ನೀರು ಕೊಡಿ ಇಲ್ಲವೇ ದಯಾಮರಣ ನೀಡಿ

0
22

ಕನ್ನಡಮ್ಮ ಸುದ್ದಿ-ನರಗುಂದ: 38ನೇ ರೈತ ಹುತಾತ್ಮ ದಿನಾಚರಣೆ ನರಗುಂದ ಪಟ್ಟಣದಲ್ಲಿ ಶನಿವಾರ ಆಚರಿಸಲಾಯಿತು. ರೈತ ಹುತಾತ್ಮ ದಿನಾಚರಣೆ ನಿಮಿತ್ತ ಮಾರುಕಟ್ಟೆ ಪ್ರದೇಶಗಳನ್ನೂ ಹಾಗೂ ಬಸ್‌ ಸಂಚಾರ ಬಂದ್‌ ಮಾಡಿಸಬಹುದೆಂದು ಆತಂಕ ಸಾರ್ವಜನಿಕರನ್ನು ಕಾಡಿತ್ತು. ವಾಸ್ತವಿಕತೆಯಲ್ಲಿ ಮಾರುಕಟ್ಟೆಗಳಲ್ಲಿ ಎಂದಿನಂತೆ ಎಲ್ಲ ಅಂಗಡಿಗಳು ತೆರೆದು ವ್ಯಾಪಾರ ವಹಿವಾಟು ನಡೆಯಿತು. ಬ್ಯಾಂಕ್‌ಗಳು ಹಾಗೂ ಶಾಲಾ ಕಾಲೇಜುಗಳು ಎಂದಿನಂತೆ ಕಾರ್ಯನಿರ್ವಹಿಸಿದವು. ಮಧ್ಯದ ಅಂಗಡಿಗಳನ್ನು ಮಾತ್ರ ಜು. 20 ರ ರಾತ್ರಿ 12 ಗಂಟೆಯಿಂದ ಜು. 21 ರ ರಾತ್ರಿ 12 ಗಂಟೆಯವರೆಗೆ ತಹಸೀಲ್ದಾರರ ಆದೇಶದಂತೆ ಬಂದ್‌ ಮಾಡಲಾಗಿತ್ತು.
ಮಹದಾಯಿಗಾಗಿ ಮೂರು ವರ್ಷದಿಂದ ರೈತರು ಧರಣಿ ನಡೆಸಿದ ಸ್ಥಳದಲ್ಲಿಯೇ ಹುತಾತ್ಮ ರೈತರ ವೀರಗಲ್ಲು ಇದ್ದ ಪರಿಣಾಮ ಹುತಾತ್ಮ ದಿನಾಚರಣೆಗೆ ಆಗಮಿಸಿದ ಅನೇಕ ಸಂಘಟಣೆಗಳ ಸದಸ್ಯರು ಹುತಾತ್ಮರಿಗೆ ಶ್ರದ್ಧಾಂಜಲಿ ಅರ್ಪಿಸಿ ಧರಣಿಯಲ್ಲಿ ಭಾಗಿಗಳಾಗಿ ಮಹದಾಯಿ ಜಾರಿಗೊಳಿಸಲು ನಿರ್ಲಕ್ಷಮಾಡಿದ ಸರ್ಕಾರದ ನಡೆಗಳನ್ನು ಟೀಕೆಮಾಡಿದರು. ಒಂದೊಮ್ಮೆ ರೈತರು ಸಿಡಿದಿದ್ದರೆ ಯಾವ ಸರ್ಕಾರಗಳು ಉಳಿಯುವುದಿಲ್ಲವೆಂಬ ಎಚ್ಚರಿಕೆ ಸಂದೇಶವನ್ನೂ ಘೋಷಣೆಕೂಗುವ ಮೂಲಕ ಸರ್ಕಾರಕ್ಕೆ ತಲುಪಿಸುವಲ್ಲಿ ಯಶಸ್ವಿಯಾದರು.
ಮಹದಾಯಿಗಾಗಿ ಆಗ್ರಹಿಸಿ ನಡೆಸಿದ ಧರಣಿಗೆ ಸರ್ಕಾರಗಳು ಕವಡೆಕಾಸಿನ ಬೆಲೆ ನೀಡದ್ದರಿಂದ ರೈತರು ಕುಪಿತರಾಗಿ ಕಳೆದ ಒಂದು ವಾರದಿಂದ ದಯಾಮರಣವನ್ನಾದರೂ ದಯಪಾಲಿಸಿ ಎಂದು ರಾಷ್ಟ್ರಪತಿಗಳಿಗೆ ಮನವಿ ಬರೆಯುತ್ತಿರುವ ಕಾರ್ಯ ಶನಿವಾರ ಮುಂದುವರೆಸಿದ್ದರಿಂದ ಅನೇಕ ಸಂಘಟಣೆಯ ಸದಸ್ಯರು ಈ ಕಾರ್ಯದಲ್ಲಿ ಭಾಗಿಯಾಗಿ ದಯಾಮರಣ ನಮಗೂ ದಯಪಾಲಿಸಿ ಎಂದು ರಾಷ್ಟ್ರಪತಿಗಳಿಗೆ ಬರೆದ ಅರ್ಜಿಯನ್ನು ಅಂಚೆಪೆಟ್ಟಿಗೆಗೆ ಹಾಕಿದರು.
