ನನಗೆ ಕ್ಷೇತ್ರದ ಜನರ ಹಿತ ಮುಖ್ಯ: ಉಮೇಶ ಕತ್ತಿ

0
72
ಹುಕ್ಕೇರಿ 12: 35 ವರ್ಷಗಳ ಕಾಲ ನನ್ನ ಮೇಲೆ ವಿಶ್ವಾಸವಿಟ್ಟು ಚುನಾಯಿಸಿದ ಕ್ಷೇತ್ರದ ಮತದಾರರಿಗೆ ಈವರೆಗೆ ಯಾವುದೇ ಕೇಡು ಮಾಡಿಲ್ಲ, ಇನ್ನು ಮುಂದೆ ಅಂತಹ ಕೆಲಸ ಮಾಡುವುದು ಇಲ್ಲ ಜನಹಿತವೇ ನನಗೆ ಮುಖ್ಯ ಎಂದು ಶಾಸಕ ಉಮೇಶ ಕತ್ತಿ ಹೇಳಿದರು.ಇಲ್ಲಿನ ವಿಶ್ವರಾಜ್ ಕಲ್ಯಾಣ ಮಂಟಪದಲ್ಲಿ ಗುರುವಾರ ನಡೆದ ಬಿಜೆಪಿ ನವ ಶಕ್ತಿ ಸಮಾವೇಶ ಮತ್ತು ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ಈವರೆಗೆ ರಾಜ್ಯದಲ್ಲಿ ನನಗೆ ಅನೇಕ ಅಧಿಕಾರ ಹಾಗೂ ಸ್ಥಾನಮಾನಗಳನ್ನು ಒದಗಿಸಿಕೊಟ್ಟ ಜನತೆ ಉತ್ತಮ ಬದುಕು ಕಟ್ಟಿಕೊಡಬೇಕೆಂಬ ಉದ್ದೇಶದಿಂದ ಹಲವಾರು ಯೋಜನೆ ರೂಪಿಸಿದ್ದೇನೆ ಎಂದರು.ಹುಕ್ಕೇರಿ ತಾಲೂಕಿನ ಸಮUವರಿ ನನ್ನ ಕನಸಾಗಿದ್ದು, ಈಗಾಗಲೇ ಕೆರೆ ತುಂಬುವ ಯೋಜನೆ ಪೂರ್ಣಗೊಂಡಿದ್ದು, ಇನ್ನೂ ಕೆಲ ಕೆರೆಗಳನ್ನು ಸೇರ್ಪಡೆ ಮಾಡಿಸಲಾಗಿದೆ. ಅಡವಿಸಿದ್ದೇಶ್ವರ ಏತ ನೀರಾವರಿ, ಶಂಕರಲಿಂಗ ಏತ ನೀರಾವರಿ ಯೋಜನೆ ಮಂಜೂರಾತಿ ಹಂತದಲ್ಲಿವೆ. ಕಿತವಾಟ ಜಲಾಶಯಕ್ಕೆ ರಾಜ್ಯ ಸರಕಾರದ ಪಾಲು ತುಂಬಿಸುವ ಮೂಲಕ ಕ್ಷೇತ್ರದ ಜನತೆಗೆ ವರ್ಷವಿಡಿ ನೀರಾವರಿ ದೊರೆಕಿಸಿಕೊಡಬೇಕೆಂಬ ಏಕೈಕ ಉದ್ದೇಶ ತಮ್ಮದಾಗಿದೆ ಎಂದರು.ಮಾಜಿ ಸಂಸದ ರಮೇಶ ಕತ್ತಿ ಮಾತನಾಡಿ, ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಲು ಬಯಸಿರುವ ಮುಖಂಡ ಸುಮಾರು 10 ವರ್ಷ ಅವಧಿಯವರೆಗೆ ಕ್ಷೇತ್ರದಿಂದ ಏಕೆ ದೂರವಾಗಿದ್ದರೆಂಬುದನ್ನು ಮತದಾರರು ಹಾಗೂ ಅವರ ಸಮೀಪವರ್ತಿಗಳು ಅವರನ್ನು ಪ್ರಶ್ನಿಸಬೇಕು ಎಂದು ಕರೆಕೊಟ್ಟರು. 10 ವರ್ಷದ ಅವಧಿಯಲ್ಲಿ ಕ್ಷೇತ್ರಕ್ಕೆ ನಡೆದ ಎರಡು ಚುನಾವಣೆಯಲ್ಲಿ ಯಾಕೆ ಸ್ಪರ್ಧಿಸಲಿಲ್ಲ ಎಂದು ಹೆಸರಿಸದೇ ಪರೋಕ್ಷವಾಗಿ ಎ.ಬಿ.ಪಾಟೀಲರೊಗೆ ತಿರುಗೇಟು ನೀಡಿದ ಅವರು. ಹತ್ತು ವರ್ಷದ ಹಿಂದೆ ನಡೆದ ಚುನಾವಣೆಯಲ್ಲಿ ತಮ್ಮ ಸಹೋದರ ಉಮೇಶ ಕತ್ತಿ ವಿರುದ್ಧ ಸೋತ ಕಾಂಗ್ರೆಸ್ ಮುಖಂಡ ಕ್ಷೇತ್ರದಿಂದಲೇ ಕಣ್ಮರೆಯಾಗಿದ್ದರು. ಹೀಗಾಗಿ ಅವರೊಡನೆ ಗುರುತಿಸಿಕೊಂಡಿದ್ದ ಮುಖಂಡರು ಮತ್ತು ಕಾರ್ಯಕರ್ತರಿಗೆ ನಿರಾಸೆ ಆಗಿತ್ತು. ಅರ್ಧದಲ್ಲಿಯೇ ಕೈಕೊಟ್ಟು ಹೋಗುವ ಜಾಯಮಾನ ಎ.ಬಿ.ಪಾಟೀಲ ಅವರಿಗೆ ಸಲ್ಲುತ್ತದೆ ಎಂದು ಕತ್ತಿ ವ್ಯಂಗ್ಯವಾಡಿದರು.

