ನಗರಸಭೆಗೆ ಅನುದಾನ ಬಳಸಿಕೊಳ್ಳುವ ಯೋಗ್ಯತೆ ಇಲ್ಲ : ಜಜಾವೇ ಆರೋಪ

0
22

ಇಳಕಲ್‌: ಆಗದೇ ಇರುವ ಕಾಮಗಾರಿಗಳು ಪೂರ್ಣಗೊಂಡಿವೆ ಎಂದು ಹೇಳಿ ನಗರಸಭೆ ಹಣವನ್ನು ವೆಚ್ಚ ಮಾಡಿದೆ. ಇದನ್ನು ಸುಳ್ಳು ಎಂದು ವಾದಿಸುತ್ತಿರುವ ನಗರಾಧ್ಯಕ್ಷರು ಮತ್ತು ಮಾಜಿ ನಗರಾಧ್ಯಕ್ಷರು ಜಿಲ್ಲಾಡಳಿತದ ಸಮ್ಮುಖದಲ್ಲಿ ದಾಖಲೆಗಳ ಸಮೇತ ಬಹಿರಂಗ ಚರ್ಚೆಗೆ ಬರಲಿ ಎಂದು ಜನ ಜಾಗೃತಿ ವೇದಿಕೆ ಸವಾಲು ಹಾಕಿದೆ.

ನಗರಸಭೆಯಲ್ಲಿ 2013-14ಕ್ಕಿಂತ ಮುನ್ನ ಆಡಳಿತ ನಡೆಸಿದ ಬಿಜೆಪಿ ಆಡಳಿತ ಮಂಡಳಿ ಸಾಕಷ್ಟು ಹಣವನ್ನು ದುರುಪಯೋಗ ಮಾಡಿಕೊಂಡಿತ್ತು. ನಂತರ ಅಧಿಕಾರ ನಡೆಸುತ್ತಿರುವ ಕಾಂಗ್ರೆಸ್‌ ಆಡಳಿತ ಮಂಡಳಿಗೆ ನಗರಸಭೆಗೆ ಬಂದಿರುವ ಅನುದಾನವನ್ನು ಬಳಸಿಕೊಳ್ಳುವ ಯೋಗ್ಯತೆಯೇ ಇಲ್ಲವಾಗಿದೆ. ಅಷ್ಟೇ ಅಲ್ಲ ಬಳಸಿಕೊಂಡ ಅನುದಾನವನ್ನು ಮಾಡದೇ ಇರುವ ಬಹುಪಾಲು ಕಾಮಗಾರಿಗಳ ಹೆಸರಲ್ಲೇ ವೆಚ್ಚ ಮಾಡಲಾಗಿದೆ. ಈ ಬಗ್ಗೆ ಬಹಿರಂಗ ಚರ್ಚೆಯಾಗಲಿ ಎಂದು ವೇದಿಕೆಯ ಯಲ್ಲಪ್ಪ ಪೂಜಾರ, ಜಗದೀಶ ಸರಾಫ ಸುದ್ದಿಗಾರರಿಗೆ ತಿಳಿಸಿದರು.

ಈಗ ಚಾಲ್ತಿಯಲ್ಲಿರುವ ಕಾಮಗಾರಿಗಳು ಯಾವ ಯಾವ ವರ್ಷದ ಅನುದಾನದಡಿ ಕೈಗೊಳ್ಳಲಾಗಿದೆ ಎಂಬ ಮಾಹಿತಿ ಸಾರ್ವಜನಿಕರಿಗೆ ಗೊತ್ತಾಗಬೇಕು. ಮಾರ್ಗಸೂಚಿ ಪ್ರಕಾರ ಯಾವ ಕಾಮಗಾರಿಗಳೂ ನಡೆದಿಲ್ಲ. ಕಾಮಗಾರಿಗಳ ಸ್ಥಳದಲ್ಲಿ ಕಾಮಗಾರಿ ವಿವರದ ನಾಮಫಲಕವನ್ನು ಅಳವಡಿಸಬೇಕು. ಆದರೆ ಎಲ್ಲಿಯೂ ಈ ನಾಮಫಲಕ ಕಾಣುತ್ತಿಲ್ಲ. ಪ್ರಾಮಾಣಿಕರಾಗಿದ್ದರೆ ಇವರು ಹೀಗೆ ಮಾಡುತ್ತಿದ್ದರೆ? ಎಂದು ಅವರು ಪ್ರಶ್ನಿಸಿದರು. ರಸ್ತೆ ಕಾಮಗಾರಿಗಳನ್ನು ವೈಜ್ಞಾನಿಕವಾಗಿ ಮಾಡುವಂತೆ 2014ರಿಂದಲೂ ಕೇಳಿಕೊಳ್ಳಲಾಗುತ್ತಿದೆ.

