ನೀರು ಪೂರೈಸಲು ಅಗತ್ಯ ಕ್ರಮಕೈಗೊಳ್ಳಿ: ಶಾಸಕ ಬಂಡಿ

0
35

ಕನ್ನಡಮ್ಮ ಸುದ್ದಿ-ಗಜೇಂದ್ರಗಡ: ಗಜೇಂದ್ರಗಡ ಪುರಸಭೆ ವ್ಯಾಪ್ತಿಯಲ್ಲಿ ಈಗಾಗಲೇ 15 ರಿಂದ 20 ದಿನಗಳಿಗೊಮ್ಮೆ ಕುಡಿಯುವ ನೀರನ್ನು ಪೂರೈಸುತ್ತಿದ್ದೀರಿ. ಪರಿಣಾಮ ಸಾರ್ವಜನಿಕರು ಪ್ರತಿನಿತ್ಯವೂ ನೀರಿಗಾಗಿ ಪರದಾಡುತ್ತಿದ್ದಾರೆ. ಹೀಗಾಗಿ ಪಟ್ಟಣದಲ್ಲಿ ಕನಿಷ್ಠ 2-3 ದಿನಗಳಿಗೊಮ್ಮೆ ನೀರು ಪೂರೈಸಲು ಬೇಕಾದ ಎಲ್ಲ ಅಗತ್ಯ ಕ್ರಮಗಳನ್ನು ಸಿದ್ದಪಡಿಸಿಕೊಳ್ಳಿ ಎಂದು ಶಾಸಕ ಕಳಕಪ್ಪ ಬಂಡಿ ಅಧಿಕಾರಿಗಳಿಗೆ ಹೇಳಿದರು.

ಪಟ್ಟಣದ ಪುರಸಭೆ ಸಭಾ ಭವನದಲ್ಲಿ ಶನಿವಾರ ನಡೆದ ಪಟ್ಟಣದ ಕುಡಿಯುವ ನೀರಿನ ಸಮಸ್ಯೆ ಕುರಿತು ತುರ್ತುಸಭೆ ಹಾಗೂ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
ಪಟ್ಟಣದಲ್ಲಿನ ಸಾರ್ವಜನಿಕರು ಸಮಸ್ಯೆಗಳನ್ನು ಪುರಸಭೆ ಸದಸ್ಯರ ಹಾಗೂ ಹೊತ್ತು ಮುಖ್ಯಾಧಿಕಾರಿ ಕಚೇರಿಗೆ ಬಂದು ಪ್ರತಿಭಟಿಸುವ ಮಟ್ಟಿಗೆ ಸಮಸ್ಯೆ ಉಲ್ಬಣವಾಗಲು ಕೆಲ ಅಧಿಕಾರಿಗಳು ತಮ್ಮ ಕರ್ತವ್ಯವನ್ನು ಸಮರ್ಪಕವಾಗಿ ನಿರ್ವಹಿಸಿಲ್ಲ ಎಂದರ್ಥ. ಹೀಗಾಗಿ ಪ್ರತಿಯೊಂದು ಮನೆಗೆ ಪುರಸಭೆ ವತಿಯಿಂದ ಕ್ಯಾಲೆಂಡರ್ ವಿತರಿಸಿ. ಅದರಲ್ಲಿ ಆಯಾ ವಾರ್ಡಿನ ನೀರು ಸರಬರಾಜು, ಆರೋಗ್ಯ ಹಾಗೂ ಸ್ವಚ್ಚತಾ ಮೇಲ್ವಿಚಾರಕರ ಅಧಿಕಾರಿಯ ದೂರವಾಣಿ ಸಂಖ್ಯೆ ಕಡ್ಡಾಯವಾಗಿ ಹಾಕಿಸಲು ಮುಂದಾಗಿ ಎಂದ ಅವರು, ಪುರಸಭೆಯಲ್ಲಿ ಕೆಲಸ ನಿರ್ವಹಿಸುವ ಪ್ರತಿಯೊಬ್ಬ ಅಧಿಕಾರಿಗಳು ಮೌಖಿಕವಾಗಿ ಉನ್ನತ ಅಧಿಕಾರಿಗಳಿಗೆ ಮನವಿ ಮಾಡುವ ಬದಲಿಗೆ ಲಿಖಿತವಾಗಿ ಬರೆದು ಸಮಸ್ಯೆಯನ್ನು ಬೆಳಕಿಗೆ ತರಲು ಮುಂದಾಗಿ ಅಂದಾಗ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾದ್ಯವಿದೆ. ಆದರೆ ಸಮಸ್ಯೆ ಹೊತ್ತು ಬರುವ ಜನರ ಕೆಲಸ ಮಾಡಿಕೊಡಲು ಹಣ ಕೇಳುವುದು ಅಥವಾ ವಿಳಂಭ ನೀತಿ ಅನುಸರಿಸುವ ಅಧಿಕಾರಿಗಳ ಮೇಲೆ ಮುಲಾಜಿಲ್ಲದೆ ಕಾನೂನಿನ ಕ್ರಮಗಳನ್ನು ಕೈಗೊಳ್ಳಲು ತಾಲೂಕಾಡಳಿತ ಹಿಂದೇಟು ಹಾಕುವುದಿಲ್ಲ ಎಂದು ಎಚ್ಚರಿಸಿದರು.

