ನಾಳೆ ಅಥವಾ ನಾಡಿದ್ದು ಖಾತೆ ಹಂಚಿಕೆ: ಬಿ.ಎಸ್.ಯಡಿಯೂರಪ್ಪ

0
3

ಬೆಂಗಳೂರು- ನೂತನ ಸಚಿವರಿಗೆ ನಾಳೆ ಅಥವಾ ನಾಡಿದ್ದು ಖಾತೆ ಹಂಚಿಕೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.
ನಗರದಲ್ಲಿರುವ ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಿ ಸ್ವಾಮೀಜಿಗಳ ಆಶೀರ್ವಾದ ಪಡೆದಿದ್ದೇನೆ. ಅಲ್ಲಿಂದ ವಿಧಾನಸೌಧಕ್ಕೆ ತೆರಳಿ ಹಲವು ಸಭೆಗಳಲ್ಲಿ ಭಾಗಿಯಾಗಲಿದ್ದೇನೆ ಎಂದು ತಿಳಿಸಿದರು.
ತುಮಕೂರಿನ ಸಿದ್ದಗಂಗಾ ಮಠಕ್ಕೆ ಹೋಗಬೇಕಾಗಿದೆ, ಸಾಧ್ಯವಾದರೆ ಇಂದೇ ಹೋಗುತ್ತೇನೆ, ಇಲ್ಲದಿದ್ದರೆ ನಾಳೆ ಭೇಟಿ ನೀಡಲಿದ್ದೇನೆ ಎಂದು ತಿಳಿಸಿದ ಅವರು, ನಾಳೆ ಅಥವಾ ನಾಡಿದ್ದು ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ನೂತನ ಸಚಿವ ಆರ್. ಅಶೋಕ್ ಸುದ್ದಿಗಾರರೊಂದಿಗೆ ಮಾತನಾಡಿ, ನಾಳೆಯೊಳಗೆ ಖಾತೆ ಹಂಚಿಕೆ ಆಗಬಹುದು. ಯಾರಿಗೆ ಯಾವ ಖಾತೆ ನೀಡಬೇಕು ಎಂಬುದು ಮುಖ್ಯಮಂತ್ರಿಗಳ ಪರಮಾಧಿಕಾರ ಎಂದರು.
ನಿನ್ನೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ನೂತನ ಸಚಿವರಿಗೆ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಅಧ್ಯಯನ ನಡೆಸುವಂತೆ ಮುಖ್ಯಮಂತ್ರಿ ಈಗಾಗಲೇ ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ಮತ್ತು ನಾಳೆ ನೂತನ ಸಚಿವರು ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಲಿದ್ದಾರೆ. ನೂತನ ಸಚಿವರಲ್ಲಿ ಮುಖ್ಯಮಂತ್ರಿಯಾದವರು, ಉಪಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದವರು ಹಾಗೂ ಅಪಾರ ಅನುಭವ ಹೊಂದಿರುವವರು ಕೂಡ ಇದ್ದಾರೆ. ಇವೆಲ್ಲವನ್ನೂ ಪರಿಗಣನೆಗೆ ತೆಗೆದುಕೊಂಡು ಯಡಿಯೂರಪ್ಪ ಖಾತೆ ಹಂಚಿಕೆ ಮಾಡಲು ನಿರ್ಧರಿಸಿದ್ದಾರೆ. ಪ್ರಮುಖ ಖಾತೆಯ ಮೇಲೆ ಹಿರಿಯರು ಕಣ್ಣಿಟ್ಟಿದ್ದರೂ ಯಾರು ಕೂಡ ಬಾಯ್ಬಿಟ್ಟು ಇಂತಹದೇ ಖಾತೆ ನೀಡಬೇಕು ಎಂಬ ಬೇಡಿಕೆ ಇಟ್ಟಿಲ್ಲ. ಈ ಹಿನ್ನೆಲೆಯಲ್ಲಿ ಖಾತೆ ಹಂಚಿಕೆ ಸುಗಮವಾಗಿ ನಡೆಯಲಿದೆ ಎಂಬ ವಿಶ್ವಾಸ ಯಡಿಯೂರಪ್ಪ ಅವರಿಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ನಿರ್ಮಲಾನಂದ ಸ್ವಾಮೀಜಿಯವರ ಆಶೀರ್ವಾದ:
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂದು ಬೆಳಗ್ಗೆ ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಿ ಡಾ.ನಿರ್ಮಲಾನಂದ ಸ್ವಾಮೀಜಿಯವರ ಆಶೀರ್ವಾದ ಪಡೆದರು. ಸ್ವಾಮೀಜಿಗಳಿಗೆ ಶಾಲು ಹೊದಿಸಿ ಫಲತಾಂಬೂಲ ನೀಡಿ ಗೌರವಿಸಿದರು.
ಸ್ವಾಮೀಜಿಯವರು ಕೂಡ ಮುಖ್ಯಮಂತ್ರಿಯವರಿಗೆ ಶಾಲು ಹೊದಿಸಿ ಅಭಿನಂದಿಸಿದರು.

ಸಚಿವರಾದ ಆರ್.ಅಶೋಕ್, ವಿ.ಸೋಮಣ್ಣ, ಡಾ.ಸಿ.ಎನ್. ಅಶ್ವಥನಾರಾಯಣ, ಬಸವರಾಜ ಬೊಮ್ಮಾಯಿ ಕೂಡ ಸ್ವಾಮೀಜಿಯವರ ಆಶೀರ್ವಾದ ಪಡೆದರು.

loading...