ಮಹದಾಯಿಗಾಗಿ ಆಗ್ರಹಿಸಿ ಕುಂದಗೋಳದಿಂದ ಬಸಯ್ಯ ಅಜ್ಜನವರ ನೇತೃತ್ವದಲ್ಲಿ ನರಗುಂದಕ್ಕೆ ಪಾದಯಾತ್ರೆ ನಡೆಸಿದ್ದ ರೈತ ಸಂಘಟಣೆಯವರು ಶನಿವಾರ ಮಧ್ಯಾಹ್ನ 12 ಗಂಟೆಗೆ ನರಗುಂದ ಪಟ್ಟಣ ತಲುಪಿ ರೈತರು ಮಹದಾಯಿಗಾಗಿ ನಡೆಸಿದ ಧರಣಿಯಲ್ಲಿ ಭಾಗಿಯಾಗಿ ದಯಾಮರಣಕ್ಕೆ ಅರ್ಜಿ ಬರೆದು ಹಾಕಿ ಧರಣಿಗೆ ಬೆಂಬಲಿಸಿದರು.
ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಕೆ.ಜಿ. ಶಾಂತಸ್ವಾಮಿಮಠ ಹಾಗೂ ರೈತ ಸೇನಾ ಕರ್ನಾಟಕ ರಾಜ್ಯಾಧ್ಯಕ್ಷ ವಿರೇಶಸ್ವಾಮಿ ಸೊಬರದಮಠ, ದರ್ಶನ ಪುಟ್ಟಣಯ್ಯ, ಶಶಿಕಾಂತ ಬಡಂರ್‌ಗಲ್‌, ಬಸಮ್ಮ ಐನಾಪೂರ ಮಾತನಾಡಿದರು.
ಅನಸಮ್ಮ ಮಠಾರೆ, ರಸೂಲಸಾಬ ತಹಸೀಲ್ದಾರ, ವಿ.ಕೆ. ಗುಡಿಸಾಗರ, ಗುರಣ್ಣಾ ಗಾಣಿಗೇರ, ಮಹದೇವಗೌಡ ಪಾಟೀಲ, ಮುತ್ತುನಗೌಡ ಚೌಡರಡ್ಡಿ, ಹನುಮಂತ ಹುಲ್ಲೂರ, ಬಸನಗೌಡ ದಾಡ್ನಿ, ಈರಬಸಪ್ಪ ಹೂಗಾರ, ಪರಶುರಾಮ ಜಂಬಗಿ, ರಮೇಶ ನಾಯ್ಕರ್‌, ಎಸ್‌.ಬಿ. ಜೋಗಣ್ಣವರ, ಮಲ್ಲನಗೌಡ ತುಂಬದ, ವಾಸು ಚವ್ಹಾಣ, ಹನುಮಂತ ಸರನಾಯ್ಕರ್‌, ಈರಣ್ಣ ಸೊಪ್ಪಿನ, ಮಾಲಿಂಗಪ್ಪ ಆವಾರಿ, ಅನಸಮ್ಮ ಶಿಂಧೆ, ಚನ್ನಮ್ಮ ಕರ್ಜಗಿ, ನಾಗರತ್ನಾ ಸವಳಬಾವಿ, ಲಚ್ಚೆಮ್ಮ ಜ್ಯೋತೆಣ್ಣವರ ಅನೇಕ ರೈತ ಮುಖಂಡರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸುಮಾರು ನಾನೂರು ಮಹಿಳೆಯರು ಹಾಗೂ ರೈತರು ಪಾಲ್ಗೊಂಡಿದ್ದರು.

loading...