ನಾಮಫಲಕ ಅಳವಡಿಸಲು ಅಧಿಕಾರಿಗಳಿಗೆ ಸೂಚನೆ

0
51

ನಂಜುಂಡಪ್ಪ ವರದಿ ಅನುಷ್ಠಾನದ ಉನ್ನತಾಧಿಕಾರಿಗಳ ಸಭೆಯಲ್ಲಿ ಅಧ್ಯಕ್ಷ ಘೋರ್ಪಡೆ
ಬೆಳಗಾವಿ 20: ಜಿಲ್ಲೆಯ ಏಳು ತಾಲೂಕುಗಳು ಹಿಂದುಳಿದಿದ್ದು, ಇವುಗಳ ಸಮಗ್ರ ಅಭಿವೃದ್ಧಿಗಾಗಿ ಸರಕಾರ 2007-8 ರಿಂದ 2014-15 ರವರೆಗೆ ನೀಡಿರುವ ಅನುಧಾನದಲ್ಲಿ ಕೈಗೊಂಡ ಅಭಿವೃದ್ಧಿ ಕಾಮಗಾರಿಗಳು ಮುಗಿದ ಸ್ಥಳಗಳಲ್ಲಿ ಕಡ್ಡಾಯವಾಗಿ ನಾಮಫಲಕಗಳನ್ನು ಅಳವಡಿಸಬೇಕು ಎಂದು ಡಾ.ಡಿ.ಎಂ.ನಂಜುಂಡಪ್ಪ ವರದಿಗಳ ಶಿಫಾರಸ್ಸು ಹಾಗೂ ಅನುಷ್ಠಾನದ ಉನ್ನತಾಧಿಕಾರಿ ಸಮಿತಿಯ ಅಧ್ಯಕ್ಷ ವೆಂಕಟರಾವ್ ಘೋರ್ಪಡೆ ಅಧಿಕಾರಿಗಳಿಗೆ ಸೂಚಿಸಿದರು.
ಅವರು ಬುಧವಾರ ನಗರದ ಹೊಸ ಜಿಲ್ಲಾ ಪಂಚಾಯಿತಿ ಸಭಾ ಭವನದಲ್ಲಿ ನಡೆದ ಡಾ.ಡಿ.ಎಂ.ನಂಜುಂಡಪ್ಪ ವರದಿಗಳ ಶಿಫಾರಸ್ಸು ಹಾಗೂ ಅನುಷ್ಠಾನದ ಉನ್ನತಾಧಿಕಾರಿಗಳ ಸಭೆಯಲ್ಲಿ ಅಧ್ಯಕ್ಷೆತೆ ವಹಿಸಿ ಮಾತನಾಡಿದರು.
ರಾಜ್ಯದಲ್ಲಿ ಹಿಂದುಳಿದ 114 ತಾಲೂಕುಗಳಿದ್ದು, ಈ ತಾಲೂಕುಗಳ ಅಭಿವೃದ್ಧಿಗೆ 11272 ಕೋಟಿ ರೂ.ಬಿಡುಗಡೆಯಾಗಿದ್ದು, ಅದರಲ್ಲಿ 10338 ಕೋಟಿ ರೂ. ಖರ್ಚು ಮಾಡಲಾಗಿದೆ. ಅಲ್ಲದೇ ಜಿಲ್ಲೆಯ ಏಳು ತಾಲೂಕುಗಳಾದ ಅಥಣಿ, ಗೋಕಾಕ, ಸವದತ್ತಿ, ರಾಯಬಾಗ, ಬೈಲಹೊಂಗಲ, ರಾಮದುರ್ಗ ಹಾಗೂ ಹುಕ್ಕೇರಿಯಲ್ಲಿ 467 ಕೋಟಿ ರೂ ವೆಚ್ಚ ಮಾಡಲಾಗಿದೆ. ಕಾಮಗಾರಿ ಮುಗಿಸಿದ ಸ್ಥಳದಲ್ಲಿ ಸಮಗ್ರ ಮಾಹಿತಿ ಒಳಗೊಂಡ ನಾಮಫಲಕಗಳನ್ನು ಅಳವಡಿಸಿಲ್ಲ. ಇದರಿಂದ ಸಾರ್ವಜನಿಕರಿಗೆ ಮಾಹಿತಿ ಸಿಗುವುದಿಲ್ಲ. ಕಾರಣ ಕೆಲಸ ಮುಗಿದ ಸ್ಥಳದಲ್ಲಿ ಕಡ್ಡಾಯವಾಗಿ ನಾಮಫಲಕ ಅಳವಡಿಸೇಕು ಎಂದು ತಿಳಿಸಿದರು.
