ನಗರಸಭೆ ಸಾಮಾನ್ಯ ಸಭೆ: ಕಾವೇರಿದ ಶೌಚಾಲಯ ದುರಸ್ತಿ ಚರ್ಚೆ

0
37

ಕನ್ನಡಮ್ಮ ಸುದ್ದಿ-ಕಾರವಾರ: ನಗರದ ಎಲ್ಲ ವಾರ್ಡುಗಳಲ್ಲಿರುವ ಸಾರ್ವಜನಿಕ ಶೌಚಾಲಯ ದುರಸ್ಥಿಗೆ ಆದಷ್ಟು ಶೀಘ್ರ ಕ್ರಮ ಕೈಗೊಳ್ಳಲಾಗುವುದು ಎಂದು ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ ಸದಸ್ಯರಿಗೆ ಭರವಸೆ ನೀಡಿದರು.
ಅವರು ಇಲ್ಲಿನ ನಗರಸಭೆಯ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದರು. ಸಭೆ ಆರಂಭವಾಗುತ್ತಿದ್ದಂತೆ, ಸಾರ್ವಜನಿಕ ಶೌಚಾಲಯ ರಿಪೇರಿ ಮಾಡುವಂತೆ ಆಗ್ರಹಿಸಿ ತಿಂಗಳುಗಳು ಕಳೆದರೂ ಕಾಮಗಾರಿ ಕೈಗೊಳ್ಳದ ಕುರಿತು ಸದಸ್ಯರು ಆಕ್ರೋಶ ವ್ಯಕ್ತ ಪಡಿಸಿದ ಸಂದರ್ಭದಲ್ಲಿ ಉತ್ತರಿಸಿದ ಅವರು, ಸಭೆ ಮುಗಿಯುತ್ತದ್ದಂತೆಯೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುವುದಾಗಿ ತಿಳಿಸಿದರು.
ಪೌರಾಯುಕ್ತ ಎಸ್‌.ಯೋಗೀಶ್ವರ ಪ್ರತಿಕ್ರಿಯಿಸಿ, ನಗರಸಭೆ ವ್ಯಾಪ್ತಿಯ ಎಲ್ಲ ಶೌಚಾಲಯಗಳ ಕಾಮಗಾರಿಗಾಗಿ ಟೆಂಡರ್‌ ಆಗಿದೆ. ಆದರೆ ಬೈತಖೋಲದಲ್ಲಿರುವ ಶೌಚಾಲಯದ ದುರಸ್ಥಿಯನ್ನು ಟೆಂಡರ್‌ ಹೊರತು ಪಡಿಸಿ ಇನ್ನೆರಡು ದಿನಗಳಲ್ಲಿ ಪೂರ್ಣಗೊಳಿಸಲಾಗುವುದು ಎಂದರು.
ಎನ್‌.ಎ. ಆಗಿರುವ ಜಾಗದಲ್ಲಿ ಮನೆ ನಿರ್ಮಿಸಿಕೊಂಡಿರುವವರ ಖಾತೆ ರಚಿಸಲು ಹಾಗೂ ಅಕ್ರಮವಾಗಿ ನಿರ್ಮಿಸಿಕೊಂಡಿರುವ ಮನೆಗಳನ್ನು ತೆರವುಗೊಳಿಸಲು ಸರಕಾರದಿಂದ ಆದೇಶ ಬಂದಿದೆ. ಈ ಬಗ್ಗೆ ಸರ್ವ ಸದಸ್ಯರ ಒಪ್ಪಿಗೆ ಬೇಕು ಎಂದು ಪೌರಾಯುಕ್ತರು ಸಭೆಯಲ್ಲಿ ತಿಳಿಸಿದರು. ಈ ಬಗ್ಗೆ ತೀವ್ರ ವಿರೋಧ ವ್ಯಕ್ತ ಪಡಿಸಿದ ಸದಸ್ಯರು ನಗರದಲ್ಲಿ ಅಕ್ರಮ ಕಟ್ಟಡಗಳನ್ನು ನಿರ್ಮಿಸಲಾಗಿದ್ದು, ಅವುಗಳ ಬಗ್ಗೆ ಕ್ರಮ ಕೈಗೊಳ್ಳದೇ ಬಡ ಜನರು ನಿರ್ಮಿಸಿಕೊಂಡ ಮನೆಗಳ ಮೇಲೆ ಕ್ರಮ ಕೈಗೊಳ್ಳುವುದು ಸರಿಯಲ್ಲ. ಅದರ ಬದಲಿಗೆ ಇಂತಹ ಮನೆಗಳನ್ನು ಸಕ್ರಮ ಮಾಡಿಕೊಳ್ಳಲು ಏನು ಮಾಡಬೇಕು ಎಂದು ಕೇಳಿ ಸರಕಾರಕ್ಕೆ ಪತ್ರ ಬರೆಯಿರಿ. ಈ ವಿಷಯಕ್ಕೆ ತಮ್ಮ ಅನುಮೋದನೆ ಇಲ್ಲ ಎಂದು ಸರ್ವ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷೆ ಲೀಲಾಬಾಯಿ ಠಾಣೇಕರ, ಸ್ಥಾಯಿ ಸಮಿತಿ ಅಧ್ಯಕ್ಷ ವಿಠ್ಠಲ ಸಾವಂತ ಇದ್ದರು.

loading...