ಸಮಸ್ಯೆ ಹೊತ್ತು ಕಚೇರಿಗಳಿಗೆ ಬರುವ ಸಾರ್ವಜನಿಕರಿಗೆ ಆಸನದಲ್ಲಿ ಕುಳಿತು ಮಾತನಾಡಿಸುವ ಶೈಲಿಯನ್ನು ಮೊದಲು ರೂಢಿಸಿಕೊಳ್ಳಿ. ಅಲ್ಲದೆ ಜನಪ್ರತಿನಿಧಿಗಳು ಹೇಳುವ ಕಾನೂನು ಬದ್ಧ ಕೆಲಸಗಳನ್ನು ತಕ್ಷಣದಲ್ಲಿಯೇ ಮಾಡಿಕೊಡುವ ಹವ್ಯಾಸವನ್ನು ಬೆಳಸಿಕೊಳ್ಳಿ. ಪರಿಸರ ರಕ್ಷಣೆ ಹಾಗೂ ಅಂರ್ತಜಲ ಮಟ್ಟ ಹೆಚ್ಚಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಅಧಿಕಾರಿಗಳು ಮುಂದಾಗಿ ಎಂದ ಅವರು, ರೋಣ ಮತಕ್ಷೇತ್ರ ಹಾಗೂ ಗಜೇಂದ್ರಗಡ ಪಟ್ಟಣದ ಸರ್ವಾಂಗೀಣ ಅಭಿವೃದ್ಧಿಗೆ ನೀಲ ನಕ್ಷೆಯನ್ನು ಸಿದ್ಧಪಡಿಸಲಾಗುತ್ತಿದೆ. ಹೀಗಾಗಿ ತಾಲೂಕಿನ ಎಲ್ಲ ಅಧಿಕಾರಿಗಳು ಸರ್ಕಾರದ ಸಮಯ ಮೀರಿ ಕೆಲಸವನ್ನು ಮಾಡುವ ಮೂಲಕ ಜಿಲ್ಲೆಯಲ್ಲಿ ರೋಣ ತಾಲೂಕನ್ನು ಮಾದರಿ ಮತಕ್ಷೇತ್ರವನ್ನಾಗಿ ಮಾಡಲು ಶ್ರಮಿಸೋಣ ಎಂದರು.
ಈ ಸಂಧರ್ಭದಲ್ಲಿ ಪುರಸಭೆ ಉಪಧ್ಯಕ್ಷ ಷಣ್ಮುಖಪ್ಪ ಚಿಲ್‍ಝರಿ, ಸ್ಥಾಯಿ ಕಮೀಟಿ ಚೇರಮನ್ ಪ್ರಭು ಚವಡಿ, ಸದಸ್ಯರಾದ ಅಶೋಕ ವನ್ನಾಲ, ರವಿ ಕಲಾಲ, ಮಂಜುನಾಥ ಬಡಿಗೇರ, ವಿಜಯಲಕ್ಷ್ಮಿ ಚೆಟ್ಟರ, ಸುಮಿತ್ರಾ ತೊಂಡಿಹಾಳ, ಮುಖ್ಯಾಧಿಕಾರಿ ಹನಮಂತಮ್ಮ ನಾಯಕ, ಹೆಸ್ಕಾಂ ಅಭಿಯಂತರ ವಿರೇಶ ರಾಜೂರು, ಸಿ.ವಿ.ಕುಲಕರ್ಣಿ, ಬಸವರಾಜ ಬಳಗಾನೂರು, ಬಸವರಾಜ ಇಂಡಿ, ಸಿ.ಎಸ್.ನಾವಳ್ಳಿ, ಎಂ.ಬಿ.ಒಂಟಿ, ಪಿ.ಎನ್.ದೊಡ್ಡಮನಿ ಸೇರಿ ಇತರ ಅಧಿಕಾರಿಗಳು ಇದ್ದರು.

loading...