಾರೆ. ನರೇಗಲ್ಲ ದ್ವಿಪಥ ರಸ್ತೆ ಕಾಮಗಾರಿಯ ಅಂದಾಜು ಪತ್ರಿಕೆಯ ಪರೀಕ್ಷರಣೆ ಕೈಗೊಳ್ಳಲಾಗಿದ್ದು, ಈ ಹಿಂದಿನ ಅಂದಾಜು ಪ್ರತಿಯ ಮೊತ್ತಗಿಂತ ಹೆಚ್ಚಿನ ಮೊತ್ತದ ಹೊಸ ಪ್ರಸ್ತಾವನೆ ಕಳುಹಿಸಲಾಗಿದೆ. ನೂತನ ಅಂದಾಜು ಪತ್ರಿಕೆಗೆ ಒಪ್ಪಿಗೆ ಸಿಕ್ಕ ನಂತರ ಕಾಮಗಾರಿ ಪ್ರಾರಂಭಿಸಲಾಗುವುದು. 13 ಮರಗಳನ್ನು ಕಡಿಯುವ ಅನಿವಾರ್ಯತೆ ಇದ್ದು, 9ಲಕ್ಷ ರೂ.ಗಳನ್ನು ಅರಣ್ಯ ಇಲಾಖೆಗೆ ಜಮೆ ಮಾಡಲಾಗುವುದು. ವಿದ್ಯುತ್ ಕಂಬಗಳ ಸ್ಥಳಾಂತರಕ್ಕೆ ಹೆಸ್ಕಾಂ ಅಧಿಕಾರಿಗಳಿಗೆ ತಿಳಿಸಲಾಗಿದೆ. ಇನ್ನೊಂದು ವಾರದಲ್ಲಿ ರಸ್ತೆ ಕಾಮಗಾರಿ ಪುನಃ ಆರಂಭವಾಗಿ ಆದಷ್ಟು ಬೇಗನೆ ಕಾಮಗಾರಿ ಪೂರ್ಣಗೊಳಿಸಲಾಗುವುದು. ಕೆ.ವಿ. ಹದ್ಲಿ ಎಇಇ ಲೋಕಪಯೋಗಿ ಇಲಾಖೆ ರೋಣ ನರೇಗಲ್ಲನ ಬಹು ದಿನಗಳ ಬೆಡಿಕೆಯಾದ ದ್ವಿಪಥ ರಸ್ತೆ ಕಾಮಗಾರಿ ಪ್ರಾರಂಭವಾಗಿ 8ತಿಂಗಳು ಕಳೆದರೂ ಕಾಮಗಾರಿ ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ.
ಕಾಮಗಾರಿ ಪ್ರಾರಂಭದಲ್ಲಿ ಸರಿಯಾದ ಯೋಜನೆಯಿಲ್ಲದ ಪರಿಣಾಮವಾಗಿ ಕಾಮಗಾರಿ ನೆನೆಗುದಿಗೆ ಬಿದ್ದಿದೆ. ರಸ್ತೆ ಕಾಮಗಾರಿಗೂ ಮುನ್ನ ವಿದ್ಯುತ್ ಕಂಬ ಹಾಗೂ ಮರಗಳನ್ನು ತೆರೆವು ಮಾಡಿಕೊಂಡು ಕಾಮಗಾರಿ ಪ್ರಾರಂಭಿಸಿದ್ದರೆ ಕಾಮಗಾರಿ ನೆನೆಗುದಿಗೆ ಬಿಳ್ಳುತ್ತಿರಲಿಲ್ಲ. ರಸ್ತೆ ಕಾಮಗಾರಿ ನೆನೆಗುದಿಗೆ ಬಿದ್ದರುವುದರಿಂದ ಈ ಮಾರ್ಗವಾಗಿ ಸಂಚರಿಸುವವರಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ಈಗಲಾದರೂ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ರಸ್ತೆ ಕಾಮಗಾರಿ ಪೂರ್ಣಗೊಳಿಸಲು ಮುಂದಾಗಬೇಕು ಎಂದು ಸ್ಥಳೀಯರಾದ ಹುಲಗಪ್ಪ ಬಂಡಿವಡ್ಡರ, ಪ್ರಕಾಶ ಅಮಾತಿಗೌಡ್ರ, ರಾಜೇಶ ಅಂಗಡಿ, ಶೇಖಪ್ಪ ಜುಟ್ಲ ಆಗ್ರಹಿಸಿದ್ದಾರೆ.

loading...