ಮುಖಂಡ ಈರಣ್ಣಾ ಕಡಾಡಿ ಮಾತನಾಡಿ, ರಾಜ್ಯ ಸರ್ಕಾರದ ಬಹುತೇಕ ಸರಣಿ ಭಾಗ್ಯ ಯೋಜನೆಗಳು ವಿಫಲವಾಗಿವೆ. ಈ ಯೋಜನೆಗಳಲ್ಲಿ ಅಧಿಕಾರಿಗಳು ಮತ್ತು ಆಡಳಿತ ಪಕ್ಷದ ಸದಸ್ಯರು ಕೋಟ್ಯಂತರ ರೂ,ಗಳನ್ನು ನುಂಗಿ ಹಾಕಿದ್ದಾರೆ. ಐದು ವರ್ಷದಲ್ಲಿ ಕಾಂಗ್ರೆಸ್ ಸರ್ಕಾರ ಯಾವುದೇ ಅಭಿವೃದ್ಧಿ ಮಾಡದೇ ಸಾರ್ವಜನಿಕರ ತೆರಿಗೆ ಹಣವನ್ನು ಲೂಟಿ ಮಾಡುವಲ್ಲಿಯೇ ತಲ್ಲೀನವಾಗಿದೆ ಎಂದರು.

ಮಾಜಿ ಸಚಿವ ಶಶಿಕಾಂತ ನಾಯಿಕ, ಮುಖಂಡರಾದ ಅಪ್ಪಾಸಾಹೇಬ ಶಿರಕೋಳಿ, ಮಧುಕರ ನಲವಡೆ, ಬಸವರಾಜ ಮಟಗಾರ, ರಾಜೇಂದ್ರ ಪಾಟೀಲ, ಜಯಗೌಡ ಪಾಟೀಲ, ಮಹಾವೀರ ನಿಲಜಗಿ, ನಿಖಿಲ ಕತ್ತಿ, ಪರಗೌಡ ಪಾಟೀಲ, ಅಶೋಕ ಪಟ್ಟಣಶೆಟ್ಟಿ, ಅಶೋಕ ಚಂದಪ್ಪಗೋಳ ಮತ್ತಿತರರು ಉಪಸ್ಥಿತರಿದ್ದರು.

loading...