ಜಿಲ್ಲಾ ಪಂಚಾಯಿತಿಯ ಅಧಿಕಾರಿ ಎ.ಡಿ.ದೊಡಮನಿ ಮಾತನಾಡಿ, ಅಥಣಿ, ಗೋಕಾಕ, ಸವದತ್ತಿ, ರಾಯಬಾಗ, ಬೈಲಹೊಂಗಲ, ರಾಮದುರ್ಗ, ಹುಕ್ಕೇರಿ ತಾಲೂಕುಗಳಲ್ಲಿ 2007-08 ಸಾಲಿನಿಂದ 2014-15 ನೇ ಸಾಲಿನವರೆಗೆ ಆಸ್ತಿ ನಿರ್ಮಾಣ 5025.98 ರೂ, ಮೂಲಭೂತ ಸೌಕರ್ಯ ಹಾಗೂ ಸಂಪರ್ಕಕ್ಕೆ 22080.64 ರೂ. ಫಲಾನುಭವಿ ಪ್ರಾಯೋಜಿತ ಯೋಜನೆಗಳ 18485.02 ಕೋಟಿ ರೂ, ಸಾಮಥ್ರ್ಯ ವೃದ್ಧಿ ಮತ್ತು ತರಬೇತಿ ಕಾರ್ಯಕ್ರಮಕ್ಕೆ 1103.49 ರೂ.ಗಳ ವೆಚ್ಚದಲ್ಲಿ ಅಭಿವೃದ್ಧಿ ಕೆಲಸ ಮಾಡಲಾಗಿದೆ ಎಂದು ಸಭೆಯಲ್ಲಿ ಮಾಹಿತಿ ನೀಡಿದರು.
ವೆಂಕಟರಾವ್ ಘೋರ್ಪಡೆ ಮಾತನಾಡಿ, ರಾಜ್ಯದಲ್ಲಿಯೇ ಹೆಚ್ಚು ತಾಲೂಕುಗಳನ್ನು ಹೊಂದಿರುವ ದೊಡ್ಡ ಜಿಲ್ಲೆಯಾಗಿದೆ. ಕೃಷಿ, ಶಿಕ್ಷಣ, ತೋಟಗಾರಿಕೆ ಇಲಾಖೆ ಸೇರಿದಂತೆ 23 ವಿವಿಧ ಇಲಾಖೆಗಳ ಅಡಿಯಲ್ಲಿ ಅನೇಕ ಅಭಿವೃದ್ಧಿ ಕಾಮಗಾರಿಗಳನ್ನು ಮುಗಿಸಲಾಗಿದೆ. ಆದರೆ ಸವಿಸ್ತಾರವಾಗಿ ಮಾಹಿತಿ ನೀಡುವುದರ ಬದಲು ಸ್ಪಷ್ಟವಾಗಿ ಒಂದೇ ಪುಟದಲ್ಲಿ ಮಾಹಿತಿ ನೀಡಬೇಕು. ಅಲ್ಲದೇ ಅವಶ್ಯಕತೆ ಇರುವ ಮಾಹಿತಿಯನ್ನು ಮಾತ್ರ ಸರಕಾರಿ ವೆಬ್‍ಸೈಟ್‍ನಲ್ಲಿ ತಮ್ಮ ಕಾರ್ಯಗಳನ್ನು ನಮೂದಿಸಬೇಕು ಎಂದು ಸಲಹೆ ನೀಡಿದರು.
ಈ ವಿಶೇಷ ಅನುಧಾನದಲ್ಲಿ ಕೈಗೊಂಡಿರುವ ಕಾಮಗಾರಿಗಳು ಗುಣಮಟ್ಟದಿಂದ ಸರಿಯಾಗಿ ಅನುಷ್ಠಾನಗೊಂಡಿವೆ. ಕ್ರೀಯಾಯೋಜನೆ ತಯಾರಿಕೆ ಕಾಮಗಾರಿಗಳ ಅನುಷ್ಠಾನದಲ್ಲಿ ಜಿಲ್ಲೆಯ ಅಧಿಕಾರಿಗಳು ಕೆಲಸ ನಿರ್ವಹಿಸಿದ್ದಾರೆ. ಆದರೆ ಯಾರಾದರು ಕಾಮಗಾರಿ ನಡೆದ ಸ್ಥಳಕ್ಕೆ ಭೇಟಿ ನೀಡಿದರೆ ಈ ಕಾಮಗಾರಿ ಯಾವ ಯೋಜನೆಯಲ್ಲಿ ಕೈಗೊಳ್ಳಲಾಗಿದೆ ಎಂಬುದಕ್ಕೆ ನಾಮಫಲಕ ಅಳವಡಿಸಿದರೆ ಜನಪ್ರತಿನಿಧಿಗಳಿಗೆ ಹಾಗೂ ಸಾರ್ವಜನಿಕರಿಗೆ ಅನಕೂಲವಾಗುತ್ತದೆ ಎಂದರು.
ಅಪರ ಜಿಲ್ಲಾಧಿಕಾರಿ ಡಾ. ಸುರೇಶ ಇಟ್ನಾಳ, ಜಿಲ್ಲಾ ಪಂಚಾಯಿತಿ ಸಿಇಓ ಡಾ. ಬಗಾದಿ ಗೌತಮ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here