ಆದರೆ ಹಣವನ್ನು ಎತ್ತಿ ಹಾಕುವ ದುರುದ್ದೇಶಕ್ಕಾಗಿಯೇ ತರಾತುರಿಯಲ್ಲಿ ಕಾಮಗಾರಿಗಳನ್ನು ಮುಗಿಸಿ ಹಣ ಎತ್ತಿ ಹಾಕಲಾಗಿದೆ. ಇದೀಗ ನಗರಸಭೆಗೆ ಮತ್ತೆ ಹೊಸದಾಗಿ 25 ಕೋಟಿ ರೂಪಾಯಿಗಳ ಅನುದಾನ ಬಂದಿದ್ದು, ಅದರ ಬಳಕೆಗೆ ಕ್ರಿಯಾ ಯೋಜನೆ ತಯಾರಿಸಲಾಗಿದೆ ಎಂದು ಅಧ್ಯಕ್ಷರು ಹೇಳಿರುವುದು ಹಾಸ್ಯಾಸ್ಪದ ಸಂಗತಿಯಾಗಿದೆ.

ಯಾಕೆಂದರೆ 14ನೇ ಹಣಕಾಸು ಯೋಜನೆಯಲ್ಲಿನ 2015-16, 2016-17ನೇ ಸಾಲಿಗಾಗಿರುವ ಅನುದಾನದ ಬಳಕೆಗೆ ಕಾಲಮಿತಿಯೊಳಗೆ ಕ್ರಿಯಾ ಯೋಜನೆ ರೂಪಿಸಿಲ್ಲ. ಇದೀಗ ಮತ್ತೆ 25 ಕೋಟಿ ರೂ.,ಗಳ ಅನುದಾನ ಬಳಕೆಗೆ ಏನೇನು ಕ್ರಿಯಾ ಯೋಜನೆ ರೂಪಿಸಿದ್ದಾರೋ ಆ ದೇವರಿಗೇ ಗೊತ್ತು. 2013-14ರಿಂದ ಇಲ್ಲಿಯವರೆಗೆ ಬಂದಿರುವ ಅನುದಾನದಿಂದ ಯಾವ ಯಾವ ಕಾಮಗಾರಿಗಳೆ ಎಷ್ಟೆಷ್ಟು ಹಣ ಬಳಸಿಕೊಳ್ಳಲಾಗಿದೆ ಎಂಬ ವಿಷಯಕ್ಕೆ ನಗರಸಭೆ ಇಲ್ಲಿಯವರೆಗೂ ಮಾಹಿತಿ ಕೊಟ್ಟಿಲ್ಲ. ಕಾಮಗಾರಿಗಳ ನೆಪದಲ್ಲಿ ಹಣ ದೋಚುವುದೇ ಇವರ ಕೆಲಸವಾಗಿದೆ ಎಂದು ಪೂಜಾರ, ಸರಾಫ ವಿವರಿಸಿದರು.

2013-14ರಿಂದೀಚೆಗೆ ಇಲ್ಲಿಯತನಕ ನಡೆದಿರುವ ಎಲ್ಲ ಕಾಮಗಾರಿಗಳ ಗುಣಮಟ್ಟ ಮತ್ತು ದುರುಪಯೋಗವಾಗಿರುವ ಕೋಟ್ಯಂತರ ರೂ. ಹಣದ ಬಗ್ಗೆ ತನಿಖೆ ನಡೆಸುವಂತೆ ಈಗಾಗಲೇ ಜಿಲ್ಲಾಧಿಕಾರಿಗಳನ್ನು ಕೇಳಿಕೊಳ್ಳಲಾಗಿದೆ. ಜಿಲ್ಲಾಡಳಿತ ವೇದಿಕೆಯ ಬೇಡಿಕೆಗೆ ಸ್ಪಂದಿಸದೇ ಹೋದರೆ ಜಿಲ್ಲಾಡಳಿತದ ವಿರುದ್ಧ ಪ್ರತಿಭಟನೆ ನಡೆಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.

loading...

LEAVE A REPLY

Please enter your comment!
Please enter your name here